ಬುಧವಾರ, ಜನವರಿ 22, 2020
21 °C

ಜ್ಞಾನಪೀಠ ಪ್ರಾತಿನಿಧಿಕ ಅಲ್ಲ

–ಜಿ.ಎನ್‌.ನಿಶಾಂತ,ಬೆಂಗಳೂರು. Updated:

ಅಕ್ಷರ ಗಾತ್ರ : | |

ಜ್ಞಾನಪೀಠ ಪ್ರಶಸ್ತಿ ವಿಜೇತರ ಫೋಟೊಗಳಷ್ಟೇ ರಾಜ್ಯದ ಬಹುತೇಕ ಶಾಲೆ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ ಘಟಕಗಳಲ್ಲಿ ರಾರಾಜಿಸುತ್ತಿರುವ ಔಚಿತ್ಯ­ವನ್ನು ವಿಜಯಕಾಂತ ಪಾಟೀಲ ಅವರು ವಾಚಕರ­ವಾಣಿಯಲ್ಲಿ (ನ.27) ಪ್ರಶ್ನಿಸಿರುವುದು ಸರಿಯಾ­ಗಿದೆ. ಸರಸ್ವತಿ ಸಮ್ಮಾನ್‌, ಮ್ಯಾಗ್ಸೆಸೆ ಪ್ರಶಸ್ತಿಗಳು ಅದಕ್ಕೆ ಸರಿಸಮಾನವಾದರೂ ಅವನ್ನು ತಾತ್ಸಾರ ಮಾಡಲಾಗುತ್ತಿದೆ ಎಂದು ವಿಜಯ ರಾಘವ ಅವರು ಈ ವಾದ ಸರಣಿಯನ್ನು ಮುಂದುವ­ರಿಸಿ ದ್ದಾರೆ. ಇವರಿಬ್ಬರೂ ಎತ್ತಿರುವ ಪ್ರಶ್ನೆಗಳು ಔಚಿತ್ಯಪೂರ್ಣವಾಗಿವೆ.ಕನ್ನಡ ಸಾಹಿತ್ಯ ಪರಿಷತ್‌ ಸಂಘಟಿಸುವ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷ ಸ್ಥಾನವೂ ಅಷ್ಟೇ ಮಹ­ತ್ವದ್ದು. ಜಿ.ವೆಂಕಟಸುಬ್ಬಯ್ಯ ಅವರಂತಹ ಭಾಷಾ ತಜ್ಞ, ಎಲ್‌.ಬಸವರಾಜು ಅವರಂತಹ ವಿದ್ವಾಂಸ, ಗೀತಾ ನಾಗಭೂಷಣ ಅವರಂತಹ ಮಹತ್ವದ ಕಥೆಗಾರ್ತಿಯರು ಸಮ್ಮೇಳನಾಧ್ಯಕ್ಷ­ರಾಗಿದ್ದಾರೆ. ವಿಪರ್ಯಾಸವೆಂದರೆ ಕಸಾಪ ಇವರನ್ನು ಮೆರೆಸುವುದಿಲ್ಲ, ಬದಲಾಗಿ ಜ್ಞಾನಪೀಠ ಪ್ರಶಸ್ತಿ ಪಡೆದವರನ್ನು ಹೊತ್ತುಕೊಂಡು ಕುಣಿದಾಡುತ್ತದೆ! ಇದುವರೆಗಿನ ಜ್ಞಾನಪೀಠ ಪ್ರಶಸ್ತಿ ಪಡೆದವರೆಲ್ಲ ಕನ್ನಡದ ಅನರ್ಘ್ಯ ರತ್ನಗಳೇ.

ಡಿವಿಜಿ, ಭೈರಪ್ಪ, ಲಂಕೇಶ್‌, ತೇಜಸ್ವಿ, ಕಣವಿ ಮುಂತಾ­ದವರಿಗೆ ಜ್ಞಾನ ಪೀಠ ಬಂದಿಲ್ಲ ಎಂದರೆ ಅವರ ಕೊಡುಗೆ ಜ್ಞಾನಪೀಠ ಪಡೆದವರಿಗಿಂತ ಕಡಿಮೆ­ಯದಲ್ಲ. ಹಾಗಾಗಿ ಜ್ಞಾನಪೀಠ ಪ್ರಶಸ್ತಿ ಬಂದವ­ರಷ್ಟನ್ನೇ  ಬಿಂಬಿಸಿದರೆ ಅದು ಕನ್ನಡ ಸಾಹಿತ್ಯ­ಲೋಕದ ಪ್ರಾತಿನಿಧಿಕ ಸ್ವರೂಪ ಆಗುವುದಿಲ್ಲ. ಶಾಲೆ, ಕಾಲೇಜು, ಪರಿಷತ್‌ ಗಳಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರ ಸ್ಮರಣೆ ಯನ್ನೂ ನಿರಂತರ ಮಾಡಿಕೊ­ಳ್ಳುವಂತಾಗಲಿ. ಸಂಗೀತ, ಚಿತ್ರಕಲೆ, ನಾಟಕ, ನೃತ್ಯದಲ್ಲಿ ಅಂತರ ರಾಷ್ಟ್ರೀಯ ಮಟ್ಟದ ಹೆಸರು ಮಾಡಿದವರಿದ್ದಾರೆ. ಅವರ ನೆನಪೂ ಬೇಡವೆ?

–ಜಿ.ಎನ್‌.ನಿಶಾಂತ, ಬೆಂಗಳೂರು.

ಪ್ರತಿಕ್ರಿಯಿಸಿ (+)