ಮಂಗಳವಾರ, ಜೂನ್ 15, 2021
24 °C

ಜೆಡಿಎಸ್‌ಗೊಂದು ಅವಕಾಶ ನೀಡಿ: ಮಧು ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೆಡಿಎಸ್‌ಗೊಂದು ಅವಕಾಶ ನೀಡಿ: ಮಧು ಮನವಿ

ವಿಜಾಪುರ: `ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಒಬ್ಬ ಛಲಗಾರ. ಅವರಿಗೆ ನೀಡಿದಂತೆ ನಿಮ್ಮ ಹೃದಯ ಕಮಲದಲ್ಲಿ ನನಗೂ ಒಂದು ಸ್ಥಾನ ಕೊಡಿ. ಜನರ ಒಳಿತಿಗಾಗಿ ಸದಾ ಹೋರಾಡುತ್ತಿರುವ, ಸಮರ್ಥ ನಾಯಕತ್ವದ ಜೆಡಿಎಸ್‌ನ್ನು ಗೆಲ್ಲಿಸಿ~ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಕಳಕಳಿಯ ಮನವಿ ಮಾಡಿದರು.`ನವಶಕ್ತಿಯ ಸಂಚಲನ-ದಾವಣಗೆರೆಯಲ್ಲಿ ಮಿಲನ~ ಕಾರ್ಯಕ್ರಮದ ಅಂಗವಾಗಿ ಗುರುವಾರ ಸಂಜೆ ಇಲ್ಲಿ ನಡೆದ `ಯುವ ಚೇತನ ಯಾತ್ರೆ~ಯಲ್ಲಿ ಮಾತನಾಡಿದರು.`ಬಂಗಾರಪ್ಪ ಮುಖ್ಯಮಂತ್ರಿಯಾಗಿ ಇದ್ದದ್ದು ಕೇವಲ ಎರಡು ವರ್ಷ. ಆಶ್ರಯ, ಆರಾಧನೆ, ಗ್ರಾಮೀಣ ಕೃಪಾಂಕ ಅವರ ಕೊಡುಗೆ. ಈ ದೇಶದಲ್ಲಿ ರೈತರಿಗೆ ಉಚಿತ ವಿದ್ಯುತ್ ಕೊಟ್ಟ ಮೊದಲ ಮುಖ್ಯಮಂತ್ರಿ ಅವರು. ಬಡವರು, ರೈತರು, ಜನಸಾಮಾನ್ಯರ ಬಗ್ಗೆ ಅವರಿಗಿದ್ದ ಕಾಳಜಿ ಅನನ್ಯ. ಬಂಗಾರಪ್ಪ ಅವರಂತೆ ಜನಪರ ಕಾಳಜಿ ಹೊಂದಿರುವ ಮತ್ತೊಬ್ಬ ವ್ಯಕ್ತಿ ಎಂದರೆ ಎಚ್.ಡಿ. ಕುಮಾರಸ್ವಾಮಿ~ ಎಂದರು.`ಬಂಗಾರಪ್ಪ ಅವರ ಅಭಿಮಾನಿಗಳೆಲ್ಲರೂ ಜೆಡಿಎಸ್ ಬೆಂಬಲಿಸಬೇಕು. ಬಂಗಾರಪ್ಪ ಅವರಂತೆ ಛಲದಿಂದ ದುಡಿದು ಜೆಡಿಎಸ್‌ನ್ನು ಅಧಿಕಾರಕ್ಕೆ ತಂದು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಬೇಕು~ ಎಂದು ಕೋರಿದರು.`ಎರಡು ತಿಂಗಳ ಹಿಂದೆ ನಮ್ಮ ತಂದೆ ನಿಧನರಾದರು. ಅವರ ಅಗಲುವಿಕೆಯ ನೋವಿನಿಂದ ನಾನಿನ್ನೂ ಹೊರಬಂದಿಲ್ಲ. ಜೆಡಿಎಸ್‌ನ ಹಿರಿಯರು ಹಾಗೂ ನನ್ನ ತಂದೆಯ ಆಶೀರ್ವಾದದಿಂದ ಈ ಹುದ್ದೆ ನನಗೆ ಬಂದಿದೆ. ಪಕ್ಷ ವಹಿಸಿರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದೇನೆ~ ಎಂದರು.`ಬಿಜೆಪಿ ಸರ್ಕಾರ ಜನರ ನಂಬಿಕೆಗೆ ದ್ರೋಹ ಬಗೆದಿದೆ. ವೈಯಕ್ತಿಕ ಅಭಿವೃದ್ಧಿಯೇ ಅವರ ಏಕಮೇವ ಗುರಿಯಾಗಿದೆ. ಶಿವಮೊಗ್ಗದಲ್ಲಿ ಕಟ್ಟಡ ನಿರ್ಮಿಸುವುದರಲ್ಲಿಯೇ ಯಡಿಯೂ ರಪ್ಪ-ಈಶ್ವರಪ್ಪ ಪೈಪೋಟಿ ನಡೆಸಿದ್ದಾರೆ. ಸಾವಿರ ರೂಪಾಯಿ ನಿರುದ್ಯೋಗ ಭತ್ಯೆ ನೀಡುವುದಾಗಿ ಹೇಳಿದ್ದ ಬಿಜೆಪಿ ಬಿಡಿಗಾಸನ್ನೂ ಕೊಟ್ಟಿಲ್ಲ.ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ, ಭಾಗ್ಯಲಕ್ಷ್ಮಿ ಮತ್ತಿತರ ಯೋಜನೆಗಳು ಕುಮಾರಸ್ವಾಮಿ ಅವರ ಕೊಡುಗೆಗಳು. ಪಕ್ಷದ ಕಾರ್ಯಕರ್ತರು ಇದನ್ನೆಲ್ಲ  ಜನತೆಗೆ ತಿಳಿಸಬೇಕು~ ಎಂದು ಸಲಹೆ ನೀಡಿದರು.`ಬಿಜೆಪಿಯವರು ಕರ್ನಾಟಕದ ಮಾನವನ್ನೇ ಹರಾಜು ಹಾಕಿದ್ದಾರೆ. ದೇವಸ್ಥಾನದಷ್ಟೇ ಪವಿತ್ರವಾದ ವಿಧಾನ ಸೌಧಕ್ಕೂ ಕಳಂಕ ತಂದಿದ್ದಾರೆ. ಇದರಿಂದಾಗಿ ಕರ್ನಾಟಕದ ಜನತೆ ತಲೆತಗ್ಗಿಸುವಂತಾಗಿದೆ. ಯಡಿಯೂರಪ್ಪ ಈಗ ಸದಾನಂದ ಗೌಡರಿಗೇ ಆಪರೇಷನ್ ಮಾಡಲು ಹೊರಟಿದ್ದಾರೆ.ಕುರ್ಚಿ ಉಳಿಸಿಕೊಳ್ಳುವುದೇ ಸದಾನಂದಗೌಡರ ನಿತ್ಯದ ಕೆಲಸವಾಗಿದೆ. ಕುರ್ಚಿ ಉಳಿಯುತ್ತದೆ ಎಂದರೆ ಅವರು ಶೋಭಾ ಕರಂದ್ಲಾಜೆ ಅವರ ಮನೆಗೂ ಹೋಗಬಹುದು~ ಎಂದರು.`ಕರ್ನಾಟಕಕ್ಕೆ ಶಾಪವಾಗಿರುವ ಕೆಟ್ಟ ಬಿಜೆಪಿ  ಸರ್ಕಾರ ಇನ್ನು ಸಾಕು. ಕರ್ನಾಟಕಕ್ಕೆ ಉತ್ತಮ ದಿನಗಳು ಬರಬೇಕೆಂದರೆ ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು~ ಎಂದು ಹೇಳಿದರು.`ಜೆಡಿಎಸ್ ಈಗ ಯುವಕರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಪಕ್ಷ ಸಂಘಟನೆ, ಚುನಾವಣೆ, ಅಧಿಕಾರದಲ್ಲಿಯೂ ಯುವಕರಿಗೆ ಸಿಂಹ ಪಾಲು ಕೊಡುವುದಾಗಿ ಕುಮಾರಣ್ಣ ಹೇಳಿದ್ದಾರೆ. ರಾಜ್ಯದ ಭವಿಷ್ಯ ರೂಪಿಸಲಿಕ್ಕಾಗಿ ಯುವಜನತೆ ಜೆಡಿಎಸ್‌ಗೆ ಬಂದು ಶಕ್ತಿ ತುಂಬಬೇಕು. ದಾವಣಗೆರೆಯಲ್ಲಿ ಏಪ್ರಿಲ್ 22ರಂದು ನಡೆಯುವ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಆಗಮಿಸಿ ನಮ್ಮ ಶಕ್ತಿಯನ್ನು ಪ್ರದರ್ಶಿಸಬೇಕು~ ಎಂದು ವಿನಂತಿಸಿದರು.`ಯತ್ನಾಳರ ಅಭಿಮಾನಿ ನಾನು. ಯತ್ನಾಳರು ಈ ರಾಜ್ಯದ ಆಡಳಿತ ಚುಕ್ಕಾಣಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಕುಮಾರಸ್ವಾಮಿ ಅದನ್ನು ಮಾಡುತ್ತಾರೆ. ಯತ್ನಾಳರದ್ದು ಸ್ಪೇಷಲ್ ಮಾತು. ಅವರ ಭಾಷಣದಲ್ಲಿ ಹಾಸ್ಯದ ಜೊತೆಗೆ ಚಿಂತನೆಯೂ ಇರುತ್ತದೆ~ ಎಂದು ಮಧು ಶ್ಲಾಘಿಸಿದರು.ಮೆರವಣಿಗೆ: ವಿಜಾಪುರ ನಗರಕ್ಕೆ ಆಗಮಿಸಿದ ಮಧು ಬಂಗಾರಪ್ಪ ಅವರನ್ನು ಇಲ್ಲಿಯ ಅಥಣಿ ರಸ್ತೆಯಲ್ಲಿ ಬರ ಮಾಡಿಕೊಂಡ ಜೆಡಿಎಸ್ ಯುವ ಕಾರ್ಯಕರ್ತರು, ಬೈಕ್ ರ‌್ಯಾಲಿಯ ಮೂಲಕ ತೆರೆದ ವಾಹನದಲ್ಲಿ ಅವರನ್ನು ಮೆರವಣಿ ಗೆಯ ಮೂಲಕ ಸಮಾರಂಭ ನಡೆದ ಚಾಂದನಿ ಹಾಲ್‌ಗೆ ಕರೆತಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.