ಶುಕ್ರವಾರ, ಮೇ 7, 2021
26 °C

ಟೆಲಿಗ್ರಾಂಗೆ ವಿದಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೆಲಿಗ್ರಾಂ ಎನ್ನುವ ಪದ ಇನ್ನೊಂದು ತಿಂಗಳಲ್ಲಿ ಇತಿಹಾಸ ಸೇರಲಿದೆ. ಜುಲೈ 15ರಿಂದ ದೇಶದಲ್ಲಿ ಟೆಲಿಗ್ರಾಂ ಸೇವೆಯನ್ನು ಸ್ಥಗಿತಗೊಳಿಸಲು ಬಿಎಸ್‌ಎನ್‌ಎಲ್ ನಿರ್ಧರಿಸಿದೆ. ದೂರಸಂಪರ್ಕ ಕ್ಷೇತ್ರದಲ್ಲಿ ಮಹತ್ವದ ಸೇವೆ ಸಲ್ಲಿಸಿದ, ಭಾವನಾತ್ಮಕ ಸಂಬಂಧಗಳನ್ನು ಹೆಣೆದ ಐತಿಹಾಸಿಕ ದಾಖಲೆಗಳನ್ನು ಒಡಲೊಳಗಿಟ್ಟುಕೊಂಡಿರುವ ಟೆಲಿಗ್ರಾಂ ಸೇವೆ ಇನ್ನು ನೆನಪು ಮಾತ್ರ, ಇಂದು ಸಂಪರ್ಕ ಸೇವೆಯಲ್ಲಿ ಕ್ರಾಂತಿಯೇ ಸಂಭವಿಸಿದೆ.

ಪಾರಿವಾಳದ ಮೂಲಕ ಸಂದೇಶ ರವಾನೆ ಆಗುತ್ತಿದ್ದ ದಿನಗಳಿಂದ ಹಂತಹಂತವಾಗಿ ವಿಕಸಿತವಾದ ದೂರಸಂಪರ್ಕ ವ್ಯವಸ್ಥೆ  ಹಂತಹಂತವಾಗಿ ಸಾಮಾಜಿಕ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸಿತು. ಬ್ರಿಟಿಷರ ಕಾಲದಲ್ಲಿ ಅಂಚೆಪತ್ರಗಳನ್ನು  ರೈಲು, ಬಸ್ ಸೇವೆ ಬಳಸಿ ರವಾನೆ ಮಾಡಲು ಆರಂಭಿಸಿದ ದಿನಗಳಲ್ಲಿ ಅದು ದೊಡ್ಡ ಸೇವೆ ಎಂದು ಅನಿಸಿತ್ತು. ಟೆಲಿಗ್ರಾಂ ಮೂಲಕ ತುರ್ತು ಸಂದೇಶ ಕಳುಹಿಸಲು ಸಾಧ್ಯವಾಗಿದ್ದು ಸಹಜವಾಗಿ ಅಂದಿನ ದಿನದ ಕ್ರಾಂತಿ.

ಬ್ರಿಟಿಷರಿಗೆ ಇದು ದೇಶದ ವಿವಿಧ ಕಡೆಗಳಲ್ಲಿರುವ ಅಧಿಕಾರಿಗಳ ಸಂಪರ್ಕಕ್ಕೆ ಅತ್ಯಗತ್ಯ ಸಂಪರ್ಕ ವ್ಯವಸ್ಥೆಯಾಗಿತ್ತು. ಆಡಳಿತದ ದೃಷ್ಟಿಯಿಂದ ಅಧಿಕಾರಿಗಳ ಮೇಲಿನ ನಿಯಂತ್ರಣಕ್ಕಾಗಿ ಇದರ ಪ್ರಯೋಜನ ಪಡೆಯುತ್ತಿದ್ದರು. ಸ್ವಾತಂತ್ರ್ಯ ಸಮರ ತೀವ್ರವಾದಾಗ ಬ್ರಿಟಿಷರಿಗೆ ಇದು ಅಮೂಲ್ಯ ವ್ಯವಸ್ಥೆಯಾಗಿತ್ತು. ಈ ಉದ್ದೇಶಕ್ಕಾಗಿ ಭಾರತದಲ್ಲಿ 163 ವರ್ಷಗಳ ಹಿಂದೆ ಟೆಲಿಗ್ರಾಂ ವ್ಯವಸ್ಥೆಯನ್ನು ಬ್ರಿಟಿಷರು ಜಾರಿಗೆ ತಂದರು. ಮುಂದೆ ಅದು ದೇಶದ ಪ್ರಮುಖ ಸಂಪರ್ಕಜಾಲವೇ ಆಯಿತು.ಸುದ್ದಿವಾಹಕವಾಗಿಯೂ ಟೆಲಿಗ್ರಾಂ ಮಹತ್ವದ ಪಾತ್ರವಹಿಸಿತ್ತು. ಮಹಾಯುದ್ಧಗಳ ಸಂದರ್ಭದಲ್ಲಿ ಇದರ ಪಾತ್ರ ಮಹತ್ವದ್ದಾಗಿತ್ತು. ತೀರಾ ಈಚಿನವರೆಗೆ ಕಂಪ್ಯೂಟರ್ ಜನಪ್ರಿಯವಾಗುವ ಮುನ್ನ ಟೆಲಿಗ್ರಾಂ ಮೂಲಕವೇ ಪತ್ರಕರ್ತರು ದೂರದ ಊರಿನಿಂದ  ತಮ್ಮ ಪತ್ರಿಕೆಗಳ ಕೇಂದ್ರ ಕಚೇರಿಗೆ ತುರ್ತು ಸುದ್ದಿ ಕಳುಹಿಸುತ್ತಿದ್ದರು. ಈಗ ಸುದ್ದಿ ಮಾತ್ರವಲ್ಲ, ಛಾಯಾಚಿತ್ರಗಳೂ ಕಂಪ್ಯೂಟರ್ ಮೂಲಕ ರವಾನೆಯಾಗುತ್ತವೆ.

ಸಾಮಾನ್ಯ ಜನರಂತೂ ಶುಭ ಸಂದೇಶ ಹೊತ್ತು ತರಲಿ, ಅಶುಭ ಸುದ್ದಿಯನ್ನೇ ತರಲಿ `ಟೆಲಿಗ್ರಾಂ' ಎಂಬ ಶಬ್ದ ಕಿವಿಗೆ ಬಿದ್ದರೆ ಬೆಚ್ಚಿಬೀಳುತ್ತಿದ್ದ ದಿನಗಳು ಇದ್ದವು. ಅದನ್ನು ತೆರೆದು ಓದುವವರೆಗೆ ಎದೆಯ ಬಡಿತ, ರಕ್ತದ ಒತ್ತಡ ಸಹಜ ಸ್ಥಿತಿಯಲ್ಲಿರುತ್ತಿರಲಿಲ್ಲ. ಮೊಬೈಲ್ ಎಸ್‌ಎಂಎಸ್‌ಗಳು ಆ ಕೆಲಸವನ್ನು ಈಗ ಕ್ಷಣಮಾತ್ರದಲ್ಲಿ ಮಾಡುತ್ತಿವೆ.

ಇದರಿಂದಾಗಿ ಅಂಚೆ ಪತ್ರಗಳ ಪಾತ್ರ ಕೂಡ ಗೌಣವಾಗಿದೆ. ಟೆಲಿಗ್ರಾಂ ಸೇವೆಗೆ ಮಾರಣಾಂತಿಕ ಪೆಟ್ಟು ಬೀಳಲು ಕಂಪ್ಯೂಟರ್ ಬಳಕೆಯಲ್ಲಿ ಆಗಿರುವ ಶೀಘ್ರಗತಿಯ ಬೆಳವಣಿಗೆ ಕಾರಣ. ಆತ್ಮೀಯರ, ಪ್ರೀತಿ ಪಾತ್ರರ ಕೈ ಬರಹದಲ್ಲಿದ್ದ ಪತ್ರಗಳ ಸ್ಥಾನವನ್ನು ಕ್ರಮೇಣ `ಇ ಮೇಲ್' ಆಕ್ರಮಿಸಿದೆ.

ಇ ಮೇಲ್ ಸೇವೆಯಲ್ಲಿ ಆತ್ಮೀಯತೆಯ ಸ್ಪರ್ಶ ಇಲ್ಲ ಎಂದವರಿಗೆ ವಿಡಿಯೊ ಕಾನ್ಫೆರೆನ್ಸಿಂಗ್ ಉತ್ತರವಾಗಿತ್ತು. ಇಂದು ಸಂಪರ್ಕಸೇವೆಯಲ್ಲಿ ಆಗಿರುವ ದಾಪುಗಾಲಿನ ಬೆಳವಣಿಗೆಯಿಂದ ಒಂದೊಂದೇ ಸೇವೆಗಳು ಕಾಲಗರ್ಭವನ್ನು ಸೇರಲಾರಂಭಿಸಿರುವುದು ಸಹಜ ಬೆಳವಣಿಗೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.