ಶುಕ್ರವಾರ, ಮೇ 14, 2021
29 °C

ಜಾಮೀನು: ಹೈಕೋರ್ಟ್ ಗೆ ದರ್ಶನ್ ಮೊರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ನಾನೇನೂ ತಪ್ಪು ಮಾಡಿಲ್ಲ. ನನ್ನ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿಲ್ಲ. ಆಕೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಕೃತ್ಯವನ್ನೂ ಎಸಗಿಲ್ಲ. ಆಕೆಯ ಮೇಲೆ ಎಂದಿಗೂ ತೀವ್ರ ಹಲ್ಲೆ ನಡೆಸಿಲ್ಲ. ಪರವಾನಗಿ ಪಿಸ್ತೂಲ್‌ನಿಂದ ಬೆದರಿಕೆಯನ್ನೂ ಹಾಕಿಲ್ಲ. ದಯವಿಟ್ಟು ನನಗೆ ಜಾಮೀನು ನೀಡಿ...~- ಹೀಗೆಂದು ಚಿತ್ರನಟ ದರ್ಶನ್ ಹೈಕೋರ್ಟ್ ಅನ್ನು ಕೋರಿದ್ದಾರೆ. ಪತ್ನಿ ಮೇಲೆ ತೀವ್ರ ಹಲ್ಲೆ ನಡೆಸಿರುವ ಆರೋಪದ ಮೇಲೆ ಅಧೀನ ಕೋರ್ಟ್‌ಗಳಲ್ಲಿ ಜಾಮೀನು ಸಿಗದೆ ಜೈಲಿನಲ್ಲಿ ಇರುವ ಅವರು, ಜಾಮೀನು ಕೋರಿ ಬುಧವಾರ ಹೈಕೋರ್ಟ್ ಮೊರೆ ಹೋಗಿದ್ದಾರೆ.ತಾವು ಜೀವಾವಧಿ ಶಿಕ್ಷೆ ಅಥವಾ ಗಲ್ಲುಶಿಕ್ಷೆಗೆ ಒಳಗಾಗುವಂತಹ ಆರೋಪ ಎಸಗಿಲ್ಲ. ಬೆಂಗಳೂರಿನಲ್ಲಿಯೇ ಚರಾಸ್ತಿ, ಸ್ಥಿರಾಸ್ತಿಗಳು ಇರುವ ಹಿನ್ನೆಲೆಯಲ್ಲಿ ಎಲ್ಲಿಯೂ ಓಡಿ ಹೋಗುವುದಿಲ್ಲ ಎಂದು ಹೇಳಿದ್ದಾರೆ.ತಮ್ಮ ಮೇಲೆ ಹಲವು ಚಿತ್ರ ನಿರ್ಮಾಪಕರು ಕೋಟ್ಯಂತರ ರೂಪಾಯಿ ಬಂಡವಾಳ ಹಾಕಿದ್ದು ಜಾಮೀನು ಸಿಗದೇ ಹೋದರೆ ಅವರಿಗೆ ತೊಂದರೆ ಆಗಲಿದೆ. ಗೌರವಾನ್ವಿತ ಕುಟುಂಬದಿಂದ ಬಂದಿದ್ದು, ಅಪಾರ ಅಭಿಮಾನಿಗಳನ್ನು ಹೊಂದಿರುವ ಕಾರಣ ಜಾಮೀನು ನೀಡಿದರೆ ಸಾಕ್ಷ್ಯಗಳನ್ನು ನಾಶಪಡಿಸುವುದಿಲ್ಲ ಎಂದು ಅರ್ಜಿಯಲ್ಲಿ ಅವರು ತಿಳಿಸಿದ್ದಾರೆ.ಗುರುವಾರ ಅವರ ಅರ್ಜಿಯು ನ್ಯಾಯಮೂರ್ತಿ ಬಿ.ವಿ.ಪಿಂಟೋ ಅವರ ಮುಂದೆ ವಿಚಾರಣೆಗೆ ಬರಲಿದೆ.ನಟನ ವಾದ ನಂಬುವುದು ಕಷ್ಟ...

ದರ್ಶನ್ ಅವರಿಗೆ ಜಾಮೀನು ನೀಡಲು ನಿರಾಕರಿಸಿದ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಆರ್.ಬಿ.ಬೂದಿಹಾಳ್ ಅವರು ಹೇಳಿರುವುದು ಹೀಗೆ.. `ಪತ್ನಿ ಹಾಗೂ ಮಗುವಿನ ಕೊಲೆ ಮಾಡಲು ಎಂದಿಗೂ ಪ್ರಯತ್ನಿಸಿಲ್ಲ ಎಂಬುದು ದರ್ಶನ್ ವಾದ. ಆದರೆ ಇದನ್ನು ನಂಬುವುದು ಕಷ್ಟ. ಅವರ ಮೂರು ವರ್ಷದ ಮಗುವಿನ ಮೈಮೇಲಾದ ಗಾಯದ ಗುರುತುಗಳ ವೈದ್ಯಕೀಯ ಪ್ರಮಾಣ ಪತ್ರ ಪರಿಶೀಲಿಸಿದ್ದೇನೆ. ಗಾಯಗಳು ಚಿಕ್ಕದು ಇರಬಹುದು. ಅಂದಮಾತ್ರಕ್ಕೆ ಆತನನ್ನು ಕ್ಲ್ಲೊಲುವುದು ಆರೋಪಿಯ ಉದ್ದೇಶವಲ್ಲ ಎಂಬ ವಾದ ನಂಬುವುದು ಕಷ್ಟ.`ಕಾರಣ, ಇಂತಹ ಪ್ರಕರಣಗಳಲ್ಲಿ ಕೊಲೆ ಮಾಡಲು ಆರೋಪಿ ಮುಂದಾದರೆ ಯಾರಾದರೂ ಮಧ್ಯೆ ಪ್ರವೇಶ ಮಾಡಿ ಅದನ್ನು ತಪ್ಪಿಸುವ ಸಾಧ್ಯತೆಗಳೇ ಹೆಚ್ಚು. ಈ ಹಿನ್ನೆಲೆಯಲ್ಲಿ ಭಾರತೀಯ ದಂಡ ಸಂಹಿತೆಯ 307ನೇ ಕಲಮು (ಕೊಲೆ ಯತ್ನ) ಈ ಪ್ರಕರಣಕ್ಕೆ ಅನ್ವಯ ಆಗುತ್ತದೆ.`ಇನ್ನು, ಪತಿಯ ವಿರುದ್ಧ ಇರುವ ಹೇಳಿಕೆಗಳಿಗೆ ಮಾನಸಿಕ ಒತ್ತಡಕ್ಕೆ ಒಳಗಾಗಿ ಸಹಿ ಹಾಕಿರುವುದಾಗಿ ವಿಜಯಲಕ್ಷ್ಮಿ ಹೇಳಿದ್ದಾರೆ. ಆದರೆ ಇದನ್ನು ಕೋರ್ಟ್ ನಂಬದು. ಏಕೆಂದರೆ ವಿಜಯಲಕ್ಷ್ಮಿ ಅನಕ್ಷರಸ್ಥೆ ಅಲ್ಲ. ಬಿ.ಇ. ಪದವೀಧರರು. `ವಿಜಯಲಕ್ಷ್ಮಿ ಅವರ ಮುಖಕ್ಕೂ ಸೇರಿದಂತೆ ಅನೇಕ ಕಡೆ ಸಿಗರೆಟ್‌ನಿಂದ ಚುಚ್ಚಿರುವುದು ಅಮಾನವೀಯ ಕೃತ್ಯ. ಇವರು ಪ್ರಸಿದ್ಧ ನಟರಾಗಿರುವ ಕಾರಣ, ಇಂಥವರಿಗೆ ಜಾಮೀನು ನೀಡಿದರೆ ಅದು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಜಾಮೀನು ನೀಡಲಾಗದು~.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.