ಗುರುವಾರ , ಜೂನ್ 17, 2021
27 °C
ಲೋಕೋಪಯೋಗಿ ಸಚಿವ ಮಹಾದೇವಪ್ಪ ಹೇಳಿಕೆ

ಜಿಲ್ಲೆಯಲ್ಲಿ ₨1,454 ಕೋಟಿ ಕಾಮಗಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಜಿಲ್ಲೆಯ ವಿವಿಧೆಡೆ ಲೋಕೋಪಯೋಗಿ ಇಲಾಖೆಯಿಂದ ಸುಮಾರು ₨1,454 ಕೋಟಿ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಹೇಳಿದರು.ತೀರ್ಥಹಳ್ಳಿಯಿಂದ ಮಲ್ಪೆವರೆಗಿನ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿಗಣಿಸಬೇಕು ಎಂಬ ರಾಜ್ಯ ಸರ್ಕಾರದ ಕೋರಿಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಪ್ರಸ್ತುತ ತೀರ್ಥಹಳ್ಳಿ ಯಿಂದ ಮಲ್ಪೆವರೆಗಿನ ರಸ್ತೆಯು 5.5 ಮೀಟರ್ ಅಗಲವಿದ್ದು, ಇದನ್ನು 10 ಮೀಟರ್ ಗೆ ವಿಸ್ತರಿಸಿ ಅಭಿವೃದ್ಧಿಪಡಿಸ ಲಾಗುತ್ತದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.ಆಗುಂಬೆಯಿಂದ ಮಲ್ಪೆವರೆಗಿನ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಶಿವಮೊಗ್ಗ–ತುಮಕೂರುವರೆಗಿರುವ 185 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಬೇಕು ಎಂಬ ಜನಪ್ರತಿನಿಧಿಗಳ ಕೋರಿಕೆಯಂತೆ ಈಗಾಗಲೇ ಕಾಮಗಾರಿ ಆರಂಭಕ್ಕೆ ಚಾಲನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.ಶಿವಮೊಗ್ಗ–ಚಿತ್ರದುರ್ಗವರೆಗಿನ ರಾಷ್ಟ್ರೀಯ ಹೆದ್ದಾರಿಯನ್ನು ಸಹ ದ್ವಿಪಥ ರಸ್ತೆಯಾಗಿಯೇ ಅಭಿವೃದ್ಧಿಪಡಿಸಲಾಗುತ್ತಿದೆ ಎಂದ ಅವರು, ರಾಜ್ಯದಲ್ಲಿ ಒಟ್ಟು 4,100 ಕಿ.ಮೀ. ರಾಷ್ಟ್ರೀಯ ಹೆದ್ದಾರಿ, 20 ಸಾವಿರ ಕಿ.ಮೀ. ರಾಜ್ಯ ಹೆದ್ದಾರಿ ಮತ್ತು ಸುಮಾರು 40ಸಾವಿರ ಕಿ.ಮೀ. ಜಿಲ್ಲಾ ಮುಖ್ಯ ರಸ್ತೆಗಳಿವೆ. ಈ ಪೈಕಿ ಸುಮಾರು 5ಸಾವಿರ ಕಿ.ಮೀ. ಉದ್ದದ ರಸ್ತೆಯನ್ನು ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಅಡಿ ಉನ್ನತೀಕರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.ಕೇಂದ್ರ ಸರ್ಕಾರ, ರಾಜ್ಯಕ್ಕೆ ರಾಷ್ಟ್ರೀಯ ಹೆದ್ದಾರಿ ನಿಧಿಯಿಂದ  ಸ್ವಾತಂತ್ರ್ಯ ನಂತರದಲ್ಲಿ ನೀಡಬೇಕಿದ್ದಷ್ಟು ಅನುದಾನವನ್ನು ನೀಡಿರಲಿಲ್ಲ. ಕರ್ನಾಟಕದವರೇ ಆದ ಆಸ್ಕರ್ ಫರ್ನಾಂಡೀಸ್ ಕೇಂದ್ರ  ಭೂ ಸಾರಿಗೆ ಸಚಿವರಾದ ನಂತರ ನಮ್ಮ ಕೋರಿಕೆ ಮನ್ನಿಸಿ ಪ್ರತಿ ವರ್ಷ ಬರುತ್ತಿದ್ದ ₨156ಕೋಟಿ ಬದಲಾಗಿ ಈ ವರ್ಷ ₨1ಸಾವಿರ ಕೋಟಿ ಒದಗಿಸಿದ್ದಾರೆ ಎಂದರು.ಪೆಂಡಿಕ್ಸ್- ಇ ಕಾಮಗಾರಿಯು ಸೇರಿದಂತೆ ವಿವಿಧ ಕಾಮಗಾರಿಗಳನ್ನು ಆರಂಭಿಸುವ ಮೊದಲು ಶೇ 18ರಷ್ಟು ಮಾತ್ರ ಅನುದಾನವನ್ನು ಒದಗಿಸಲಾಗುತ್ತಿತ್ತು. ಸರ್ಕಾರ ಇದರ ಬದಲಾಗಿ ಶೇ.50ರಷ್ಟು ಮೊತ್ತವನ್ನು ಒದಗಿಸಿ ಟೆಂಡರ್ ಪ್ರಕ್ರಿಯೆಯಲ್ಲಿ ನಿಗದಿ ಪಡಿಸಿದ ಅವಧಿಗೆ ಕಾಮಗಾರಿ ಪೂರ್ಣಗೊಳ್ಳುವಂತೆ ನೋಡಿಕೊಳ್ಳ ಲಾಗುತ್ತಿದೆ ಎಂದು ಹೇಳಿದರು.ಕಾಮಗಾರಿಯ ಗುಣಮಟ್ಟ ಮತ್ತು ಕಾಲಮಿತಿ ಒಳಗೆ ಪೂರ್ಣಗೊಳ್ಳುವಂತೆ ನೋಡಿಕೊಳ್ಳುವುದಕ್ಕಾಗಿ ವಿವಿಧ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಶಾಸಕ ಕೆ.ಬಿ.ಪ್ರಸನ್ನಕುಮಾರ,  ನಗರಪಾಲಿಕೆ ಮೇಯರ್ ಖುರ್ಷಿದಾ ಬಾನು, ಜಿಲ್ಲಾ ಪಂಚಾಯ್ತಿ ಸದಸ್ಯ ಕಲಗೋಡು ರತ್ನಾಕರ ಮತ್ತಿತರರು ಉಪಸ್ಥಿತರಿದ್ದರು.ವಿಭಾಗ ಮುಂದುವರಿಕೆ

ಶಿವಮೊಗ್ಗ ನಗರದಲ್ಲಿನ ಲೋಕೋಪಯೋಗಿ ಇಲಾಖೆಯ ವಿಶೇಷ ವಿಭಾಗವನ್ನು ಇಲ್ಲಿಯೇ ಮುಂದುವರಿಸಲಾಗುವುದು ಎಂದು ಸಚಿವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.