ಶನಿವಾರ, ಜೂನ್ 12, 2021
22 °C

ಜಿಲ್ಲೆಯಲ್ಲಿ ಬೋಗಸ್ ಮಾಸಾಶನ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ವಿಧವಾ, ವೃದ್ಧಾಪ್ಯ ಹಾಗೂ ಅಂಗವಿಕಲರ ಮಾಸಾಶನದ ಬೋಗಸ್ ಪ್ರಕರಣಗಳು ತಾಲ್ಲೂಕಿನಲ್ಲಿ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ನೈಜ ಫಲಾನುಭವಿಗಳನ್ನು ಗುರುತಿಸಬೇಕು ಎಂದು ಸದಸ್ಯ ನೆರವಂಡ ಉಮೇಶ್ ಒತ್ತಾಯಿಸಿದರು.ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷೆ ರೇಣುಕಾ ಚೆನ್ನಿಗಯ್ಯ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ಬೇಡಿಕೆಯನ್ನು ಅವರು ಮಂಡಿಸಿದರು.ನಿಜವಾದ ಫಲಾನುಭವಿಗಳು ಮಾಸಾಶನವಿಲ್ಲದೆ ಸಮಸ್ಯೆ ಅನುಭವಿಸುತ್ತಿದ್ದಾರೆ. ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಉಮೇಶ್  ಸೇರಿದಂತೆ ಪ್ರತಿಪಕ್ಷದ ಸದಸ್ಯರು ಗಮನ ಸೆಳೆದರು.ಇದಕ್ಕೆ ಪ್ರತಿಕ್ರಿಯಿಸಿದ ತಾಲ್ಲೂಕು ಪ್ರಭಾರ ಆರೋಗ್ಯಾಧಿಕಾರಿ ಡಾ.ರವೀಂದ್ರ, ಇಂತಹ ಪ್ರಕರಣಗಳನ್ನು ಗುರುತಿಸುವುದಕ್ಕಾಗಿ ಈಗಾಗಲೇ ತಾಲ್ಲೂಕು ಮಟ್ಟದಲ್ಲಿ ಹಾಗೂ ಉಪವಿಭಾಗಾಧಿಕಾರಿಯವರ ನೇತತ್ವದಲ್ಲಿ ಜಿಲ್ಲಾಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದೆ ಎಂದರು.ಅನುಮಾನಕ್ಕೆ ಕಾರಣವಾಗುವ ಪ್ರಕರಣಗಳ ವಿಚಾರಣೆ ನಡೆಸಲಾಗುವುದು. ಜತೆಗೆ ತಪ್ಪಿತಸ್ಥರಿಂದ ಪಡೆದ ಮೊತ್ತವನ್ನು ವಸೂಲು ಮಾಡಲು ಕೂಡ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಆಶ್ವಾಸನೆ ನೀಡಿದರು.ಅಂಗನವಾಡಿ-ರಾಜಕೀಯ


ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲೆಮಾಡುವಿನಲ್ಲಿ ಅಂಗನವಾಡಿ ಕೇಂದ್ರ ಆರಂಭಿಸುವ ಕುರಿತಂತೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸುವ ವಿಚಾರದಲ್ಲಿ ಆಡಳಿತ ಪಕ್ಷದವರು ರಾಜಕೀಯ ಮಾಡುತ್ತಿದ್ದಾರೆ ಎಂದು ನೆರವಂಡ ಉಮೇಶ್ ಆರೋಪಿಸಿದರು. ತಾವು ಹಲವು ಬಾರಿ ಈ ಬಗ್ಗೆ ಪ್ರಸ್ತಾಪಿಸುತ್ತಿದ್ದರೂ ಈವರೆಗೆ ಯಾವುದೇ ಬೆಳವಣಿಗೆಯಾಗಿಲ್ಲ. ಕಳೆದ ಸಭೆಯಲ್ಲೂ ಪ್ರಸ್ತಾಪಿಸಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ ಎಂದರು. ಸಮಜಾಯಿಷಿ ನೀಡಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಾದಪ್ಪ, 300ಕ್ಕಿಂತ ಜಾಸ್ತಿ ಜನಸಂಖ್ಯೆ ಇದ್ದಾಗ ಮಿನಿ ಅಂಗನವಾಡಿ ತೆರೆಯುವುದು ಅಸಾಧ್ಯ. ಪಾಲೆಮಾಡುವಿನಲ್ಲಿ 300ಕ್ಕೂ ಅಧಿಕ ಜನಸಂಖ್ಯೆ ಇದೆ. ಆದರೂ, ಅಂಗನವಾಡಿ ಕೇಂದ್ರ ಆರಂಭಿಸುವ ಬಗ್ಗೆ ಸಭೆ ಅನುಮೋದನೆ ನೀಡಿದಲ್ಲಿ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿ, ಅನುಮತಿ ಪಡೆಯಬಹುದು ಎಂದರು.ಹೊದ್ದೂರು ಗ್ರಾ.ಪಂ.ನಿಂದ ನಿರ್ಣಯ ತರಿಸಿಕೊಂಡು ಅನಂತರ ಇಲ್ಲಿ ತಾ.ಪಂ. ನಿರ್ಣಯ ಅಂಗೀಕರಿಸಬಹುದು ಎಂದು ಕಾರ್ಯನಿರ್ವಾಹಕ ಅಧಿಕಾರಿ ಸತ್ಯನಾರಾಯಣ್ ಸಲಹೆ ನೀಡಿದರು.

ಇದರಿಂದ ಕೆರಳಿದ ಉಮೇಶ್, ನೀವು ಕೂಡ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದೀರಾ ಎಂದು ಆರೋಪಿಸಿದರು.ಸದಸ್ಯ ಮಂಞಿರ ಸಾಬು ತಿಮ್ಮಯ್ಯ ಕೂಡ ದನಿಗೂಡಿಸಿ, ಆಹಾರ ವಿತರಣೆ ವ್ಯವಸ್ಥೆ ಸಮರ್ಪಕಗೊಳಿಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.ಆಹಾರ ಸಾಗಣೆಗೆ ಅನುಮತಿ

ಅಂಗನವಾಡಿ ಕೇಂದ್ರಗಳಿಗೆ ಆಹಾರ ಸಾಗಣೆಗೆ ಸಂಬಂಧಿಸಿದಂತೆ ಇದೀಗ ಆಹಾರ ಸಾಗಣೆ ಮಾಡುತ್ತಿರುವ ಗುತ್ತಿಗೆದಾರರನ್ನೇ ಮುಂದಿನ ಎಪ್ರಿಲ್‌ನಲ್ಲಿ ನಡೆಯುವ ಟೆಂಡರ್ ಪ್ರಕ್ರಿಯೆಯವರೆಗೆ ಮುಂದುವರಿಸಲು ಸಮ್ಮತಿ ನೀಡುವಂತೆ ಸಿಡಿಪಿಒ ಮಾದಪ್ಪ ಕೋರಿದಾಗ, ಸಭೆ ಅನುಮತಿ ನೀಡಿತು.ಕೆಲವು ಅಂಗನವಾಡಿ ಕೇಂದ್ರಗಳಿಗೆ ಸಮರ್ಪಕವಾಗಿ ಆಹಾರ ಪೂರೈಕೆಯಾಗದಿರುವ ಬಗ್ಗೆ ಸಭೆಯಲ್ಲಿ ಆಕ್ಷೇಪ ಕೇಳಿಬಂದಾಗ, ಈ ಮೊದಲು 20 ಬಗೆಯ ಆಹಾರ ವಸ್ತುಗಳನ್ನು ಮಾತ್ರ ಒದಗಿಸಲಾಗುತ್ತಿತ್ತು. ಇದೀಗ ನೂತನ ಪದ್ಧತಿಯಲ್ಲಿ 24 ಬಗೆಯ ಆಹಾರ ವಸ್ತುಗಳನ್ನು ಸರಬರಾಜು ಮಾಡುತ್ತಿರುವುದರಿಂದ ವಿಳಂಬವಾಗುತ್ತಿದ್ದು, ಇಷ್ಟರಲ್ಲೆೀ ಉಳಿದ ಕೇಂದ್ರಗಳಿಗೆ ಸಮರ್ಪಕವಾಗಿ ಆಹಾರ ವಸ್ತುಗಳನ್ನು ವಿತರಿಸಲಾಗುವುದು ಎಂದು ಅಧಿಕಾರಿಗಳು ವಿವರಣೆ ನೀಡಿದರು.ಈ ನಡುವೆ ಎರಡು ತಿಂಗಳ ಕಾಲ ಆಹಾರ ವಿತರಣೆ ಸ್ಥಗಿತಗೊಂಡ ಬಾಬ್ತು ಉಳಿಕೆಯಾಗಿರುವ 30,18,000 ರೂ. ಸರಕಾರಕ್ಕೆ ವಾಪಸು ಹೋಗುವ ಸಾಧ್ಯತೆ ಇರುವುದರಿಂದ ಅಂಗನವಾಡಿ ಕೇಂದ್ರಗಳಿಗೆ ಸ್ಟೀಲ್ ಚಾಪೆ, ಬೆಡ್‌ಶೀಟ್, ಟೇಬಲ್, ಸ್ಟೂಲ್, ಮಣೆ ಖರೀದಿಗೆ ಈ ಹಣವನ್ನು ವಿನಿಯೋಗಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಇತರ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.