ಬುಧವಾರ, ಮೇ 12, 2021
26 °C

ಜಿಲ್ಲೆಯಾದ್ಯಂತ ಜೈನ ತೀರ್ಥಂಕರ ಮಹಾವೀರ ಜಯಂತಿ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: `ಜೈನ ಧರ್ಮ ಎಂದೂ ಹಿಂಸೆಗೆ ಪ್ರೋತ್ಸಾಹ ನೀಡಿಲ್ಲ. ಹಿಂಸೆಯ ಸಂಕಲ್ಪ ಮಾಡುವುದೇ ಪಾಪ ಎಂಬ ಸಂದೇಶ ಮಾಡಿರುವ ಈ ಧರ್ಮ ಸಾಮಾಜಿಕ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ~ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ನುಡಿದರು.ದಿಗಂಬರ ಜೈನ ಯುವಕರು ಹಾಗೂ ಜೈನ ಸಮಾಜದವರ ವತಿಯಿಂದ ನಗರದ ದೇವಿ ವೃತ್ತದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಹಾವೀರ ಜಯಂತಿ ಹಾಗೂ ಪ್ರಸಾದ ವಿನಿಯೋಗ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.`ಜೈನಸಿದ್ದಾಂತದಲ್ಲಿ ಋಷಿ ಮುನಿಗಳಿಗೆ ಹೆಚ್ಚಿನ ಗೌರವವಿದೆ. ಸ್ತ್ರೀಯರು ಪುರುಷರಿಗೆ ಸಮಾನರಾಗಿದ್ದಾರೆ. ಮನುಷ್ಯ ಹುಟ್ಟಿ ಸಾಯುವುದರೊಳಗಿನ ಅವಧಿಯಲ್ಲಿ ಒಳ್ಳೆಯ ಜೀವನವನ್ನು ರೂಪಿಸಿಕೊಳ್ಳಬೇಕು ಎಂಬುದನ್ನು ಮಹಾವೀರರು ತೋರಿಸಿಕೊಟ್ಟಿದ್ದಾರೆ~ ಎಂದು ಸ್ವಾಮೀಜಿ ನುಡಿದರು.ಶಾಸಕ ಎಚ್.ಎಸ್.ಪ್ರಕಾಶ್ ಮಾತನಾಡಿ, `ಎರಡೂವರೆ ಸಾವಿರ ವರ್ಷಗಳ ಇತಿಹಾಸವಿರುವ ಜೈನ ಧರ್ಮದ ವಿಚಾರಗಳು ಸಮಾಜಕ್ಕೆ ಮುಟ್ಟುವಂತಾಗಬೇಕು. ಜೈನ ಧರ್ಮದಲ್ಲಿ ಮಹಾವೀರ, ಭರತ ಸೇರಿದಂತೆ ನೂರಾರು ಮಹಾಪುರುಷರು ಹುಟ್ಟಿ ಸಮಾಜಕ್ಕೆ ಉತ್ತಮ ವಿಚಾರಗಳನ್ನು ಸಾರಿದ್ದಾರೆ. ಅವು ಕೃತಿ, ಗ್ರಂಥ, ಓಲೆಗರಿಗಳಿಗೆ ಸೀಮಿತವಾಗದೆ ಪುಸ್ತಕ ರೂಪದಲ್ಲಿ ಬಂದು ಮಕ್ಕಳು ಓದುವಂತಾಗಬೇಕು~ ಎಂದರು.ಪತ್ರಕರ್ತರಾದ ಹೆಚ್.ಬಿ.ಮದನಗೌಡ, ಲೀಲಾವತಿ, ಜೈನ ಸಂಘದ ಅಧ್ಯಕ್ಷ ಎಂ.ಅಜಿತ್‌ಕುಮಾರ್, ನಗರಸಭೆ ಸದಸ್ಯೆ ರಘುನಾಥ್ ಮತ್ತಿತರರು ಉಪಸ್ಥಿತರಿದ್ದರು.ಕಾರ್ಯಕ್ರಮದ ಕೂನೆಯಲ್ಲಿ ನೆರೆದಿದ್ದ ಸಮಾಜ ಬಾಂಧವರು ಹಾಗೂ ಸಾರ್ವಜನಿಕರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.ಮೂರ್ತಿ ಪ್ರತಿಷ್ಠಾಪನೆ: ಮಹಾವೀರರ 1008ನೇ ಜಯಂತಿ ಮಹೋತ್ಸವ ಹಾಗೂ ಮಹಾವೀರ ಜಿನ ಮಂದಿರ ಮೂರ್ತಿ ಪ್ರತಿಷ್ಟಾಪನಾ 9ನೇ ವಾರ್ಷಿ ಕೋತ್ಸವ ಕಾರ್ಯಕ್ರಮ ಬುಧವಾರ ನಡೆಯಿತು.ನಗರದ ಮಹಾವೀರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾವೀರರ ಮೂರ್ತಿಗೆ ವಿಶೇಷ ಅಭಿಷೇಕ, ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬೆಳಿಗ್ಗೆ ಪಂಚಾಮೃತ ಅಭಿಷೇಕ, 108 ಮಂಗಲ ಕಲಶ ಸಹಿತ, ವಿಶೇಷ ಪಂಚಾಮೃತ ಅಭಿಷೇಕ ನಡೆಸಲಾಯಿತು.ಮೆರವಣಿಗೆಮಹಾವೀರಜಯಂತಿ ಅಂಗವಾಗಿ ಜೈನ ಸಮುದಾಯದವರು ನಗರದಲ್ಲಿ ಮೆರವಣಿಗೆ ನಡೆಸಿದರು.

ಜಿನಶ್ವೇತಾಂಬರ ಅದಿನಾಥ ಮಂದಿರದ ಬಳಿಯಿಂದ ಮೆರವಣಿಗೆ ಹೊರಟ ನೂರಾರು ಮಂದಿ ದೊಡ್ಡಬಸದಿ, ಕಸ್ತೂರಿಬಾರಸ್ತೆ, ಮಹಾವೀರ ವೃತ್ತ, ಹೇಮಾವತಿ ಪ್ರತಿಮೆ, ಹಳೇ ಬಸ್ ನಿಲ್ದಾಣ ರಸ್ತೆ, ಎನ್.ಆರ್.ವೃತ್ತ, ಗಾಂಧಿ ಬಜಾರ್ ಮಾರ್ಗವಾಗಿ ಮೆರವಣಿಗೆ ನಡೆಸಿದರು.ಹಳೇಬೀಡು: ಮಹಾವೀರ ಜಯಂತಿಗೆ ಜೈನರ ದಂಡು

ಹಳೇಬೀಡು: ಜೈ ಮಹಾವೀರ....ವೀರಾದಿ ವೀರ ಜೈ ಮಹಾವೀರ....ಅಹಿಂಸಾ ಪರಮೋಧರ್ಮಕೀ ಜೈ.... ಸಿದ್ದಾಂತ ಶಾಸ್ತ್ರಕೀ ಜೈ.... ಎಂಬಿತ್ಯಾದಿ ಘೋಷಣೆ ಗಳು ಬುಧವಾರ ಮುಗಿಲು ಮುಟ್ಟಿದವು. ಜೈನ ಸಮಾಜದ ಸಾವಿರಾರು ಭಕ್ತರ ಸಮೂಹ ಅಲ್ಲಿ ನೆರೆದಿತ್ತು. ಗ್ರಾಮದ ಬೀದಿಗಳು ತಳಿರು, ತೋರಣಗಳಿಂದ ಕಂಗೊಳಿಸಿದವು.ಇದು ಅಡಗೂರು ಗ್ರಾಮದಲ್ಲಿ ಮಹಾವೀರ ಜೈನ ಸಂಘ, ರತ್ನತ್ರಯ ಮಹಿಳಾ ಸಮಾಜ, ಹಾಗೂ ಜೈನ ಮಿಲನ್ ಆಶ್ರಯದಲ್ಲಿ ಜೈನ ಬಾಂಧವರು ಬುಧವಾರ ಶ್ರದ್ಧೆ, ಭಕ್ತಿಯಿಂದ ಮಹಾವೀರ ಜಯಂತಿ ಆಚರಿಸಿದಾಗ ಕಂಡುಬಂದ ದೃಶ್ಯ.ಗ್ರಾಮದ ಮಹಾವೀರ ಜಿನ ಮಂದಿರದಲ್ಲಿ ಮಂಗಳವಾರದಿಂದ ಮಂತ್ರಘೋಷ ಮೊಳಗಿದವು. ಧಾರ್ಮಿಕ ಧ್ವಜಾರೋಹಣ. ನಿತ್ಯಪೂಜೆ. ಲಘು ಸಿದ್ದಚಕ್ರ ಆರಾಧನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.ಬುಧವಾರ ಬೆಳಿಗ್ಗೆ ಮಂಗಲ ವಾದ್ಯದೊಂದಿಗೆ ಶ್ವೇತವಸ್ತ್ರ ಧರಿಸಿದ ಸುಮಂಗಲೆಯರು ಜಿನ ಭಕ್ತಿಗೀತೆ ಹಾಡುತ್ತ ತೀರ್ಥಂಕರರ ಅಭಿಷೇಕಕ್ಕೆ ಕಳಸ ನೀರು ತಂದರು. ಚಿಣ್ಣರು ಛತ್ರಿ ಚಾಮರ ಹಿಡಿದು ಸಾಗಿದರೆ, ಯುವಕರು ಘೋಷಣೆ ಕೂಗುತ್ತಾ ವಾದ್ಯಗೋಷ್ಠಿಯ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಕುಣಿಯುತ್ತಿದ್ದರು.ನಂತರ ಗರ್ಭಗುಡಿಯ ಭಗವಾನ್ ಮಹಾವೀರರ ಮೂರ್ತಿಗೆ ಅಭಿಷೇಕ ನೆರವೇರಿತು. ಜಿನ ಭಕ್ತರು ಪೈಪೋಟಿಯಲ್ಲಿ ಹರಾಜಿನಲ್ಲಿ ಕಳಸ ಪಡೆದು ಭಕ್ತಿಯಿಂದ ಅಭಿಷೇಕ ನೆರವೇರಿಸಿದರು. ಜಲ, ಗಂಧ, ಅರಿಶಿನ, ಕ್ಷೀರ, ಎಳನೀರು, ಕಷಾಯ, ಕಬ್ಬಿನಹಾಲು, ಕಲ್ಕಚೂರ್ಣ ಮೊದಲಾದ ದ್ರವ್ಯಗಳಿಂದ ಕೂಡಿದ್ದ ಅಭಿಷೇಕ ಕಣ್ಮನ ಸೆಳೆಯಿತು.ಮಧ್ಯಾಹ್ನ ಪುಷ್ಪಾಲಂಕೃತ ಮಂಟಪದಲ್ಲಿ ಮಹಾವೀರರ ಉತ್ಸವಮೂರ್ತಿಯನ್ನು ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ರವಿಕೀರ್ತಿ ತಂಡದವರ ರಸಮಂಜರಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರಿಗೆ ರಸದೌತಣ ಉಣಬಡಿಸಿದರು.ಮಹಾವೀರ ಜೈನ ಸಂಘದ ಅಧ್ಯಕ್ಷ ನಾಗೇಂದ್ರ ಕುಮಾರ್, ರತ್ನತ್ರಯ ಮಹಿಳಾ ಸಮಾಜದ ಪುಷ್ಪರತ್ನರಾಜು, ವಸಂತ ಕಾಂತರಾಜು, ಸುಧಾ ವಿಜಯ್‌ಕುಮಾರ್ ಎ.ಬಿ. ಕಾಂತರಾಜು, ಶಶಿಕುಮಾರ್, ಜಯರಾಜು, ದಾವನ್‌ಜೈನ್, ಅತುಲ್‌ಜೈನ್, ಚಂದ್ರಪ್ರಭ ಇತರರು ಇದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.