ಸೋಮವಾರ, ಏಪ್ರಿಲ್ 19, 2021
32 °C

ಟೆಲಿವಿಷನ್ ವೀಕ್ಷಣೆಗೆ ನೆರವಾಗುವ ಸ್ಲಿಂಗ್‌ಬಾಕ್ಸ್ ಮಾರುಕಟ್ಟೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮನೆಯಲ್ಲಿ ಉಪಗ್ರಹ ಆಧಾರಿತ  ಸಂಪರ್ಕದ (ಡಿಟಿಎಚ್) ಮೂಲಕ ಟೆಲಿವಿಷನ್‌ನಲ್ಲಿ ವೀಕ್ಷಿಸಹುದಾದ ಎಲ್ಲ ಕಾರ್ಯಕ್ರಮಗಳನ್ನು ವಿಶ್ವದ ಯಾವುದೇ ಮೂಲೆಯಲ್ಲಿ ಕುಳಿತು ಲ್ಯಾಪ್‌ಟಾಪ್, ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ಗಳಲ್ಲೂ ಇನ್ನು ಮುಂದೆ ವೀಕ್ಷಿಸಬಹುದು.ಇಂತಹ ವಿಶಿಷ್ಟ ಸೌಲಭ್ಯ ಕಲ್ಪಿಸುವ ‘ಸ್ಲಿಂಗ್‌ಬಾಕ್ಸ್-120’ ಉಪಕರಣವನ್ನು ಇಕೊಸ್ಟಾರ್ ಕಾರ್ಪೊರೇಷನ್ ಒಡೆತನದ ‘ಸ್ಲಿಂಗ್ ಮೀಡಿಯಾ’ ಮಂಗಳವಾರ ಇಲ್ಲಿ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 

 

ಮನೆಯ ಟಿವಿಯ ಜತೆ ಈ ಸೆಟ್‌ಟಾಪ್ ಬಾಕ್ಸ್‌ನ ಸಂಪರ್ಕ ಕಲ್ಪಿಸಬೇಕು. ನಂತರ ‘ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ಸಂಪರ್ಕ ಬಳಸಿಕೊಂಡು, ಪ್ರಪಂಚದ ಯಾವುದೇ ಮೂಲೆಯಿಂದ ಬೇಕಾದರೂ ಗ್ರಾಹಕರು ತಮಗಿಷ್ಟ ಬಂದ ಚಾನಲ್‌ಗಳನ್ನು ತಮ್ಮ ಬಳಿ ಇರುವ ಲ್ಯಾಪ್‌ಟಾಪ್, ಐಫೋನ್, ಟ್ಯಾಬ್ಲೆಟ್‌ಗಳಲ್ಲಿ ಅಡೆತಡೆ ಇಲ್ಲದೆ ವೀಕ್ಷಿಸಬಹುದು. ಇದು ಮನೆಯಲ್ಲಿಯೇ ಕುಳಿತು ಟಿವಿ ನೋಡಿದಂತ ಅನುಭವ ನೀಡುತ್ತದೆ. ಒಮ್ಮೆ ಉಪಕರಣಕ್ಕೆ ಹಣ ಪಾವತಿಸಿದರೆ ನಂತರ ಯಾವುದೇ ಹೆಚ್ಚುವರಿ ಶುಲ್ಕ ಇಲ್ಲ’ ಎಂದು ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ‘ಸ್ಲಿಂಗ್ ಮೀಡಿಯಾ’ದ ವ್ಯವಸ್ಥಾಪಕ ನಿರ್ದೇಶಕ ರಘು ತಾರಾ ಹೇಳಿದರು. 

 

ಗ್ರಾಹಕರ ಬ್ರಾಡ್‌ಬ್ಯಾಂಡ್ ಸಂಪರ್ಕದ ವೇಗ ಆಧರಿಸಿ ಚಿತ್ರದ ಗುಣಮಟ್ಟ ಇರುತ್ತದೆ. ಗರಿಷ್ಠ ಗುಣಮಟ್ಟದ ಚಲನಚಿತ್ರ ವೀಕ್ಷಣೆಗೆ ಸಾಧ್ಯವಾಗುವಂತ ‘ಸ್ಲಿಂಗ್ ಬಾಕ್ಸ್ ಪ್ರೊ-ಎಚ್‌ಡಿ’ ಉಪಕರಣವನ್ನೂ ಕಂಪೆನಿ ಬಿಡುಗಡೆ ಮಾಡಿದೆ ಎಂದರು.   ಏಪ್ರಿಲ್ ತಿಂಗಳ ಅಂತ್ಯಕ್ಕೆ ಈ ಉಪಕರಣಗಳು ಬೆಂಗಳೂರು, ಮುಂಬೈ, ದೆಹಲಿ ಮತ್ತು ಹೈದರಾಬಾದ್ ನಗರಗಳಲ್ಲಿ ಲಭ್ಯವಿದ್ದು, ಗ್ರಾಹಕರು ಕ್ರೊಮಾ, ರಿಲಯನ್ಸ್ ಡಿಜಿಟಲ್ ಮತ್ತು flipkart.com  ಮೂಲಕ  ಖರೀದಿಸಬಹುದು. ಸ್ಲಿಂಗ್‌ಬಾಕ್ಸ್-120 ಮತ್ತು  ಸ್ಲಿಂಗ್ ಬಾಕ್ಸ್ ಪ್ರೊ-ಎಚ್‌ಡಿ, ಬೆಲೆ ಕ್ರಮವಾಗಿ `7,999, ಮತ್ತು ` 14,999. ಇದರ ಜತೆಗೆ  ಸ್ಮಾರ್ಟ್‌ಪೋನ್‌ಗಳಲ್ಲಿ ಚಲನಚಿತ್ರ ವೀಕ್ಷಿಸಬಹುದಾದಂತ ‘ಸ್ಲಿಂಗ್ ಪ್ಲೇಯರ್’ ತಂತ್ರಾಂಶವನ್ನೂ ಕಂಪೆನಿ ಬಿಡುಗಡೆ ಮಾಡಿದೆ.

29.99 ಡಾಲರ್ (`1350) ತೆತ್ತು ಇದನ್ನು ಗ್ರಾಹಕರು ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಭಾರತೀಯ ವ್ಯವಹಾರಗಳ  ಮುಖ್ಯಸ್ಥ ಜಾಯ್ ಬೇರಿಹಿಲ್ ಮಾಹಿತಿ ನೀಡಿದರು.

‘ಭಾರತ ಪ್ರಪಂಚದಲ್ಲಿಯೇ 2ನೇ ಅತಿ ಹೆಚ್ಚು ಮೊಬೈಲ್ ಬಳಕೆದಾರರನ್ನು ಹೊಂದಿದ್ದು,  3ಜಿ ಸೇವೆಯಿಂದ ಮೊಬೈಲ್‌ನಲ್ಲಿ ಚಲನಚಿತ್ರ ವೀಕ್ಷಿಸುವವರ ಸಂಖ್ಯೆ ತ್ವರಿತವಾಗಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ನಾವು  ಭಾರತೀಯ ಮಾರುಕಟ್ಟೆಯತ್ತ ಹೆಚ್ಚಿನ ಗಮನಹರಿಸುತ್ತಿದ್ದೇವೆ’ ಎಂದು ಸ್ಲಿಂಗ್ ಮೀಡಿಯಾ ಇಂಕ್‌ನ ತಂತ್ರಜ್ಞಾನ ಮುಖ್ಯಸ್ಥ ಭೂಪೆನ್ ಶಾ ಹೇಳಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.