ಬುಧವಾರ, ಮೇ 12, 2021
24 °C

ಟಟ್ರಾ ಟ್ರಕ್ ವ್ಯವಹಾರ: ರವಿ ರಿಷಿ ವಿಚಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಸರ್ಕಾರಿ ಸ್ವಾಮ್ಯದ `ಭಾರತ್ ಅರ್ಥ್ ಮೂವರ್ಸ್‌ ಲಿ~. ಮುಖಾಂತರ ಸೇನೆಗೆ ಖರೀದಿಸಿದ `ಟಟ್ರಾ~ ಟ್ರಕ್ಕುಗಳ ವ್ಯವಹಾರದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿಬಿಐ ಅನಿವಾಸಿ ಭಾರತೀಯ ಉದ್ಯಮಿ ರವಿ ರಿಷಿ ಅವರನ್ನು ಪ್ರಶ್ನಿಸಿತು,ರವಿ ರಿಷಿ ಅವರಿಗೆ ಸೇರಿದ ಬ್ರಿಟನ್ ಮೂಲದ ವೆಕ್ಟ್ರಾ ಕಂಪೆನಿ ಕಾರ್ಯದರ್ಶಿ ಹಾಗೂ ಚಾರ್ಟೆಡ್ ಅಕೌಂಟೆಂಟ್ ಅವರಿಗೂ ಷೇರು ದಾಖಲೆಗಳ ಸಮೇತ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಸೂಚಿಸಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.ಬಿಇಎಂಎಲ್ ವೆಕ್ಟ್ರಾದಿಂದ ಟೆಟ್ರಾ ಟ್ರಕ್ಕುಗಳ ಬಿಡಿ ಭಾಗಗಳನ್ನು ತರಿಸಿಕೊಂಡು ಬೆಂಗಳೂರಿನಲ್ಲಿ ಜೋಡಿಸಿದ ನಂತರ ಸೇನೆಗೆ ಮಾರಾಟ ಮಾಡುತ್ತದೆ. ಟ್ರಕ್ಕುಗಳ ಖರೀದಿ ವ್ಯವಹಾರಗಳಿಗೆ ಸಂಬಂಧಿಸಿದಂತೆ ಪ್ರಥಮ ಮಾಹಿತಿ ವರದಿಯಲ್ಲಿ ರವಿ ರಿಷಿ ಹೆಸರು ಕಾಣಿಸಿಕೊಂಡ ನಂತರ ಸಿಬಿಐ ಅವರ ವಿಚಾರಣೆ ನಡೆಸುತ್ತಿರುವುದು ಇದು ಮೂರನೇ ಸಲ.ರಕ್ಷಣಾ ಪ್ರದರ್ಶನವೊಂದರಲ್ಲಿ ಭಾಗವಹಿಸಲು ಭಾರತಕ್ಕೆ ಬಂದಿರುವ ರವಿ ರಿಷಿ ಅವರಿಗೆ ದೇಶ ಬಿಡದಂತೆ ಸಿಬಿಐ ಸೂಚನೆ ನೀಡಿದೆ. ಅವರ ಪಾಸ್‌ಪೋರ್ಟ್ ಅನ್ನು ತನಿಖಾ ಸಂಸ್ಥೆ ವಶಕ್ಕೆ ಪಡೆದಿದೆ ಎನ್ನಲಾಗಿದೆ.ಸೇನಾ ಮುಖ್ಯಸ್ಥ ಜ. ವಿಜಯ ಕುಮಾರ್ ಸಿಂಗ್, `ಕಳಪೆ ದರ್ಜೆಯ ವಾಹನಗಳನ್ನು ಖರೀದಿಸಲು ನಿವೃತ್ತ ಲೆಫ್ಟಿನೆಂಟ್ ಜನರಲ್ ಒಬ್ಬರು ಲಾಬಿಗಾರನ ಜತೆಗೂಡಿ ತಮ್ಮ ಬಳಿಗೆ ಬಂದು 14 ಕೋಟಿ ಲಂಚದ ಆಮಿಷ ನೀಡಿದ್ದರು. ಈ ಸಂಗತಿಯನ್ನು ರಕ್ಷಣಾ ಸಚಿವರ ಗಮನಕ್ಕೆ ತಂದಿದ್ದೆ~ ಎಂದು ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ ಬಳಿಕ ಸಿಬಿಐ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದೆ.ಈ ಪ್ರಕರಣದಲ್ಲಿ ಸಿಬಿಐ ನಿವೃತ್ತ ಲೆ.ಜ. ತೇಜಿಂದರ್‌ಸಿಂಗ್ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ. ಸಿಬಿಐಗೆ ನೀಡಿರುವ ಹೇಳಿಕೆಯಲ್ಲಿ ಸೇನೆ ಮುಖ್ಯಸ್ಥರು ತೇಜಿಂದರ್ ಹೆಸರನ್ನು ಹೇಳಿದ್ದಾರೆಂದು ಕೆಲವು ಪತ್ರಿಕೆಗಳಲ್ಲಿ ಪ್ರಕಟಿಸಲಾಗಿದೆ.ಸೇನೆ ಮುಖ್ಯಸ್ಥರಿಗೆ ಲಂಚದ ಆಮಿಷ ತೋರಿದ ಕುರಿತು ಸಿಬಿಐ ಇನ್ನು ಮೊಕದ್ದಮೆ ದಾಖಲಿಸಬೇಕಿದೆ. ಕಳಪೆ ದರ್ಜೆಯ ವಾಹನಗಳ ಪೂರೈಕೆಗೆ ಒಪ್ಪಿಗೆ ನೀಡಲು ಲಂಚದ ಆಮಿಷ ತೋರಲಾಗಿತ್ತು ಎಂದು ಶುಕ್ರವಾರ ಸೇನೆ ಮುಖ್ಯಸ್ಥರು ಬರೆದಿರುವ ಪತ್ರವನ್ನು ಸಿಬಿಐ ಪರಿಶೀಲಿಸುತ್ತಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.