ಶನಿವಾರ, ಜನವರಿ 18, 2020
22 °C

ಜೆಎನ್‌ಎಂಸಿಗೆ ಅಮೆರಿಕದ ಆರೋಗ್ಯ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: “ತಾಯಂದಿರ ಮತ್ತು ನವಜಾತ ಶಿಶುಗಳ ಮರಣ ಪ್ರಮಾಣವನ್ನು ಗಣನೀಯವಾಗಿ ಕಡಿಮೆಗೊಳಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಭಾರತ ಸರ್ಕಾರದ ಆರೋಗ್ಯ ಸಚಿವಾಲಯಕ್ಕೆ ಸೂಚಿಸಲಾಗುವುದು” ಎಂದು ಅಮೆರಿಕದ ಆರೋಗ್ಯ ಸಚಿವೆ ಕ್ಯಾಥ್ಲೀನ್ ಸೆಬೆಲಿಯಸ್ ತಿಳಿಸಿದರು.ರಾಷ್ಟ್ರೀಯ ಆರೋಗ್ಯ ಸಂಸ್ಥೆಗಳಿಂದ ಅನುದಾನಿತ ಸಮುದಾಯ ಆಧಾರಿತ ಆರೋಗ್ಯ ಸಂಶೋಧನಾ ಅಧ್ಯಯನಗಳನ್ನು ಪರಿಶೀಲಿಸಲು ಅಮೆರಿಕದ ಆರೋಗ್ಯ ತಂಡದೊಂದಿಗೆ ನಗರದ ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.“ಭಾರತದಲ್ಲಿ ಹೆರಿಗೆ ಸಂದರ್ಭದಲ್ಲಿ ತಾಯಂದಿರ ಹಾಗೂ ನವಜಾತ ಶಿಶುಗಳ ಮರಣ ಸಂಖ್ಯೆ ಹೆಚ್ಚಿದೆ. ಹೀಗಾಗಿ ಈ ಬಗ್ಗೆ ಅಧ್ಯಯನ ಕೈಗೊಳ್ಳಲಾಗುತ್ತಿದ್ದು, ಅದರ ಫಲಿತಾಂಶಗಳನ್ನು ರಾಷ್ಟ್ರೀಯ ಆರೋಗ್ಯ ನೀತಿಗಳಲ್ಲಿ ಅಳವಡಿಸಿಕೊಳ್ಳುವಂತೆ ಭಾರತ ಸರ್ಕಾರದ ಆರೋಗ್ಯ ಸಚಿವಾಲಯಕ್ಕೆ ಸಲಹೆ ನೀಡಲಾಗುವುದು” ಎಂದು ವಿವರಿಸಿದರು.“ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಮಹಿಳೆಯರ ಮತ್ತು ಮಕ್ಕಳ ಆರೋಗ್ಯ ಸಂಶೋಧನಾ ಘಟಕವು ಮಹಿಳೆಯರ ಮತ್ತು ಮಕ್ಕಳ ಆರೋಗ್ಯವನ್ನು ಉತ್ತಮಪಡಿಸಲು ಸಮುದಾಯ ಆಧಾರಿತ ಸಂಶೋಧನಾ ಅಧ್ಯಯನಗಳನ್ನು ಉತ್ತಮವಾಗಿ ಅನುಷ್ಠಾನಗೊಳಿಸುತ್ತಿದೆ” ಎಂದು ಕ್ಯಾಥ್ಲೀನ್ ತಿಳಿಸಿದರು.ಅಮೆರಿಕದ ಅಧ್ಯಯನ ತಂಡವನ್ನು ಸ್ವಾಗತಿಸಿದ ಕೆಎಲ್‌ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ಕೆ.ಎಲ್.ಇ ಸಂಸ್ಥೆಯು ಸಮುದಾಯ ಆಧಾರಿತ ಸಂಶೋಧನಾ ಚಟುವಟಿಕೆಗಳನ್ನು ಸಬಲಗೊಳಿಸಲಾಗುವುದು. ಜಿಲ್ಲಾ ಆರೋಗ್ಯ ಇಲಾಖೆಯೊಂದಿಗೆ ತಾಯಿ ಮತ್ತು ನವಜಾತ ಶಿಶುಗಳ ಆರೋಗ್ಯ ಸುಧಾರಣೆಗಾಗಿ ಯತ್ನಿಸಲಾಗುವುದು” ಎಂದು ಭರವಸೆ ನೀಡಿದರು.ಅಮೆರಿಕದ ಆರೋಗ್ಯ ತಂಡದ ಸದಸ್ಯರಾದ ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಸಹ ನಿರ್ದೇಶಕ ರೋಜರ್ ಗ್ಲಾಸ್, ಜಾಗತಿಕ ವ್ಯವಹಾರಗಳ ಕಚೇರಿಯ ನಿರ್ದೇಶಕ ನೀಲ್ಸ್ ಡೌಲೇರ್, ಆಹಾರ ಮತ್ತು ಔಷಧ ವಿಭಾಗದ ಉಪ ಆಯುಕ್ತ ಡೆಪೋರಾ ಆಥರ್ ಮತ್ತಿತರರು ಹಾಜರಿದ್ದರು.ಕೆ.ಎಲ್.ಇ. ವಿಶ್ವವಿದ್ಯಾಲಯ ಸಂಶೋಧನಾ ಘಟಕದ ನಿರ್ದೇಶಕ ಡಾ. ಬಿ.ಎಸ್. ಕೋಡಕಿಣಿ, ಸಂಶೋಧನಾ ಅಧ್ಯಯನಗಳ ಸಂಕ್ಷಿಪ್ತ ವಿವರ ನೀಡಿದರು. ಕೆ.ಎಲ್.ಇ. ವಿಶ್ವವಿದ್ಯಾಲಯ ಉಪಕುಲಪತಿ ಡಾ. ಚಂದ್ರಕಾಂತ ಕೋಕಾಟೆ ವಂದಿಸಿದರು.ಬಳಿಕ ಅಮೆರಿಕದ ಆರೋಗ್ಯ ತಂಡವು ಬೈಲಹೊಂಗಲ ತಾಲ್ಲೂಕಿನ ಮುರಗೋಡದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿತು. ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ವೈದ್ಯಾಧಿಕಾರಿಗಳು, ಆರೋಗ್ಯ ಕಾರ್ಯಕರ್ತರೊಂದಿಗೆ ಚರ್ಚಿಸಿದರು.

 

ಪ್ರತಿಕ್ರಿಯಿಸಿ (+)