ಬುಧವಾರ, ಮೇ 18, 2022
21 °C

ಜಿಲ್ಲೆಯ 2.86 ಲಕ್ಷ ಮಂದಿಗೆ ರಿಯಾಯಿತಿ ಅಕ್ಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಜಿಲ್ಲೆಯಲ್ಲಿ ಬುಧವಾರದಿಂದ ಚಾಲನೆಗೊಳ್ಳಲಿರುವ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಒಟ್ಟು 2,86 ಲಕ್ಷ ಮಂದಿಗೆ ರಿಯಾಯಿತಿ ದರದಲ್ಲಿ ಅಕ್ಕಿ ದೊರೆಯಲಿದೆ. ಅಂತ್ಯೋದಯ, ಅನ್ನಯೋಜನೆ ಮತ್ತು ಬಿಪಿಎಲ್ ಪಡಿತರ ಚೀಟಿದಾರರಿಗೆ ಅಕ್ಕಿ ವಿತರಿಸಲು ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ವಿಶೇಷ ಪ್ರಯತ್ನಗಳನ್ನು ಕೈಗೊಂಡಿದೆ.ಹೆಚ್ಚುವರಿ ಅಕ್ಕಿಯನ್ನು ದಾಸ್ತಾನು ಮಾಡಬೇಕಾಗಿರುವುದರ ಹಿನ್ನೆಲೆಯಲ್ಲಿ, ಈಗಾಗಲೇ ಇರುವ ಏಳು ಗೋದಾಮುಗಳ ಜೊತೆಗೆ ಇನ್ನೂ ಏಳು ಗೋದಾಮುಗಳನ್ನು ತಾತ್ಕಾಲಿಕವಾಗಿ ಬಾಡಿಗೆಗೆ ಪಡೆಯಲಾಗಿದೆ. ಜೂನ್ ತಿಂಗಳ ಕೊನೆಗೆ ಜಿಲ್ಲೆಯಲ್ಲಿ 3,46,174 ಮಂದಿಗೆ ಪಡಿತರ ಚೀಟಿ ವಿತರಿಸಲಾಗಿದೆ. ಅವರ ಪೈಕಿ 59,910 ಎಪಿಎಲ್ ಚೀಟಿದಾರರಿದ್ದಾರೆ. ಉಳಿದಂತೆ 30,291 ಅಂತ್ಯೋದಯ ಅನ್ನ ಯೋಜನೆ ಚೀಟಿದಾರರು ಮತ್ತು 2,55,973 ಬಿಪಿಎಲ್ ಚೀಟಿದಾರರಿದ್ದಾರೆ. ಒಟ್ಟಾರೆ 2,86,264 ಮಂದಿಗೆ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ರಿಯಾಯಿತಿ ದರದ ಅಕ್ಕಿ ದೊರೆಯಲಿದೆ.ಬಿಪಿಎಲ್ ಪಡಿತರ ಚೀಟಿದಾರರ ಪೈಕಿ ಕುಟುಂಬದಲ್ಲಿ ಒಬ್ಬರೇ ಸದಸ್ಯರಿರುವ ಪಡಿತರ ಚೀಟಿಗಳು 10,073, ಇಬ್ಬರಿರುವ ಪಡಿತರ ಚೀಟಿಗಳು 22,161, ಮೂವರಿರುವ ಪಡಿತರ ಚೀಟಿಗಳು 37,392, ನಾಲ್ವರಿರುವ ಪಡಿತರ ಚೀಟಿಗಳು  75,401, ಐದಕ್ಕಿಂತ ಹೆಚ್ಚು ಮಂದಿ ಇರುವ ಪಡಿತರ ಚೀಟಿಗಳು 1,10,946 ಇವೆ.ಅಂತ್ಯೋದಯ ಪಡಿತರ ಚೀಟಿದಾರರಿಗೆ ಯೋಜನೆ ಅಡಿಯಲ್ಲಿ ಇನ್ನು ಮುಂದೆ 1 ರೂಪಾಯಿ ದರದಲ್ಲಿ 29 ಕೆಜಿ ಅಕ್ಕಿಯನ್ನು ನೀಡಲಾಗುವುದು. ಅದೇ ರೀತಿ ಬಿಪಿಎಲ್ ಪಡಿತರ ಚೀಟಿದಾರರಿಗೆ ಒಬ್ಬ ಸದಸ್ಯರಿಗೆ 10 ಕೆ.ಜಿ., ಇಬ್ಬರಿದ್ದರೆ 20, ಮೂರು ಮೇಲ್ಪಟ್ಟಿದ್ದರೆ 30 ಕೆ.ಜಿ. ಅಕ್ಕಿ ನೀಡಲು ಸಿದ್ಧತೆ ನಡೆದಿದೆ.ಹೆಚ್ಚುವರಿ ಅಕ್ಕಿ: ಬಿಪಿಎಲ್ ಚೀಟಿದಾರರಿಗೆ ಈ ಮುನ್ನ 36032 ಕ್ವಿಂಟಿಲ್ ಅಕ್ಕಿಯನ್ನು ವಿತರಿಸಲಾಗಿತ್ತು. ಇನ್ನು ಮುಂದೆ 72,561 ಕ್ವಿಂಟಲ್ ಅಕ್ಕಿ ವಿತರಿಸಲಾಗುವುದು. ಅಷ್ಟೂ ಅಕ್ಕಿ ಈಗ ಗೋದಾಮುಗಳಲ್ಲಿ ದಾಸ್ತಾನಿದೆ. ಅಂತ್ಯೋದಯ ಯೋಜನೆಯಲ್ಲಿ ಪ್ರತಿ ಕುಟುಂಬಕ್ಕೆ 29 ಕೆ.ಜಿ. ಲೆಕ್ಕದಲ್ಲಿ 8784 ಕ್ವಿಂಟಾಲ್ ಅಕ್ಕಿಯನ್ನು ವಿತರಿಸಲಾಗುವುದು ಎಂದು ಇಲಾಖೆಯ ಉಪನಿರ್ದೇಶಕ ಚೆನ್ನಬಸಪ್ಪ ಕೊಡ್ಲಿ ಮಂಗಳವಾರ `ಪ್ರಜಾವಾಣಿ'ಗೆ ತಿಳಿಸಿದರು.ಹೆಚ್ಚುವರಿ ಗೋದಾಮು: ಅಕ್ಕಿ ಹೆಚ್ಚು ವಿತರಿಸಬೇಕಾಗಿರುವ ಹಿನ್ನೆಲೆಯಲ್ಲಿ ಈಗ ಬಳಕೆಯಲ್ಲಿರುವ 7 ಗೋದಾಮುಗಳಲ್ಲಿ 10,040 ಮೆಟ್ರಿಕ್ ಟನ್ ಧಾನ್ಯ ಸಂಗ್ರಹ ಮಾತ್ರ ಸಾಧ್ಯವಿದೆ. ಹೆಚ್ಚುವರಿಯಾಗಿ 2,500 ಮೆಟ್ರಿಕ್ ಟನ್ ಧಾನ್ಯವನ್ನು ಇನ್ನು ಮುಂದೆ ಸಂಗ್ರಹಿಸಿಡಬೇಕಾಗುತ್ತದೆ. ಈಗಿರುವ ಗೋದಾಮುಗಳಲ್ಲಿ ಸ್ಥಳಾವಕಾಶ ಕೊರತೆಯಿದ್ದು, ಹೆಚ್ಚುವರಿ 7 ಗೋದಾಮುಗಳನ್ನು ತಾತ್ಕಾಲಿಕವಾಗಿ ಬಾಡಿಗೆಗೆ ಪಡೆಯಲಾಗಿದೆ. ಬಂಗಾರಪೇಟೆಯಲ್ಲಿ ಇರುವ ಸಗಟು ಮಳಿಗೆಯು ಹೆಚ್ಚಿನ ದಾಸ್ತಾನು ಹೊಂದುವ ಸಾಮರ್ಥ್ಯ ಹೊಂದಿರುವುದರಿಂದ ಅಲ್ಲಿಗೆ ಹೆಚ್ಚುವರಿ ಗೋದಾಮು ಅಗತ್ಯವಿಲ್ಲ ಎಂದರು.ಎಲ್ಲೆಲ್ಲಿ?: ಕೋಲಾರ ಗ್ರಾಮಾಂತರ ಪ್ರದೇಶಕ್ಕೆ 600 ಮೆಟ್ರಿಕ್ ಟನ್ ಸಂಗ್ರಹ ಸಾಮರ್ಥ್ಯದ ಗೋದಾಮು ಅಗತ್ಯವಿದೆ. ಸದ್ಯಕ್ಕೆ 400 ಮೆ.ಟನ್ ಗೋದಾಮನ್ನು ಎಪಿಎಂಸಿ ಪ್ರಾಂಗಣದಲ್ಲಿ ತೆರೆಯಲಾಗಿದೆ. ಕೋಲಾರ ನಗರ ಸಭೆ ವ್ಯಾಪ್ತಿಯ ಪ್ರದೇಶಕ್ಕೆ 350 ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮನ್ನು ಗಾಂಧಿನಗದಲ್ಲಿ, ಮಾಲೂರಿಗೆ ಬೇಕಾದ 350 ಮೆಟ್ರಿಕ್ ಟನ್ ಗೋದಾಮನ್ನು ಅಲ್ಲಿಯ ಮಾರಮ್ಮ ಗುಡಿ ರಸ್ತೆಯ ಟಿಎಪಿಸಿಎಂಎಸ್‌ನಲ್ಲಿ, ಮುಳಬಾಗಲು ತಾಲ್ಲೂಕಿಗೆ ಬೇಕಾದ 500 ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮನ್ನು ರಂಗವಿಠಲ ಮಂದಿರದ ಹತ್ತಿರ ಪಡೆಯಲಾಗಿದೆ. ಶ್ರೀನಿವಾಸಪುರದಲ್ಲಿ 400 ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮನ್ನು ಚಿಂತಾಮಣಿ ರಸ್ತೆಯಲ್ಲಿ ಪಡೆಯಲಾಗಿದೆ. ಕೆಜಿಎಫ್ ನಗರ ಪ್ರದೇಶಕ್ಕೆ 300 ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮನ್ನು ರೋಷನ್ ವೇ ಬ್ರಿಡ್ಜ್ ಹತ್ತಿರ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.