ಶನಿವಾರ, ಜೂನ್ 19, 2021
23 °C
ಹೋರಾಟಕ್ಕೆ ಕಬ್ಬು ಬೆಳೆಗಾರರ ನಿರ್ಧಾರ

ಜಾರಿಯಾಗದ ಸರ್ಕಾರದ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ರಾಜ್ಯ ಸರ್ಕಾರ ಪ್ರತಿ ಟನ್ ಕಬ್ಬಿಗೆ ₨ 2650 ನಿಗದಿಪಡಿಸಿದ್ದರೂ, ಸಚಿವರಿಗೆ ಸೇರಿದ ಕಾರ್ಖಾನೆಗಳಿಂದಲೇ ಕೇವಲ ₨ 2000 ನೀಡಲಾಗುತ್ತಿದೆ. ಕೂಡಲೇ ಸರ್ಕಾರ ಈ ಬಗ್ಗೆ ಕ್ರಮ ಜರುಗಿಸದಿದ್ದರೆ ಉಗ್ರ ಹೋರಾಟ ನಡೆಸಲು ಉತ್ತರ ಕರ್ನಾಟಕದ ಕಬ್ಬು ಬೆಳೆಗಾರರ ಸಂಘ ನಿರ್ಧರಿಸಿದೆ.ಸಂಘದ ಪ್ರಮುಖರಾದ ಮಲ್ಲಯ್ಯ ಸಾರಂಗಮಠ, ಶಿವಾನಂದ ಗುರುಮಠ, ಗುಂಡಪ್ಪ ಕಮತೆ, ಪ್ರೊ. ಟಿ.ಟಿ.ಮುರಕಟ್ನಾಳ ಸೇರಿದಂತೆ ಇತರರು ಸೋಮವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯ ಸರ್ಕಾರದ ಕಬ್ಬಿನ ದರ ನೀತಿ ಹಾಸ್ಯಾಸ್ಪದ ಎನಿಸಿದೆ, ಸರ್ಕಾರ ನಿಗದಿಪಡಿಸಿದ ದರ ಹಾಗೂ ಬಿಲ್ ಕೊಡುವ ಸಮಯವನ್ನು ಸ್ವತಃ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರೇ ಪಾಲಿಸಿಲ್ಲ, ಇನ್ನು ಇತರ ಕಾರ್ಖಾನೆಗಳನ್ನು ನಿಯಂತ್ರಿಸುವ ಹಕ್ಕು ಈ ಸರ್ಕಾರಕ್ಕೆ ಉಳಿದಿಲ್ಲ’ ಎಂದರು.ರಾಜ್ಯ ಸರ್ಕಾರ ನಿಗದಿಪಡಿಸಿದ ₨ 2650 ಹಾಗೂ ಕಬ್ಬು ಕಳಿಸಿದ 15 ದಿನಗಳಲ್ಲಿ ನೀಡಲಾಗದಿರುವ ಬಿಲ್‌ನ ಹಣ ಹಾಗೂ ಬಡ್ಡಿಯನ್ನು ತಕ್ಷಣ ರೈತರ ಖಾತೆಗೆ ಜಮಾ ಮಾಡದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಕ್ಕರೆ ಸಚಿವ ಪ್ರಕಾಶ ಹುಕ್ಕೇರಿ ಅವರಿಗೆ ಘೇರಾವ್‌ ಹಾಕಲಾಗುವುದು. ಅವರ ಮನೆಗಳ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದಾಗಿ ತಿಳಿಸಿದರು.ಕಬ್ಬಿನ ವಿಷಯದಲ್ಲಿ ರಾಜ್ಯ ಸರ್ಕಾರದಿಂದ ರೈತರಿಗೆ ಅನ್ಯಾಯವಾ ಗಿದೆ. ಸರ್ಕಾರದ ಯೋಜನೆಗಳು ಸಕ್ಕರೆ ಕಾರ್ಖಾನೆಗಳನ್ನು ಹಾಗೂ ಆಡಳಿತ ಮಂಡಳಿಗಳನ್ನು ಬೆಳೆಸಲು ಪೂರಕವಾ ಗಿವೆ ಹೊರತು ರೈತರಿಗೆ ಇಲ್ಲ ಎಂದು ಆರೋಪಿಸಿದರು.ಪ್ರತಿ ಟನ್ ಕಬ್ಬಿಗೆ ₨1800- ದಿಂದ ₨ 2000 ಮಾತ್ರ ನೀಡಲಾಗುತ್ತಿದೆ. ಬೀದರ ಕಾರ್ಖಾನೆ ₨ 1650 ನೀಡಿದೆ ಎಂದು ದೂರಿದ ಅವರು, ಕಬ್ಬು ಕಳಿಸಿ ಎರಡೆರಡು ತಿಂಗಳಾದರೂ ಇನ್ನೂವರೆಗೆ ಬಿಲ್ ಜಮಾ ಮಾಡಿಲ್ಲ. ಕಬ್ಬಿನ ತೂಕದಲ್ಲಿ ಶೆ. 13 ರಿಂದ 20 ರಷ್ಟು ಕಡಿತ ಮಾಡಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಕಳೆದ ವರ್ಷ ಕಬ್ಬಿನ ತೂಕದ ಬಗ್ಗೆ ಹೆಚ್ಚಿನ ಪ್ರಚಾರ ಪಡೆದಿದ್ದರು. ಈ ವರ್ಷ ತೂಕದಲ್ಲಿಯ ಮೋಸದ ಬಗ್ಗೆ ಮಾತನಾಡುವದೇ ಇಲ್ಲ. ಎಲ್ಲ ಕಾರ್ಖಾನೆಯವರು ರೈತರ ವಿರುದ್ಧ ಒಂದಾಗಿದ್ದಾರೆ ಎಂದು ಆಪಾದಿಸಿದರು.ಸಕ್ಕರೆ ಇಳುವರಿ ಪ್ರಮಾಣ ಶೇ. 10ಕ್ಕಿಂತ ಹೆಚ್ಚಾಗಿದ್ದರೂ ಅದನ್ನು ಕಡಿಮೆ ಎಂದು ತೋರಿಸಲಾಗುತ್ತಿರುವುದು ವ್ಯತಿರಿಕ್ತ ಕೊಡುಗೆಯಾಗಿದೆ, ಸರ್ಕಾರ ಮತ್ತು ಮಂತ್ರಿಗಳು ಚುನಾವಣೆ ಪ್ರಚಾರ ಮಾಡುತ್ತಾರೆ ಹೊರತು ಕಬ್ಬಿಗೆ ನ್ಯಾಯವಾದ ದರದ ಬಗ್ಗೆ ಮಾತನಾಡುವದೇ ಇಲ್ಲ ಎಂದರು.ಪಕ್ಕದ ರಾಜ್ಯಗಳಿಗೆ ಹೋಗುವ ಕಬ್ಬಿಗೂ ಸರ್ಕಾರದ ₨ 150 ಸಹಾಯ ಧನದ ಪ್ರಯೋಜನ ದೊರಕಬೇಕು. ಕಬ್ಬು ಬೆಳೆಗಾರರ ಸಮಸ್ಯೆ ಹಾಗೂ ಬೇಡಕೆಗಳನ್ನು ತಕ್ಷಣ ಪರಿಶೀಲಿಸಿ ಅನ್ಯಾಯವಾಗುತ್ತಿರುವದನ್ನು ಸರಿಪಡಿಸಬೇಕು. ಏಳು ದಿನಗಳೊಳಗೆ ಬೇಡಿಕೆ ಈಡೇರದಿದ್ದರೆ ಸಚಿವರ ಮನೆ ಬಳಿ ಸತ್ಯಾಗ್ರಹ ನಡೆಸಲಾಗುವುದು ಎಂದು ಅವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.