ಸೋಮವಾರ, ಮೇ 17, 2021
23 °C
ಇಂದು ಪಟ್ನಾದಲ್ಲಿ ನಿರ್ಣಾಯಕ ಸಭೆ

ಜೆಡಿಯು-ಬಿಜೆಪಿ ದೋಸ್ತಿ ಅಂತ್ಯ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ/ಪಟ್ನಾ(ಪಿಟಿಐ): ಬಿಹಾರದಲ್ಲಿ ಬಿಜೆಪಿ-ಜೆಡಿಯು 17 ವರ್ಷದ ಮೈತ್ರಿ ಮುರಿದು ಬೀಳುವುದು ಬಹುತೇಕ ಖಚಿತವಾಗಿದ್ದು ಪಟ್ನಾದಲ್ಲಿ ಶನಿವಾರ ಆರಂಭವಾಗಲಿರುವ ಎರಡು ದಿನಗಳ ಜೆಡಿಯು ಸಭೆಯಲ್ಲಿ ಈ ಕುರಿತು ಅಧಿಕೃತ ಘೊಷಣೆ ಹೊರಬೀಳುವುದೊಂದೆ ಬಾಕಿ ಉಳಿದಿದೆ.`ಪರಿಸ್ಥಿತಿ ಹಿಂದಿರುಗಿ ಬಾರದ ಹಂತಕ್ಕೆ ತಲುಪಿದೆ' ಎಂದು ನವದೆಹಲಿಯಲ್ಲಿ ಪ್ರತಿಕ್ರಿಯಿಸಿರುವ ಜೆಡಿಯು ಅಧ್ಯಕ್ಷ ಹಾಗೂ ಎನ್‌ಡಿಎ ಸಂಚಾಲಕ ಶರದ್ ಯಾದವ್, ಸಭೆಯಲ್ಲಿ ಭಾಗವಹಿಸಲು ಶನಿವಾರ ಪಟ್ನಾಕ್ಕೆ ತೆರಳಲಿದ್ದಾರೆ. ಬಿಜೆಪಿ ಜತೆ ಮೈತ್ರಿಯ ಕುರಿತು ಅಂತಿಮ ನಿರ್ಧಾರ ಹೊರಬೀಳಲಿರುವ ಕಾರಣ ಜೆಡಿಯು ಸಭೆ ಭಾರಿ ಮಹತ್ವ ಪಡೆದುಕೊಂಡಿದೆ.`ಬಿಜೆಪಿ ಬಾಂಧವ್ಯವನ್ನು ಸರಿಪಡಿಸುವ ಎಲ್ಲ ಮಾರ್ಗಗಳೂ ಮುಚ್ಚಿವೆಯೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ, `ಎಲ್ಲ ಬಾಗಿಲುಗಳು ಮುಚ್ಚಿಲ್ಲ. ಇನ್ನೂ ಅವಕಾಶಗಳು ಮುಕ್ತವಾಗಿವೆ' ಎಂದು ಯಾದವ್ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಶಿವಾನಂದ ತಿವಾರಿ ಪ್ರತಿಕ್ರಿಯಿಸಿದ್ದಾರೆ. ಪಟ್ನಾ ಸಭೆಯಲ್ಲಿ ಈ ಕುರಿತು ಖಂಡಿತವಾಗಿಯೂ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದೂ ಸ್ಪಷ್ಟವಾಗಿ ಹೇಳಿದ್ದಾರೆ.ಬಿಜೆಪಿ ಜತೆ ಸಂಬಂಧ ಹಳಸಿರುವುದು ನಿಜ ಎಂದು ಒಪ್ಪಿಕೊಂಡಿರುವ ಬಿಹಾರ ಮುಖ್ಯಮಂತ್ರಿ  ನಿತೀಶ್ ಕುಮಾರ್, ಪರಿಸ್ಥಿತಿ ಗಂಭೀರವಾಗಿದ್ದು ಸಂಬಂಧ ಮುಂದುವರಿಸುವುದು ತುಂಬಾ ಕಷ್ಟ ಎಂದಿದ್ದಾರೆ.ತಮ್ಮ ಎರಡು ದಿನಗಳ `ಸೇವಾ ಯಾತ್ರೆ' ಮುಗಿಸಿಕೊಂಡು ಪಟ್ನಾಗೆ ಹಿಂದಿರುಗಿರುವ ನಿತೀಶ್, ಮೈತ್ರಿಕೂಟದ ಸಮಸ್ಯೆಗಳು ಮುಂದುವರಿದಿವೆ ಎಂದು ಸೂಚ್ಯವಾಗಿ ಹೇಳಿದ್ದು, ಎನ್‌ಡಿಎ ಛಿದ್ರವಾಗುವ ಸುಳಿವು ನೀಡಿದ್ದಾರೆ. ಈ ಮಧ್ಯೆ, ಬಿಜೆಪಿ ಕೂಡ ತನ್ನ ನಿಲುವಿಗೆ ಅಂಟಿಕೊಂಡಿದ್ದು, ಮೋದಿ ನೇಮಕವನ್ನು ಮತ್ತೆ ಸಮರ್ಥಿಸಿಕೊಂಡಿದೆ. `ಮೋದಿ ನಾಯಕತ್ವ ಕೇವಲ ಬಿಜೆಪಿಗೆ ಮಾತ್ರವಲ್ಲ, ಜೆಡಿಯುಗೂ ಅಗತ್ಯವಾಗಿದೆ' ಎಂದು ಬಿಜೆಪಿ ನಾಯಕ ರಾಜೀವ್ ಪ್ರತಾಪ್ ರೂಡಿ ಪುನರುಚ್ಚರಿಸಿದ್ದಾರೆ.ಸದ್ಯದ ರಾಷ್ಟ್ರ ರಾಜಕಾರಣದ ಬೆಳವಣಿಗೆ ಹಿನ್ನೆಲೆಯಲ್ಲಿ ಸಿಪಿಐ ನಾಯಕ ಸೀತಾರಾಂ ಯೆಚೂರಿ ರಾಜಧಾನಿಯಲ್ಲಿ ಶುಕ್ರವಾರ ಯಾದವ್ ಅವರನ್ನು ಭೇಟಿಯಾಗಿ ಚರ್ಚಿಸಿರುವುದು ಭಾರಿ ಕುತೂಹಲ ಹುಟ್ಟಿಸಿದೆ. ಮುಂಬರುವ ಲೋಕಸಭಾ ಚುನಾವಣೆಗೂ ಮೊದಲೇ ತೃತೀಯ ರಾಜಕೀಯ ಶಕ್ತಿಯನ್ನು ಹುಟ್ಟು ಹಾಕುವ ಕುರಿತು ಉಭಯ ನಾಯಕರು ಅರ್ಧಗಂಟೆ ಚರ್ಚಿಸಿದರು ಎನ್ನಲಾಗಿದೆ.ಎನ್‌ಡಿಎ ಛಿದ್ರಕ್ಕೆ ಬಿಜೆಪಿ ಹೊಣೆ: `ಬಿಜೆಪಿ ಮೋದಿ ಅವರನ್ನು ಬಿಂಬಿಸುವ ಮೂಲಕ ಪರೋಕ್ಷವಾಗಿ ಜೆಡಿಯು ಎನ್‌ಡಿಎದಿಂದ ಹೊರಬೀಳುವಂತೆ ಮಾಡಿದೆ. ಎನ್‌ಡಿಎ ಮೈತ್ರಿಕೂಟವನ್ನು ಒಡೆದ ಆರೋಪ ಜೆಡಿಯು ಮೇಲೆ ಬರುವಂತೆ ವ್ಯವಸ್ಥಿತ ಪಿತೂರಿ ನಡೆಸಿದೆ. ಆದರೆ, ವಾಸ್ತವವೇ ಬೇರೆ' ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಶಿವಾನಂದ ತಿವಾರಿ ಆರೋಪಿಸಿದ್ದಾರೆ.ಈ ನಡುವೆ ಸರ್ಕಾರದ ಉಳಿವಿಗೆ ಶಾಸಕರನ್ನು ಕಲೆ ಹಾಕುತ್ತಿರುವ ಜೆಡಿಯು, ಬಿಜೆಪಿ ಬುಟ್ಟಿಗೆ ಕೈಹಾಕಿದೆ ಎಂಬ ವರದಿಗಳು ಹರಿದಾಡುತ್ತಿವೆ. ಆದರೆ, ಎರಡೂ ಪಕ್ಷಗಳು ಈ ವರದಿಯನ್ನು ನಿರಾಕರಿಸಿವೆ. ಬಿಜೆಪಿಯ ಹೊರತಾಗಿಯೂ ಸರ್ಕಾರವನ್ನು ಸುಗಮವಾಗಿ ಮುನ್ನಡೆಸಲು ಕೇವಲ ನಾಲ್ವರು ಶಾಸಕರು ಸಾಕು. ಪಕ್ಷೇತರರು ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದಾರೆ. ಹೀಗಿರುವಾಗ ಹುಚ್ಚು ಸಾಹಸಕ್ಕೆ ನಾವೇಕೆ ಕೈಹಾಕಬೇಕು' ಎಂದು ಪಕ್ಷದ ವಕ್ತಾರ ರಾಜೀವ್ ರಂಜನ್ ಪ್ರಶ್ನಿಸಿದ್ದಾರೆ.`ಪಕ್ಷ ಒಡೆಯುವು ಸುಲಭವಲ್ಲ': ರಾಜ್ಯ ರಾಜಕಾರಣದ ಕ್ಷಿಪ್ರ ಬೆಳವಣಿಗೆಗಳ ಕುರಿತು ರಣತಂತ್ರ ರೂಪಿಸಲು ಬಿಜೆಪಿ ಶಾಸಕರು ಮತ್ತು ನಾಯಕರು ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ನಿವಾಸದಲ್ಲಿ ಮಧ್ಯಾಹ್ನ ಸಭೆ ಸೇರಿ ಚರ್ಚಿಸಿದರು. `ಬಿಜೆಪಿಯನ್ನು ಒಡೆಯುವುದು ಸುಲಭದ ಮಾತಲ್ಲ' ಎಂಬ ನಿರ್ಣಯಕ್ಕೆ ಪಕ್ಷದ ನಾಯಕರು ಬಂದಿದ್ದಾರೆ ಎನ್ನಲಾಗಿದೆ.ನಿತೀಶ್ ಶಾಯರಿ

`ದುವಾ ದೇತೆ ಹೈ ಜೀನೆ ಕಿ, ದವಾ ಕರ‌್ತೆ ಹೈ ಮರ‌್ನೆ ಕಿ. ದುಶ್ವಾರಿ ಕಾ ಸಬಾಬ್ ಯೇ ಹೈ' (ಬದುಕುವ ಆಶೀರ್ವಾದ ಮಾಡಿ, ಸಾಯುವ ಔಷಧಿ ನೀಡಿದಂತೆ) ಎಂಬ ಶಾಯರಿ ಮೂಲಕ ಪರಿಸ್ಥಿತಿ ಗಂಭೀರತೆಯನ್ನು ನಿತೀಶ್ ಮಾರ್ಮಿಕವಾಗಿ ವಿಶ್ಲೇಷಿಸಿದ್ದಾರೆ.`ಪಕ್ಷದಲ್ಲಿ ಕೆಲವರು ದೀರ್ಘ ಕಾಲದ ದೋಸ್ತಿಯನ್ನು ಉಳಿಸಿಕೊಳ್ಳುವಂತೆಯೂ, ಇನ್ನೂ ಕೆಲವರು ಸಂಬಂಧ ಕಡಿದುಕೊಳ್ಳುವಂತೆಯೂ ಸಲಹೆ ಮಾಡುತ್ತಿದ್ದಾರೆ. ಎಲ್ಲರೂ ಒಟ್ಟಿಗೆ ಕುಳಿತು ತೀರ್ಮಾನ ತೆಗೆದುಕೊಳ್ಳುತ್ತೇವೆ' ಎಂದು ಹೇಳಿದ್ದಾರೆ.ಎನ್‌ಡಿಎ ಮೈತ್ರಿಕೂಟ ತೊರೆಯುವ ಕುರಿತಂತೆ ಮಿತ್ರಪಕ್ಷ ಬಿಜೆಪಿಗೆ ತಾನು ಯಾವುದೇ ಗಡುವು ವಿಧಿಸಿಲ್ಲ ಎಂದು ಯಾದವ್ ಸ್ಪಷ್ಟಪಡಿಸಿದ್ದಾರೆ. `ಎನ್‌ಡಿಎ ತೊರೆಯುವ ಕುರಿತು ನಾವು ಬಿಜೆಪಿಗೆ ಗಡುವು ವಿಧಿಸಿದ್ದೇವೆ ಎಂಬ ವರದಿ ಶುದ್ಧ ಸುಳ್ಳು. ಬಿಜೆಪಿಯಲ್ಲಿ ಕೆಲವು ದಿನಗಳಿಂದ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ನಮಗೆ ಆತಂಕವಿರುವುದು ನಿಜ' ಎಂದು ಅವರು ಇದೇ ವೇಳೆ ಒಪ್ಪಿಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.