ಶುಕ್ರವಾರ, ಮೇ 7, 2021
19 °C

ಜೆಡಿಎಸ್‌ನಿಂದ ರಾಜ್ಯ ಪ್ರವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿನ ಬರಪೀಡಿತ ಪ್ರದೇಶಗಳ ಜನರ ಸಮಸ್ಯೆಗಳನ್ನು ಅರಿಯಲು ಜೆಡಿಎಸ್ ಮುಖಂಡರು ಇದೇ 16ರಿಂದ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ ಇಲ್ಲಿ ತಿಳಿಸಿದರು.ಪಕ್ಷದ ಕಚೇರಿಯಲ್ಲಿ ಹಿರಿಯ ಮುಖಂಡರು ಸಭೆ ಸೇರಿ ಬರ ಪರಿಸ್ಥಿತಿಯ ಅವಲೋಕನ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರು, ಮುಖಂಡರ ನೇತೃತ್ವದಲ್ಲಿ ಹತ್ತು ತಂಡಗಳನ್ನು ರಚಿಸಲಾಗುವುದು. ತಂಡದ ಪಟ್ಟಿಯನ್ನು ಇದೇ 9ರಂದು ಪ್ರಕಟಿಸಲಾಗುವುದು ಎಂದರು.ಪ್ರತಿಯೊಂದು ವಿಧಾನ ಸಭಾ ಕ್ಷೇತ್ರಕ್ಕೆ ತಲಾ 30 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದೆ. ಇದಲ್ಲದೆ ಬರ ಪರಿಹಾರ ಕಾರ್ಯಗಳಿಗೆ 360 ಕೋಟಿ ರೂಪಾಯಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದ್ದಾರೆ. ಸರ್ಕಾರ ನೀಡಿರುವ ಹಣ ಎಷ್ಟರಮಟ್ಟಿಗೆ ಸದ್ಭಳಕೆಯಾಗಿದೆ. ಜನರ ನಿಜವಾದ ಸಮಸ್ಯೆ ಏನು? ಏನಾದರೂ ಲೋಪಗಳು ಆಗಿವೆಯೇ ಎಂದು ಪರಿಶೀಲಿಸಲಾಗುವುದು ಎಂದು ತಿಳಿಸಿದರು.ಕೇಂದ್ರ ಮತ್ತು ರಾಜ್ಯ ಸರ್ಕಾರ ಬರ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲವಾದರೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಇದೇ 24ರಿಂದ ಸಂಸತ್ ಅಧಿವೇಶನ ಪುನರಾರಂಭವಾಗಲಿದ್ದು, ರಾಜ್ಯದಲ್ಲಿನ ಬರ ಪರಿಸ್ಥಿತಿ ಬಗ್ಗೆ ಲೋಕಸಭೆಯಲ್ಲಿ ಪ್ರಸ್ತಾಪಿಸಲಾಗುವುದು ಎಂದರು.ಪ್ರವಾಸದ ನಂತರ ರಾಜ್ಯದಲ್ಲಿನ ಬರ ಪರಿಸ್ಥಿತಿಯ ನೈಜ ಚಿತ್ರಣವನ್ನು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡಲಾಗುವುದು. ಪಕ್ಷದ ಸಂಘಟನೆಗಾಗಿ 20 ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿದ್ದ ಸಮಾವೇಶಗಳನ್ನು ಬರಗಾಲದ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ ಎಂದು ತಿಳಿಸಿದರು.ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ಸಂಸದ ಎನ್.ಚೆಲುವರಾಯಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ, ಮುಖಂಡರಾದ ಬಸನಗೌಡ ಪಾಟೀಲ ಯತ್ನಾಳ್, ಬಸವರಾಜ ಹೊರಟ್ಟಿ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.