ಮಂಗಳವಾರ, ಜೂನ್ 15, 2021
24 °C

ಟೆನಿಸ್: ಸೆಮಿಗೆ ಸಾನಿಯಾ-ವೆಸ್ನಿನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂಡಿಯನ್ ವೆಲ್ಸ್, ಅಮೆರಿಕ  (ಪಿಟಿಐ):   ಗೆಲುವಿನ ಓಟ ಮುಂದುವರಿಸಿರುವ ಸಾನಿಯಾ ಮಿರ್ಜಾ ಹಾಗೂ ಎಲೆನಾ ವೆಸ್ನಿನಾ ಜೋಡಿ ಇಲ್ಲಿ ನಡೆಯುತ್ತಿರುವ ಡಬ್ಲ್ಯುಟಿಎ ಇಂಡಿಯನ್  ವೆಲ್ಸ್ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.ಬುಧವಾರ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ಭಾರತ-ರಷ್ಯಾ ಜೋಡಿ 6-2, 6-3ರ ನೇರ ಸೆಟ್‌ಗಳಿಂದ ಅರ್ಜೆಂಟೀನಾದ ಗಿಸೆಲಾ ಡುಲ್ಕೋ -ಪೌಲಾ ಸೊರೇಜ್ ಎದುರು ಜಯಿಸಿತು.ಒಂದು ಗಂಟೆಗೂ ಅಧಿಕ ಕಾಲ ನಡೆದ ಹೋರಾಟದಲ್ಲಿ ಎರಡನೇ ಶ್ರೇಯಾಂಕದ ಜೋಡಿಗೆ ಹೆಚ್ಚು ಪ್ರತಿರೋಧ ಎದುರಾಗಲಿಲ್ಲ. ಅತ್ಯುತ್ತಮ ಸರ್ವ್‌ಗಳ ಮೂಲಕ ಅರ್ಜೆಂಟೀನಾದ ಆಟಗಾರ್ತಿಯರನ್ನು ಸುಲಭವಾಗಿ ಮಣಿಸಿತು.ಪೇಸ್-ಸ್ಟೆಪನೆಕ್‌ಗೆ ಆಘಾತ: ಭಾರತದ ಲಿಯಾಂಡರ್ ಪೇಸ್ ಹಾಗೂ ಜೆಕ್ ಗಣರಾಜ್ಯದ ರಾಡೆಕ್ ಸ್ಟೆಪನೆಕ್ ಜೋಡಿ ಪುರುಷರ ವಿಭಾಗದ ಡಬಲ್ಸ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಆಘಾತ ಅನುಭವಿಸಿತು.ಈ ಜೋಡಿ 3-6, 6-7ರಲ್ಲಿ ಸ್ಪೇನ್‌ನ ರಫೆಲ್ ನಡಾಲ್ ಹಾಗೂ ಮಾರ್ಕ್ ಲೊಪೆಜ್ ವಿರುದ್ಧ ಪರಾಭವಗೊಂಡಿತು. ಎರಡೂ ಸೆಟ್‌ಗಳಲ್ಲಿ ಭಾರತ-ಜೆಕ್ ಜೋಡಿ ಉತ್ತಮ ಪ್ರತಿರೋಧ ತೋರಿತು. ಆದರೂ, ನಾಲ್ಕರ ಘಟ್ಟ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಒಂದು ಗಂಟೆ 43 ನಿಮಿಷ ನಡೆದ ಪೈಪೋಟಿಯಲ್ಲಿ ಪೇಸ್-ಸ್ಟೆಪನೆಕ್ ಅವರ ಕೆಟ್ಟ ಸರ್ವ್‌ಗಳ ಲಾಭ ಪಡೆದು ನಡಾಲ್-ಲೊಪೆಜ್ ಸೆಮಿಫೈನಲ್‌ಗೆ ಲಗ್ಗೆ ಇಟ್ಟರು. ಪ್ರಬಲ ಸವಾಲು ಎದುರಿಸಿ ಎರಡನೇ ಸೆಟ್‌ನಲ್ಲಿ ಸ್ಪೇನ್‌ನ ಆಟಗಾರರು ಪ್ರಯಾಸದ ಗೆಲುವು  ಪಡೆದರು. ರೋಹನ್ ಬೋಪಣ್ಣ ಹಾಗೂ ಮಹೇಶ್ ಭೂಪತಿ ಅವರು ಈ ಟೂರ್ನಿಯ ಮೊದಲ ಸುತ್ತಿನಲ್ಲಿಯೇ ಸೋಲು ಕಂಡಿದ್ದಾರೆ.ಫೆಡರರ್‌ಗೆ ಪೊಟ್ರೊ ಸವಾಲು: ಹದಿನಾರು ಸಲ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಜಯಿಸಿರುವ ಸ್ವಿಟ್ಜರ್‌ಲೆಂಡ್‌ನ ರೋಜರ್ ಫೆಡರರ್ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಅರ್ಜೆಂಟೀನಾದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಸವಾಲನ್ನು ಎದುರಿಸಲಿದ್ದಾರೆ.ಫೆಡರರ್ 3-6, 6-3, 6-4ರಲ್ಲಿ ಥಾಮಜ್ ಬೆಲೂಚಿ ಎದುರು ಜಯ ಪಡೆದು ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟರು. ಇದಕ್ಕಾಗಿ ಒಂದು ಗಂಟೆ 41 ನಿಮಿಷ ಹೋರಾಟ ನಡೆಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.