ಶನಿವಾರ, ಮಾರ್ಚ್ 6, 2021
20 °C

ಜೆನರಿಕ್ ಮದ್ದಾಗಲಿದೆ ಹಿತ್ತಲ ಗಿಡ

ಎ.ಎಂ.ಸುರೇಶ Updated:

ಅಕ್ಷರ ಗಾತ್ರ : | |

ಜೆನರಿಕ್ ಮದ್ದಾಗಲಿದೆ ಹಿತ್ತಲ ಗಿಡ

ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಲಭ್ಯವಾಗುವ ಜೆನರಿಕ್ ಔಷಧಿ ಭಾರತಕ್ಕೆ ಹೊಸದಲ್ಲ. ಇದರ ತಯಾರಿಕೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಆದರೆ `ಹಿತ್ತಲ ಗಿಡ ಮದ್ದಲ್ಲ~ ಎಂಬಂತೆ ನಮ್ಮಲ್ಲಿ ಇದರ ಬಳಕೆ ಇರಲಿಲ್ಲ. ಜನರಿಗೂ ಈ ಔಷಧಿಯ ಬಗ್ಗೆ ಅಷ್ಟಾಗಿ ಅರಿವು ಇರಲಿಲ್ಲ.ಆದರೆ ಈಚೆಗಷ್ಟೇ ರಾಜ್ಯದ ವೈದ್ಯಕೀಯ ಶಿಕ್ಷಣ ಇಲಾಖೆ `ಕೈಗೆಟುಕುವ ಬೆಲೆಯ ಔಷಧಿ ಸರಳ ಆಯ್ಕೆ~ ಎಂಬ ಧ್ಯೇಯದೊಂದಿಗೆ ದೇಶದಲ್ಲಿಯೇ ಮೊದಲ ಬಾರಿಗೆ ಜೆನರಿಕ್ ಔಷಧಿಯನ್ನು ಪರಿಚಯಿಸಿದೆ. ಪ್ರಾಯೋಗಿಕವಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಕಾರ್ಯಾರಂಭ ಮಾಡಿರುವ `ಜೆನರಿಕ್ ಔಷಧಿ ಮಳಿಗೆ~ಗೆ ಕೆಲವೇ ದಿನಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಎಲ್ಲ ವರ್ಗದ ಜನರಿಗೂ ಜೆನರಿಕ್ ಔಷಧಿಗಳನ್ನು ಶೇ 50ರಷ್ಟು ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ. ಬಡವರಿಗಂತೂ ಈ ಔಷಧಿ ವರದಾನವಾಗಿದೆ. ಆರ್ಥಿಕ ಸಂಕಷ್ಟ, ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದಾಗಿ ದುಬಾರಿ ಬೆಲೆಯ ಔಷಧಿ ಮತ್ತು ಚಿಕಿತ್ಸೆಗೆ ತಗಲುವ ವೆಚ್ಚವನ್ನು ಭರಿಸಲಾಗದೆ ಕಂಗಾಲಾಗಿರುವ ಬಡವರು, ಮಧ್ಯಮ ವರ್ಗದವರಿಗಂತೂ ಜೆನರಿಕ್ ಔಷಧಿಗಳು ತುಸು ನೆಮ್ಮದಿ ಮೂಡಿಸಿವೆ.ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯಗಳಿಗೆ ಹೊಂದಿಕೊಂಡಿರುವ ಆಸ್ಪತ್ರೆಗಳಲ್ಲಿ ಜೆನರಿಕ್ ಔಷಧಿ ಮಳಿಗೆಗಳು ಆರಂಭವಾಗುವುದರಿಂದ ರಾಜಧಾನಿಯಲ್ಲಿ ಅಷ್ಟೇ ಅಲ್ಲದೆ, ರಾಜ್ಯದ ಬೇರೆ ಬೇರೆ ಭಾಗಗಳ ಜನರಿಗೂ ಈ ಔಷಧಿಗಳು ಲಭ್ಯವಾಗಲಿವೆ. ಔಷಧಿ ಖರೀದಿಗೆ ಪ್ರಾದೇಶಿಕತೆಯ ಮಿತಿ ಇಲ್ಲ. ವೈದ್ಯರು ಶಿಫಾರಸು ಮಾಡಿರುವ ಚೀಟಿ ನೀಡಿ ಯಾರು ಬೇಕಾದರೂ ಖರೀದಿ ಮಾಡಬಹುದಾಗಿದೆ.ರಾಜ್ಯ ಸಹಕಾರಿ ಗ್ರಾಹಕರ ಮಹಾಮಂಡಳಿಯ ಸಹಯೋಗದೊಂದಿಗೆ `ಜನತಾ ಬಜಾರ್ ಜೆನರಿಕ್ ಔಷಧಿ ಮಳಿಗೆ~ಗೆ ಚಾಲನೆ ದೊರೆತಿದೆ. ಬೆಂಗಳೂರಿನ ಬೌರಿಂಗ್, ಕಿದ್ವಾಯಿ, ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ ಸೇರಿದಂತೆ ರಾಜ್ಯದ 20 ಕಡೆ ಸದ್ಯದಲ್ಲೇ ಜೆನರಿಕ್ ಔಷಧಿ ಮಳಿಗೆಗಳು ಆರಂಭವಾಗಲಿವೆ.ನಮ್ಮಲ್ಲಿ ಬಡವರು, ಮಧ್ಯಮ ವರ್ಗದವರು ಹಾಗೂ ನಿವೃತ್ತ ನೌಕರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರಲ್ಲಿ ಬಹುತೇಕರಿಗೆ ಆರೋಗ್ಯ ವಿಮೆ ಇಲ್ಲ. ಜೀವನ ನಿರ್ವಹಣೆಯ ಬಹುಪಾಲು ಹಣವನ್ನು ಆರೋಗ್ಯಕ್ಕೇ ವೆಚ್ಚ ಮಾಡುವ ಪರಿಸ್ಥಿತಿ ಇದೆ. ಅಂತಹವರಿಗೆ ಜೆನರಿಕ್ ಔಷಧಿಗಳ ಬಳಕೆಯಿಂದ ಆರ್ಥಿಕವಾಗಿ ಅನುಕೂಲವಾಗಲಿದೆ. ಸರ್ಕಾರಿ ಆಸ್ಪತ್ರೆಗಳ ವೈದ್ಯರು ಅಷ್ಟೇ ಅಲ್ಲದೆ, ಖಾಸಗಿ ಆಸ್ಪತ್ರೆಗಳ ವೈದ್ಯರು ಶಿಫಾರಸು ಮಾಡುವ ಔಷಧಿಗಳನ್ನು ಸಹ ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ.ಭಾರತದಲ್ಲಿನ ಸಿಪ್ಲಾ, ಟೊರೆಂಟ್, ಸನ್‌ಫಾರ್ಮಾ, ಇಂಟಾಸ್ ಕಂಪೆನಿಗಳು ಬ್ರಾಂಡೆಡ್ ಮತ್ತು ಜೆನರಿಕ್ ಔಷಧಿಗಳನ್ನು ಉತ್ಪಾದಿಸುತ್ತಿದ್ದು, ಅವೆಲ್ಲ ಹೆಚ್ಚಾಗಿ ವಿದೇಶಗಳಿಗೆ ಸರಬರಾಜಾಗುತ್ತಿವೆ. ಅದರಲ್ಲೂ ಅಮೆರಿಕ, ಯೂರೋಪ್ ಹೆಚ್ಚಿನ ಪ್ರಯೋಜನ ಪಡೆಯುತ್ತಿವೆ. ಆ ಕಂಪೆನಿಗಳ ಔಷಧಿಗಳನ್ನು ನಮ್ಮ ದೇಶದಲ್ಲಿನ ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ತಲುಪಿಸುವ ಬಗ್ಗೆ ಯಾರೂ ಗಮನಹರಿಸಿರಲಿಲ್ಲ. ರಾಜ್ಯ ಸರ್ಕಾರ ತಡವಾಗಿ ಆದರೂ ಈ ಬಗ್ಗೆ ಎಚ್ಚೆತ್ತುಕೊಂಡಿರುವುದು ಸಮಾಧಾನದ ಸಂಗತಿ ಎಂಬ ಮಾತುಗಳು ಕೇಳಿಬಂದಿವೆ.ಸಿಪ್ಲಾ, ಇಂಟಾಸ್ ಕಂಪೆನಿಗಳು ಜೆನರಿಕ್ ಔಷಧಿಗಳನ್ನು ಕಡಿಮೆ ದರದಲ್ಲಿ ನೀಡಲು ಮುಂದೆ ಬಂದಿದ್ದು, ಕಂಪೆನಿಯಿಂದ ನೇರವಾಗಿ ಜನತಾ ಬಜಾರ್‌ನ ಜೆನರಿಕ್ ಮಳಿಗೆಗಳಿಗೆ ಔಷಧಿ ಪೂರೈಕೆಯಾಗಲಿದೆ.`ಸರ್ವರೂ ಆರೋಗ್ಯವಂತರಾಗಿರಬೇಕು. ಅತ್ಯವಶ್ಯಕ ಮತ್ತು ಜೀವರಕ್ಷಕ ಔಷಧಿಗಳು ಎಲ್ಲ ಸಂದರ್ಭದಲ್ಲೂ ಬಡವರಿಗೆ ಸುಲಭವಾಗಿ ದೊರೆಯಬೇಕು, ಅವು ಸುರಕ್ಷಿತ ಮತ್ತು ಗುಣಮಟ್ಟದ್ದಾಗಿರಬೇಕು, ಅವಶ್ಯಕತೆ ಇದ್ದವರಿಗೆ ಕಡಿಮೆ ದರದಲ್ಲಿ ದೊರೆಯಬೇಕು~ ಎಂಬುದು ವಿಶ್ವ ಆರೋಗ್ಯ ಸಂಸ್ಥೆಯ ಆಶಯ. ಅಲ್ಲದೆ ಆಯಾ ದೇಶಗಳು ಕಡು ಬಡವರು, ಮಧ್ಯಮ ವರ್ಗದವರಿಗೆ ಅತ್ಯಂತ ಕಡಿಮೆ ದರದಲ್ಲಿ ಔಷಧಿಗಳನ್ನು ಪೂರೈಸಬೇಕು ಎಂದು ವಿಶ್ವಸಂಸ್ಥೆಯು ತನ್ನ ನೀತಿಯಲ್ಲಿ ತಿಳಿಸಿದೆ.ಆದರೆ ಇದುವರೆಗೆ ಯಾರೂ ಈ ನಿಟ್ಟಿನಲ್ಲಿ ಗಮನಹರಿಸಿರಲಿಲ್ಲ. ಕೊಳ್ಳುವ ಸಾಮರ್ಥ್ಯ ಇರಲಿ, ಇಲ್ಲದಿರಲಿ ಜನಸಾಮಾನ್ಯರು ದುಬಾರಿ ಬೆಲೆಯ ಬ್ರಾಂಡೆಡ್ ಔಷಧಿಗಳನ್ನೇ ಅವಲಂಬಿಸಬೇಕಾಗಿತ್ತು. ಆದರೆ ಈಗ ವೈದ್ಯಕೀಯ ಶಿಕ್ಷಣ ಇಲಾಖೆಯೇ ಜೆನರಿಕ್ ಔಷಧಿ ಮಳಿಗೆಗಳನ್ನು ತೆರೆಯುತ್ತಿರುವುದರಿಂದ `ಎಲ್ಲರಿಗೂ ಆರೋಗ್ಯ~ ಎಂಬ ಮಾತಿಗೆ ಅರ್ಥ ಬಂದಂತಾಗಿದೆ.

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.