ಸೋಮವಾರ, ಮೇ 17, 2021
30 °C

ಜಿಲ್ಲೆಯಲ್ಲಿ ಸಂಭ್ರಮದ ರಾಮನವಮಿ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಳಲ್ಕೆರೆ: ತಾಲ್ಲೂಕಿನ ಆವಿನಹಟ್ಟಿಯಲ್ಲಿ ಭಾನುವಾರ ಮೇಲುಕುಂಟೆ ರಂಗನಾಥಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.ರಥಕ್ಕೆ ಭಾರೀ ಹೂವಿನ ಹಾರಗಳು, ವರ್ಣರಂಜಿತ ವಸ್ತ್ರಗಳಿಂದ ಅಲಂಕರಿಸಲಾಗಿತ್ತು. ಕಳಸಪೂಜೆ, ಈಡುಗಾಯಿ ಸೇವೆ, ಕುಂಕುಮ ಪೂಜೆ,  ಧೂಳೆಡೆ ಸೇವೆಗಳು ನಡೆದ ನಂತರ ಭಕ್ತರು ರಥಕ್ಕೆ ಮಂಡಕ್ಕಿ, ಬಾಳೆಹಣ್ಣು ತೂರಿ ಕೈಮುಗಿದರು. ಸ್ವಾಮಿಯನ್ನು ರಥದ ಮೇಲೆ ಕೂರಿಸಿದ ನಂತರ ನೂರಾರು ಭಕ್ತರು ರಥವನ್ನು ಪೂರ್ವಾಭಿಮುಖವಾಗಿರುವ ದೊಡ್ಡ ಹೊಟ್ಟೆ ರಂಗನಾಥ ಸ್ವಾಮಿಯ ಬೆಟ್ಟದ ಕಡೆಯ ಅಡಿಕೆ ತೋಟದವರೆಗೂ ಎಳೆದು ಭಕ್ತಿಭಾವ ಮೆರೆದರು.ತೋಟದಲ್ಲಿ ಸ್ವಾಮಿಗೆ ಮತ್ತೊಮ್ಮೆ ಪೂಜೆ ಸಲ್ಲಿಸಿದ ನಂತರ ಭಕ್ತರು ಜೈಕಾರಗಳೊಂದಿಗೆ ಮತ್ತೆ ಮೂಲಸ್ಥಾನದವರೆಗೂ ರಥವನ್ನು ಎಳೆದುಕೊಂಡು ಬಂದರು. ನಂತರ ರಥದ ಸುತ್ತ ಕುರಿ, ಮೇಕೆಗಳ ಪ್ರದಕ್ಷಿಣೆ ನಡೆಯಿತು. ದೊಡ್ಡೆಡೆ ಸೇವೆ, ಪಾನಕ-ಫಲಾಹಾರದ ಸೇವೆ, ಹೂವಿನ ಅಡ್ಡಪಲ್ಲಕ್ಕಿ ಉತ್ಸವ, ಅನ್ನಸಂತರ್ಪಣೆ, ಅರವಂಟಿಗೆ ಸೇವೆ, ನೆಂಟರಸೇವೆ ಮತ್ತಿತರ ಪೂಜಾ ಕಾರ್ಯಗಳು ನಡೆದವು.ಪ್ರತೀ ವರ್ಷ ರಾಮನವಮಿಯಂದು ಈ ರಥೋತ್ಸವ ನಡೆಯುತ್ತದೆ. ತ್ರೇತಾಯುಗದಲ್ಲೇ ಮೇಲುಕುಂಟೆ ರಂಗನಾಥಸ್ವಾಮಿಯೂ ಹುಟ್ಟಿದ್ದರಿಂದ ರಾಮನ ಜನ್ಮದಿನವಾದ ಶ್ರೀರಾಮ ನವಮಿಯಂದೇ ರಥೋತ್ಸವ ನಡೆಯುತ್ತದೆ ಎಂಬುದು ಗ್ರಾಮದ ಹಿರಿಯರ ನಂಬಿಕೆ. ಯುಗಾದಿಯಂದು ದೇವರನ್ನು ಹಾಲುರಾಮೇಶ್ವರ ಕ್ಷೇತ್ರಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಮೊದಲಶಾಸ್ತ್ರ ಮಾಡಲಾಗುತ್ತದೆ.ನಂತರ ರಥೋತ್ಸವದ ದಿನದವರೆಗೆ ದಿನಕ್ಕೆ ಒಂದರಂತೆ ಗರುಡ, ಶೇಷ, ನವಿಲು, ಕುದುರೆ, ಆಂಜನೇಯ ವಾಹನಗಳ ಉತ್ಸವಗಳು ನಡೆಯುತ್ತವೆ.ಆರ್. ಗೊಲ್ಲರಹಳ್ಳಿ ಯುವಕರಿಂದ ಭಜನೆ, ತಿರುಮಲಾಪುರ ಯುವಕ ಸಂಘದಿಂದ ಕೋಲಾಟ ಪ್ರದರ್ಶನ ನಡೆಯಿತು.ಶಾಸಕ ಎಂ. ಚಂದ್ರಪ್ಪ, ಮಾಜಿ ಶಾಸಕ ಎ.ವಿ. ಉಮಾಪತಿ, ಜಿ.ಪಂ. ಸದಸ್ಯ ಪಿ.ಆರ್. ಶಿವಕುಮಾರ್,ಅನಿಲ್ ಕುಮಾರ್, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಮೋಹನ್ ನಾಗರಾಜ್, ಗ್ರಾ.ಪಂ. ಅಧ್ಯಕ್ಷ ವೀರಭದ್ರಪ್ಪ, ಪ.ಪಂ. ಸದಸ್ಯ ಕೆ.ಸಿ. ರಮೇಶ್ ಮತ್ತಿತರರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.ಅಖಂಡ ಭಜನೆ: ಹೊಳಲ್ಕೆರೆ ತಾಲ್ಲೂಕಿನ ಹೊರಕೆರೆ ದೇವರಪುರದ ರಾಮ ದೇವಾಲಯದಲ್ಲಿ ಶ್ರೀರಾಮನವಮಿ ಪ್ರಯುಕ್ತ 24 ಗಂಟೆಗಳ ಅಖಂಡ ಭಜನೆ ನಡೆಸಲಾಯಿತು.ಶನಿವಾರ ಸಂಜೆ 4ಕ್ಕೆ ಆರಂಭಗೊಂಡ ಭಜನೆಯನ್ನು ಭಾನುವಾರ ಸಂಜೆ 4ರವರೆಗೆ ನಿರಂತರವಾಗಿ ನಡೆಸಲಾಯಿತು. ದೊಡ್ಡವರೊಂದಿಗೆ ಶಾಲಾ ವಿದ್ಯಾರ್ಥಿಗಳು ಭಜನೆಯಲ್ಲಿ ತೊಡಗಿದ್ದರು. `ರಘುಪತಿ ರಾಘವ ರಾಜಾ ರಾಮ್, ಪತಿತ ಪಾವನ ಸೀತಾ ರಾಮ್~ ಎಂಬ ನಾಮಸ್ಮರಣೆಯಲ್ಲಿ ತೊಡಗಿದ್ದ ಭಕ್ತರು ಹಗಲಿರುಳೆನ್ನದೆ ರಾಮಭಜನೆ ಮಾಡಿದರು.`ನಿಯಮದಂತೆ ಒಂದು ನಿಮಿಷವೂ ಭಜನೆಯನ್ನು ನಿಲ್ಲಿಸುವಂತಿಲ್ಲ. ಊಟ, ತಿಂಡಿಗೆ ಹೋಗುವವರು ಹೋಗುತ್ತಿರುತ್ತಾರೆ. ಬೇರೆಯವರು ಬಂದು ಸೇರಿಕೊಳ್ಳುತ್ತಿರುತ್ತಾರೆ. ಹೀಗೆ ಇಡೀ ದಿನ ಶ್ರೀರಾಮನ ಸ್ಮರಣೆ ನಡೆಯುತ್ತದೆ. ಈ ಸಂಪ್ರದಾಯ ತಾತ ಮುತ್ತಾತಂದಿರ ಕಾಲದಿಂದಲೂ ನಡೆದುಕೊಂಡು ಬರುತ್ತಿದೆ. ಸಂಜೆ ರಾಮದೇವರ ಉತ್ಸವ ನಡೆಯುತ್ತದೆ. ಎಲ್ಲ ಮನೆಗಳಲ್ಲಿ ಪಾನಕ, ಕೋಸಂಬರಿ ವಿತರಿಸುತ್ತಾರೆ ಎಂದು ಅರ್ಚಕ ಶಂಕರಪ್ಪ, ಭೀಮೇಶ್, ಜಯಕುಮಾರ್ ತಿಳಿಸಿದರು.ನಾಯಕನಹಟ್ಟಿ ವರದಿ

ಇಲ್ಲಿನ ಆಂಜನೇಯ ದೇವಸ್ಥಾನದಲ್ಲಿ ಭಾನುವಾರ ರಾಮನವಮಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಸಂಜೆ ರಾಮ, ಸೀತೆ, ಲಕ್ಷ್ಮಣರ ಕಂಚಿನ ವಿಗ್ರಹಗಳನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ರಥವನ್ನು ಹೂವಿನಿಂದ ಶೃಂಗಾರ ಗೊಳಿಸಲಾಗಿತ್ತು. ಅಲಂಕೃತ ರಥದಲ್ಲಿ ದೇವರನ್ನು ಪ್ರತಿಷ್ಠಾಪಿಸಿದ ನಂತರ ನಂದಿಧ್ವಜ ಕುಣಿತ, ಕರಡಿ ಮಜಲಿನ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ರಥ ಎಳೆಯಲಾಯಿತು.ಆಂಜನೇಯ ಸ್ವಾಮಿ ದೇವಸ್ಥಾನದಿಂದ ಪ್ರಾರಂಭವಾದ ರಥೋತ್ಸವ ಒಳಮಠದ ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಮುಂಭಾಗದಿಂದ ಕೋಟೆ ಬ್ಲಾಕ್ ಮೂಲಕ ಆಂಜನೇಯ ದೇವಸ್ಥಾನದ ಬಳಿ ಸಾಗಿತು.

ಪಾನಕ, ಕೋಸಂಬರಿ ವಿತರಿಸಲಾಯಿತು. ದಾರಿಯುದ್ದಕ್ಕೂ ಭಕ್ತರು ದೇವರಿಗೆ ಹಣ್ಣು, ಕಾಯಿ ಕೊಟ್ಟು ಭಕ್ತಿ ಸಮರ್ಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.