ಬುಧವಾರ, ಜೂಲೈ 8, 2020
22 °C

ಜಾನಪದ ಸಮ್ಮೇಳನಕ್ಕೆ ಆರಂಭದಲ್ಲೇ ಅಪಸ್ವರ

ಪ್ರಜಾವಾಣಿ ವಾರ್ತೆ / ದೇವು ಪತ್ತಾರ Updated:

ಅಕ್ಷರ ಗಾತ್ರ : | |

ಜಾನಪದ ಸಮ್ಮೇಳನಕ್ಕೆ ಆರಂಭದಲ್ಲೇ ಅಪಸ್ವರ

ಬೀದರ್: ಕರ್ನಾಟಕ ಜಾನಪದ ಅಕಾಡೆಮಿಯು ಇದೇ ಮೊದಲ ಬಾರಿಗೆ ಆಯೋಜಿಸಲು ಉದ್ದೇಶಿ ಸಿರುವ ಅಖಿಲ ಭಾರತ ಮೊದಲ ಜಾನಪದ ಸಮ್ಮೇಳನ ನಡೆಸುವ ಸ್ಥಳದ ಆಯ್ಕೆಯು ವಿವಾದಕ್ಕೆ ಕಾರಣವಾಗಿದೆ.ನಡುಬೇಸಿಗೆಯ ಏಪ್ರಿಲ್ 23ರಿಂದ ಮೂರು ದಿನಗಳ ಸಮ್ಮೇಳನವನ್ನು ನಗರದ ಮಧ್ಯ ಭಾಗದಲ್ಲಿ ಇರುವ ನೆಹರೂ ಕ್ರೀಡಾಂಗಣದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಿಂತ ಹೆಚ್ಚು ಜನ ಬರುವ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ ನೆಹರೂ ಮೈದಾನದಲ್ಲಿ ಲಭ್ಯವಿರುವ ಸ್ಥಳಾವಕಾಶ ಸಾಲದು ಎಂಬ ಅಭಿಪ್ರಾಯ ಕೇಳಿಬರುತ್ತಿದೆ.2006ರ ಜನವರಿಯಲ್ಲಿ ಅಖಿಲ ಭಾರತ 72ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿಯೇ ನೆಹರೂ ಮೈದಾನದ ಸ್ಥಳ ಸಾಕಾಗುವುದಿಲ್ಲ ಎಂಬ ಚರ್ಚೆ ನಡೆದಿತ್ತು. ನಂತರ ಇದೇ ಕಾರಣಕ್ಕಾಗಿ ಸಮ್ಮೇಳನವನ್ನು ನಗರದ ಬಿ.ವಿ.ಬಿ. ಕಾಲೇಜು ಮೈದಾನದಲ್ಲಿ ಏರ್ಪಡಿಸಲಾಗಿತ್ತು.ದೇಶದ ಎಲ್ಲ 25 ರಾಜ್ಯಗಳಿಂದ ತಲಾ ಎರಡೆ ರಡು ಜಾನಪದ ಕಲಾತಂಡಗಳು ಭಾಗವಹಿ ಸಲಿವೆ. ಸುಮಾರು ಮೂರು ಸಾವಿರಕ್ಕೂ ಹೆಚ್ಚು ಜಾನಪದ ಕಲಾವಿದರು ಹಾಗೂ ಸಾವಿರಕ್ಕೂ ಹೆಚ್ಚು ಜನ ವಿದ್ವಾಂಸರು ಭಾಗವಹಿಸಲಿದ್ದಾರೆ. ಸಮ್ಮೇಳನಕ್ಕೆ ಪ್ರತಿದಿನ 50 ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸುವ ನಿರೀಕ್ಷೆ ಇದೆ. ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಜನ ಆಗಮಿಸುವ ನಿರೀಕ್ಷೆ ಇರುವ ಸಮ್ಮೇಳನವನ್ನು ಕೇವಲ 400 ಚದರ ಮೀಟರ್ ಇರುವ ಸ್ಥಳದಲ್ಲಿ ನಡೆಸುವುದು ಹೇಗೆ ಸಾಧ್ಯ ಎಂಬ ಪ್ರಶ್ನೆ  ಕಲಾಸಕ್ತರದ್ದು.300ಕ್ಕೂ ಹೆಚ್ಚು ಪುಸ್ತಕ ಮತ್ತು ವಾಣಿಜ್ಯ ಮಳಿಗೆಗಳನ್ನು ತೆರೆಯುವುದಾಗಿ ಸ್ವಾಗತಸಮಿತಿ ಪ್ರಕಟಿಸಿದೆ. ಅಷ್ಟೊಂದು ಪ್ರಮಾಣದ ಮಳಿಗೆ ಹಾಕಲು ಸ್ಥಳವಾದರೂ ಎಲ್ಲಿದೆ? ಕ್ರೀಡಾಂಗಣದ ಒಳಭಾಗದಲ್ಲಿ ಮುಖ್ಯವೇದಿಕೆ ನಿರ್ಮಿಸಿದ ನಂತರ ಸ್ಥಳಾವಕಾಶವೇ ಉಳಿಯುವುದಿಲ್ಲ. ಮಳಿಗೆಗಳನ್ನು ಕ್ರೀಡಾಂಗಣದ ಹೊರಭಾಗದಲ್ಲಿ ಆರಂಭಿಸಲಾಗು ತ್ತದೆ ಎಂಬ ಸಬೂಬು ಆಯೋಜಕರಿಂದ ಕೇಳಿ ಬರುತ್ತಿದೆ.ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವದ ಸಂದರ್ಭದಲ್ಲಿಯೇ ಗಣ್ಯರ, ಆಹ್ವಾನಿತರ ವಾಹನ ನಿಲ್ಲಿಸಲು ಅವಕಾಶ ಕಲ್ಪಿಸುವುದಕ್ಕಾಗಿ ಪೊಲೀಸರು ಪರದಾಟ ನಡೆಸುವ ಸ್ಥಿತಿ ಇರುತ್ತದೆ. ಅಂತಹದ್ದರಲ್ಲಿ ಸಮ್ಮೇಳನದಂತಹ ವಿಶೇಷ ಸಂದರ್ಭದಲ್ಲಿ ವಾಹನಗಳ ಪಾರ್ಕಿಂಗ್ ದೊಡ್ಡ ಸಮಸ್ಯೆ ಆಗಲಿದೆ ಎಂಬುದು ಪೊಲೀಸ್ ಅಧಿಕಾರಿಗಳ ಅನಿಸಿಕೆ. ಮುಖ್ಯಮಂತ್ರಿಗಳೇ ಸ್ವಾಗತ ಸಮಿತಿಯ ಗೌರವ ಅಧ್ಯಕ್ಷರಾಗಿರುವ, ಸಾವಿರಾರು ಜನ ಆಗಮಿಸುವ ನಿರೀಕ್ಷೆ ಇರುವ ಸಮ್ಮೇಳನ ನೆಹರು ಕ್ರೀಡಾಂಗಣದಲ್ಲಿ ನಡೆಸಲು ಉದ್ದೇಶಿಸಿರುವುದು ಸೋಜಿಗದ ಸಂಗತಿ ಎನ್ನುತ್ತಾರೆ ಹಿರಿಯ ಜಾನಪದ ವಿದ್ವಾಂಸ ಡಾ. ಬಸವರಾಜ ಮಲಶೆಟ್ಟಿ.ಕ್ರೀಡಾಂಗಣದ ಒಳಗಡೆ ವೇದಿಕೆ ನಿರ್ಮಿಸಿದ ನಂತರ ಹೊರಗಡೆ ಅಂದರೆ ರಸ್ತೆಯ ಇಕ್ಕೆಲಗಳಲ್ಲಿ ಮಳಿಗೆ  ಆರಂಭಿಸಬಹುದು ಎಂಬ ವಾದವನ್ನು ಒಪ್ಪಿದರೂ ಪಾರ್ಕಿಂಗ್ ಸಮಸ್ಯೆಯ ಜೊತೆಗೆ ಅತಿಥಿ, ಆಹ್ವಾನಿತರಿಗೆ ಊಟೋಪಚಾರದ ವ್ಯವಸ್ಥೆ ಕಲ್ಪಿಸಲು ಸ್ಥಳ ಎಲ್ಲಿ ಮಾಡಲಾಗುತ್ತದೆ? ಎಂದು ಪ್ರಶ್ನಿಸುತ್ತಾರೆ.ಮೊದಲ ಬಾರಿಗೆ ನಡೆಸಲಾಗುತ್ತಿರುವ ಸಮ್ಮೇಳನದ ಬಗ್ಗೆ ಸಹಜವಾಗಿಯೇ ಬಹಳಷ್ಟು ನಿರೀಕ್ಷೆಗಳಿರುತ್ತವೆ. ನಗರದ ಹೊರವಲಯದಲ್ಲಿ ಅಥವಾ ಬೃಹತ್ ಖಾಲಿ ಮೈದಾನದಲ್ಲಿ ವೇದಿಕೆ ನಿರ್ಮಿಸಿ ಸಮ್ಮೇಳನ ನಡೆಸುವುದು ಸೂಕ್ತ. ಇದರಿಂದಾಗಿ ಚರ್ಚೆ, ಜಾನಪದ ಕಾರ್ಯಕ್ರಮ  ಅಕ್ಕಪಕ್ಕದಲ್ಲಿಯೇ ನಡೆಸಬಹುದು. ಹಾಗೆಯೇ ವಾಹನಗಳ ಪಾರ್ಕಿಂಗ್, ಉಟೋಪಚಾರದ ವ್ಯವಸ್ಥೆಗೂ ಧಕ್ಕೆ ಆಗುವುದಿಲ್ಲ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.