ಗುರುವಾರ , ಮೇ 13, 2021
16 °C

ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ಮೋಟಮ್ಮ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಜಿಲ್ಲೆಯ ಬರಪೀಡಿತ ತಾಲ್ಲೂಕುಗಳ ವಿವಿಧ ಪ್ರದೇಶಗಳಿಗೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕಿ ಮೋಟಮ್ಮ ಬುಧವಾರ ಭೇಟಿ ನೀಡಿ ಜನರ ಪರಿಸ್ಥಿತಿ ಅವಲೋಕಿಸಿದರು. ಇದೇ ವೇಳೆ ಬರ ಪರಿಹಾರ ಕಾಮಗಾರಿ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಕಿಡಿಕಾರಿದರು.ಮೊಳಕಾಲ್ಮುರು ವರದಿ

ಅಭಿವೃದ್ಧಿ ವಿಷಯದಲ್ಲಿ ಹೀನಾಯ ಸ್ಥಿತಿ ಮುಟ್ಟಿರುವ ಬಿಜೆಪಿ ಸರ್ಕಾರ ಕಣ್ಣು, ಕಿವಿ ಕಳೆದುಕೊಂಡಿದ್ದು, ವಾಸನೆ ಹಿಡಿಯುವ ಶಕ್ತಿಯನ್ನು ಮಾತ್ರ ಉಳಿಸಿಕೊಂಡಿದೆ ಎಂದು ಮೋಟಮ್ಮ ಟೀಕಿಸಿದರು.ಇಲ್ಲಿನ ಹಿರೇಹಳ್ಳಿಯಲ್ಲಿ ಅವರು ಸುದ್ದಿಗಾರರ ಜತೆ ಮಾತನಾಡಿದರು.ಭೇಟಿ ನೀಡಿರುವ ಎಲ್ಲಾ ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ಮೇವು ಸಮಸ್ಯೆ, ಬೆಳೆ ಪರಿಹಾರ ಸಮಸ್ಯೆ ವ್ಯಾಪಕವಾಗಿದೆ. ಸರ್ಕಾರ ಹಣ ನೀಡುವ ಕೆಲಸ ಮಾಡಿದರೆ ಸಾಲದು ಅದು ಸಮರ್ಪಕವಾಗಿ ಬಳಕೆ ಆಗಿದೆಯೇ ಇಲ್ಲವೇ ಎಂಬುದನ್ನು ನೋಡಬೇಕು. ಈಗ ಇದು ಆಗುತ್ತಿಲ್ಲ. ಕಾರ್ಯದರ್ಶಿಗಳು, ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ, ಉಸ್ತುವಾರಿ ಹೊತ್ತವರು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಜನತೆ ಕೆಲಸ ಅರಸಿ ಗುಳೆ ಹೋಗುತ್ತಿದ್ದರೂ ಯಾವುದೇ ಪರ್ಯಾಯ ಕ್ರಮಗಳನ್ನು ಕೈಗೊಂಡಿಲ್ಲ ಎಂದು ದೂರಿದರು.ಶಾಸಕರಾದ ಎನ್.ವೈ. ಗೋಪಾಲಕೃಷ್ಣ, ನೆ.ಲ. ನರೇಂದ್ರಬಾಬು, ಮಾಜಿ ಸಚಿವ ಬಿ.ಆರ್. ಪಾಟೀಲ್, ವೆಂಕಟೇಶ್, ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ಸೇತುರಾಂ, ಬ್ಲಾಕ್ ಅಧ್ಯಕ್ಷ ವಿ. ಮಾರನಾಯಕ, ಮುಖಂಡರಾದ ಡಾ.ಜಿ. ತಿಪ್ಪೇಸ್ವಾಮಿ, ಬಾಲರಾಜ್ ಇತರರು ಉಪಸ್ಥಿತರಿದ್ದರು.ಚಳ್ಳಕೆರೆ

ರಾಜ್ಯ ಸರ್ಕಾರ ಬರಗಾಲದ ಸಂಕಷ್ಟದ ದಿನಗಳಲ್ಲಿ ಜನತೆಗೆ ಸ್ಪಂದಿಸುವುದನ್ನು ಬಿಟ್ಟು ರೆಸಾರ್ಟ್ ರಾಜಕಾರಣ ಮತ್ತು ಕುರ್ಚಿಗಾಗಿ ಕಾಲಹರಣ ಮಾಡಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕಿ ಮೋಟಮ್ಮ ಆರೋಪಿಸಿದರು.ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಹಳ್ಳಿಗಳಿಗೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದರು.

ಚಳ್ಳಕೆರೆ ತಾಲ್ಲೂಕು ತೀವ್ರ ಬರಗಾಲದ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಶೀಘ್ರವೇ ಸರ್ಕಾರ ಇಲ್ಲಿನ ಜನರಿಗೆ  ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಮತ್ತಷ್ಟು ಗೋ ಶಾಲೆಗಳನ್ನು ತೆರೆಯುವ ಕೆಲಸ ಮಾಡಬೇಕಿದೆ. ಈ ಕುರಿತು ಮುಖ್ಯಮಂತ್ರಿಗಳು ಗುರುವಾರ ಕರೆದಿರುವ ಸರ್ವಪಕ್ಷಗಳ ಸದಸ್ಯರ ಸಭೆಯಲ್ಲಿ ಒತ್ತಾಯಿಸಲಾಗುವುದು ಎಂದು ಹೇಳಿದರು.ಹಿರೇಹಳ್ಳಿ ಗ್ರಾಮದಲ್ಲಿ ಜನರು ಕುಡಿಯುವ ನೀರಿಗಾಗಿ ತತ್ತರಿಸುತ್ತಿದ್ದಾರೆ. ತಾತ್ಕಾಲಿಕವಾಗಿ ಟ್ಯಾಂಕರ್‌ಗಳ ಮೂಲಕ ಅಲ್ಲಿಗೆ ನೀರು ಒದಗಿಸಲಾಗುತ್ತಿದೆಯಾದರೂ ಇದು ಶಾಶ್ವತವಾದುದಲ್ಲ. ಆದ್ದರಿಂದ, ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಬೇಕಾದ ಕರ್ತವ್ಯ ಜಿಲ್ಲಾಡಳಿತ ಮಾಡಬೇಕು ಎಂದರು.

ಬರಗಾಲ ಸಂಭವಿಸಿರುವ ತಾಲ್ಲೂಕುಗಳ ಜನರಿಗೆ ಅಧಿಕಾರಿಗಳು ಮತ್ತು ಆಳುವ ಪಕ್ಷದ ನಾಯಕರು ಮೂಲಸೌಲಭ್ಯಗಳನ್ನು ಒದಗಿಸದಿದ್ದರೆ ಮುಂದಿನ ದಿನಗಳಲ್ಲಿ ಆಯಾಯ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಜನರ ಜತೆಗೆ ಧರಣಿ ಮಾಡಲಾಗುವುದು ಎಂದು ತಿಳಿಸಿದರು.ಕಳೆದ ಮೂರು ದಿನಗಳ ಹಿಂದೆ ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಕಾಮಗಾರಿ ಮಾಡಲು ಸಮಾರು ್ಙ 617ಕೋಟಿ ಹಣ ಬಿಡುಗಡೆ ಮಾಡಿದೆ ಎಂದರು. ಸರ್ಕಾರದ ನಡೆಯನ್ನು ನೋಡಿ ಮಂದಿನ ದಿನಗಳಲ್ಲಿ ಕೇಂದ್ರ ಸರ್ಕಾರಕ್ಕೆ ರಾಜ್ಯ ಕಾಂಗ್ರೆಸ್ ನಾಯಕರ ನಿಯೋಗ ತೆರಳಲಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.ಇದೇ ಸಂದರ್ಭ ಗುತ್ತಿಗೆ ಪೌರ ಕಾರ್ಮಿಕರ ತಮ್ಮನ್ನು ಕಾಯಂ ಗೊಳಿಸಲು ಒತಾಯಿಸಿ ಮನವಿ ಸಲ್ಲಿಸಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಎ. ಸೇತುರಾಂ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ಗೀತಾನಂದಿನಿ ಗೌಡ, ಟಿ. ರಘುಮೂರ್ತಿ, ಮಹಿಳಾ ಕಾಂಗ್ರೆಸ್‌ನ ಮಂಜುಳಾ, ಗೀತಾಬಾಯಿ, ಜಿ.ಪಂ. ಉಪಾಧ್ಯಕ್ಷೆ ಭಾರತಿ ಕಲ್ಲೇಶ್, ಸದಸ್ಯರಾದ ಕವಿತಾ, ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಶಿವಕುಮಾರಸ್ವಾಮಿ, ಪುರಸಭೆ ಸದಸ್ಯರಾದ ಎಂ. ಶಿವಮೂರ್ತಿ, ಆರ್. ಪ್ರಸನ್ನಕುಮಾರ್, ಹೊಸಮನೆ ಸ್ವಾಮಿ, ಜೆ. ತಿಪ್ಪೇಶ್ ಕುಮಾರ್ ಮತ್ತಿತರರು ಇದ್ದರು. 

ಯಾರಿಗೂ ಬೇಡವಾದ ಮೊಳಕಾಲ್ಮುರು...

ತಾಲ್ಲೂಕಿನಲ್ಲಿಯೂ ಬರಸ್ಥಿತಿ ತಾಂಡವವಾಡುತ್ತಿದ್ದು, ಜನ-ಜಾನುವಾರುಗಳು ತೀವ್ರ ತೊಂದರೆ ಜೀವನ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿಯೇ `ಮೊಳಕಾಲ್ಮುರು ತಾಲ್ಲೂಕು~ ಬರಸ್ಥಿತಿಯಲ್ಲಿ ಪ್ರಥಮಸ್ಥಾನದಲ್ಲಿದೆ.ಆದರೆ, ಇಲ್ಲಿಗೆ ಯಾವುದೇ ಅಧಿಕಾರಿಗಳ ತಂಡವಾಗಲೀ ಜನಪ್ರತಿನಿಧಿಗಳ ತಂಡವಾಗಲೀ ಈವರೆಗೆ ಭೇಟಿ ಮಾಡಿ ಜನತೆ ಅಹವಾಲು ಕೇಳಲು ಬಂದಿಲ್ಲ. ಕರೆ ತರುವ ಪ್ರಯತ್ನಗಳೂ ನಡೆದಿಲ್ಲ. ತಾಲ್ಲೂಕಿನ ಪರಿಸ್ಥಿತಿ ಬಗ್ಗೆ ಅರಿಯಲು ಮುಂದಿನ ದಿನಗಳಲ್ಲಿ ಆದರೂ ಬರುವವರು ಭೇಟಿ ನೀಡಬೇಕಿದೆ, ಅದಕ್ಕೂ ಮುಖ್ಯವಾಗಿ ಇಲ್ಲಿನ ಜನಪ್ರತಿನಿಧಿಗಳು ಇದಕ್ಕೆ ಮನಸ್ಸು ಮಾಡಬೇಕಿದೆ ಎಂಬುದು ಸಾರ್ವಜನಿಕರ ಮನವಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.