ಟೆನಿಸ್: ಮೂರನೇ ಸುತ್ತಿಗೆ ಸೆರೆನಾ

ದುಬೈ (ಪಿಟಿಐ/ಎಎಫ್ಪಿ): ಸೆರೆನಾ ವಿಲಿಯಮ್ಸ್ ಅವರು ದುಬೈನಲ್ಲಿ ನಡೆಯುತ್ತಿರುವ ದುಬೈ ಡ್ಯೂಟಿ ಫ್ರೀ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ.
ಬುಧವಾರ ನಡೆದ ಪಂದ್ಯದಲ್ಲಿ ಸೆರೆನಾ 7–6, 6–0ರಲ್ಲಿ ರಷ್ಯಾದ ಎಕ್ತಾರಿನಾ ಮಕರೋವಾ ಎದುರು ಗೆಲುವು ಸಾಧಿಸಿದ್ದಾರೆ.
ಸರ್ಬಿಯಾದ ಅನಾ ಇವಾನೊವಿಕ್ 3–6, 6–3, 7–6ರಲ್ಲಿ ಜರ್ಮನಿಯ ಏಂಜಲಿಕ್ ಕೆರ್ಬರ್ ಎದುರು ಗೆದ್ದರು.
ವಿಶ್ವದ ಅಗ್ರಮಾನ್ಯ ಆಟಗಾರ ಸ್ಪೇನ್ನ ರಫೆಲ್ ನಡಾಲ್ ರಿಯೊ ಡಿ ಜನೈರೊದಲ್ಲಿ ನಡೆಯುತ್ತಿರುವ ಎಟಿಪಿ ರಿಯೊ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ನಲ್ಲಿ ಶುಭಾರಂಭ ಮಾಡಿದ್ದಾರೆ.
ಮೊದಲ ಸುತ್ತಿನ ಪಂದ್ಯದಲ್ಲಿ ನಡಾಲ್ 6–3, 7–5ರಲ್ಲಿ ಡೆನಿಯಲ್ ಜಿಮೆನೊ ಟ್ರಾವರ್ ಅವರನ್ನು ಸುಲಭವಾಗಿ ಮಣಿಸಿದರು.
ಹೋದ ತಿಂಗಳು ನಡೆದ ಆಸ್ಟ್ರೇಲಿಯಾ ಓಪನ್ ಟೂರ್ನಿಯ ಫೈನಲ್ ಪಂದ್ಯದ ವೇಳೆ ಬೆನ್ನು ನೋವಿನಿಂದ ಬಳಲಿ ಪ್ರಶಸ್ತಿಯಿಂದ ವಂಚಿತರಾಗಿದ್ದ ಅವರು ಸುಮಾರು ಒಂದು ತಿಂಗಳ ವಿಶ್ರಾಂತಿಯ ಬಳಿಕ ಆಡಿದ ಮೊದಲ ಪಂದ್ಯ ಇದಾಗಿತ್ತು.
800ನೇ ಪಂದ್ಯವಾಡಿದ ನಡಾಲ್: ಈ ಪಂದ್ಯದಲ್ಲಿ ಪಾಲ್ಗೊಳ್ಳುವ ಮೂಲಕ ನಡಾಲ್ ತಮ್ಮ ವೃತ್ತಿ ಜೀವನದಲ್ಲಿ 800ನೇ ಪಂದ್ಯವಾಡಿದ ಹೆಗ್ಗಳಿಕೆಗೆ ಪಾತ್ರರಾದರು.
ಇದರೊಂದಿಗೆ ಈ ಸಾಧನೆ ಮಾಡಿದ ವಿಶ್ವದ ಆರನೇ ಆಟಗಾರ ಎಂಬ ಗೌರವ ಅವರದ್ದಾಯಿತು. ರೋಜರ್್ ಫೆಡರರ್, ಲೇಟನ್ ಹೆವಿಟ್, ಟಾಮಿ ಹಾಸ್ ಡೇವಿಡ್ ಫೆರರ್ ಹಾಗೂ ನಿಕೊಲಾಯ್ ಡೇವಿಡೆಂಕೊ ಇದಕ್ಕೂ ಮೊದಲು ಈ ಸಾಧನೆ ಮಾಡಿದ್ದಾರೆ.
ಈ ವಿಭಾಗದ ಇತರ ಪಂದ್ಯಗಳಲ್ಲಿ ಫಾಬಿಯೊ ಫಾಗಿನಿ 7–6, 0–6, 6–1ರಲ್ಲಿ ಜೂಲಿಯನ್ ರೀಸ್ಟರ್ ಅವರನ್ನೂ , ಅಲ್ಬೆರ್ಟ್ ರಾಮೊಸ್ 6–2, 6–0ರಲ್ಲಿ ಲಿಯೊನಾರ್ಡೊ ಮೇಯರ್ ಮೇಲೂ, ಟಾಮಿ ರಾಬ್ರೆಡೊ 7–6, 6–3ರಲ್ಲಿ ಪ್ಯಾಬ್ಲೊ ಕರೆನೊ ಎದುರೂ ಗೆಲುವು ಪಡೆದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.