ಮಂಗಳವಾರ, ಮೇ 17, 2022
24 °C

ಟೆಸ್ಟ್ ಆಡುವುದು ನನ್ನ ಕನಸು

ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

ಭಾರತ ಕ್ರಿಕೆಟ್ ತಂಡದ ಭವಿಷ್ಯದ ತಾರೆಗಳಲ್ಲಿ ಕರ್ನಾಟಕದ ಪ್ರತಿಭೆ ಗಣೇಶ್ ಸತೀಶ್ ಕೂಡ ಒಬ್ಬರು. ರಾಜ್ಯ ತಂಡ ಕಳೆದ ರಣಜಿ ಋತುವಿನಲ್ಲಿ ಕಂಡ ಯಶಸ್ಸಿಗೆ ದಾವಣಗೆರೆ ಮೂಲದ ಈ ಗಣೇಶ್ ಕೂಡ ಕಾರಣ. ಅಲ್ಲಿ ಸಿಕ್ಕ ಯಶಸ್ಸು ಈಗ ಉನ್ನತ ಮಟ್ಟಕ್ಕೇರಲು ಮೆಟ್ಟಿಲಾಗಿ ಪರಿಣಮಿಸಿದೆ.

ಈಗಾಗಲೇ ದುಲೀಪ್ ಟ್ರೋಫಿ, ದೇವಧರ್ ಟ್ರೋಫಿ ಟೂರ್ನಿಗಳಲ್ಲಿ ಆಡಿ ತಮ್ಮ ಛಾಪು ಮೂಡಿಸಿದ್ದಾರೆ. ಚಾಲೆಂಜರ್ ಸರಣಿ ಟೂರ್ನಿಗೆ ‘ಭಾರತ ಬ್ಲೂ’ ತಂಡದಲ್ಲಿ ಈಗ ಸ್ಥಾನ ಪಡೆಯುವ ಮೂಲಕ ಮತ್ತೊಂದು ಯಶಸ್ಸಿನ ಮೆಟ್ಟಿಲೇರಿದ್ದಾರೆ. ಅಕ್ಟೋಬರ್ 8ರಿಂದ 11ರವರೆಗೆ ಇಂದೋರ್‌ನಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಿದ ಅನುಭವಿಗಳೊಂದಿಗೆ ಸೆಣಸಲು 23 ವರ್ಷದ ಅವರು ಸಿದ್ಧವಾಗುತ್ತಿದ್ದಾರೆ. ಯುವರಾಜ್ ಸಿಂಗ್ ನಾಯಕತ್ವದ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹಾಗೇ, ರಾಜ್ಯದಿಂದ ಆರ್.ವಿನಯ್ ಕುಮಾರ್, ರಾಬಿನ್ ಉತ್ತಪ್ಪ, ಅಭಿಮನ್ಯು ಮಿಥುನ್ ಹಾಗೂ ಮನೀಷ್ ಪಾಂಡೆ ಕೂಡ ಸ್ಥಾನ ಗಿಟ್ಟಿಸಿದ್ದಾರೆ.

ಅದೇ ಖುಷಿಯಲ್ಲಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಕರ್ನಾಟಕ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಗಣೇಶ್ ತಮ್ಮ ಕನಸನ್ನು ಬಿಚ್ಚಿಟ್ಟಿದ್ದಾರೆ. ಅವರೊಂದಿಗೆ ನಡೆಸಿದ ಮಾತುಕತೆಯ ಸಾರ ಇಲ್ಲಿದೆ.

* ಭಾರತ ತಂಡದ ಪ್ರಮುಖ ಆಟಗಾರರೊಂದಿಗೆ ಸೆಣಸುವ ಅವಕಾಶ ಸಿಕ್ಕಿದೆ. ಈ ಬಗ್ಗೆ?

ಇದೊಂದು ಒಳ್ಳೆಯ ಅವಕಾಶ. ಈ ಅವಕಾಶಕ್ಕಾಗಿ ನಾನು ಕಾಯುತ್ತಿದ್ದೆ. ಯುವರಾಜ್ ಸಿಂಗ್ ಸೇರಿದಂತೆ ಪ್ರಮುಖ ಆಟಗಾರರೊಂದಿಗೆ ಆಡುವ ಅವಕಾಶ ಸಿಕ್ಕಿದೆ,. ಇದನ್ನು ನಾನು ಚೆನ್ನಾಗಿ ಬಳಸಿಕೊಳ್ಳಬೇಕು.

* ದಕ್ಷಿಣ ವಲಯ ತಂಡದಲ್ಲಿ ಆಡಿದ್ದೀರಿ. ಆ ಅನುಭವ ಹೇಗಿತ್ತು?

2010ರ ಫೆಬ್ರುವರಿಯಲ್ಲಿ ನಡೆದ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ನಾವು ರನ್ನರ್ ಅಪ್ ಆಗಿದ್ದೆವು, ದೇವಧರ್ ಟ್ರೋಫಿಯಲ್ಲಿ ದಿನೇಶ್ ಕಾರ್ತಿಕ್ ಅವರ ನಾಯಕತ್ವದಲ್ಲಿ ಆಡಿದ್ದೆ. ಎಸ್.ಬದರೀನಾಥ್ ಕೂಡ ಇದ್ದರು. ಇದರಿಂದ ನನಗೆ ತುಂಬಾ ಅನುಭವ ಸಿಕ್ಕಿದೆ. ಅದರಲ್ಲಿ ನೀಡಿದ ಪ್ರದರ್ಶನ ಕೂಡ ತೃಪ್ತಿ ತಂದಿದೆ. ಹಾಗೇ, ವಿಜಯ ಹಜಾರೆ ಟ್ರೋಫಿ ಟೂರ್ನಿಯಲ್ಲೂ ಆಡಿದ್ದೇನೆ.

* ಕಳೆದ ರಣಜಿ ಋತುವಿನಲ್ಲಿ ತೋರಿದ ಸಾಧನೆ ಇದಕ್ಕೆ ಕಾರಣವೇ?

ಖಂಡಿತ ಕಳೆದ ರಣಜಿ ಋತು ಈ ಅವಕಾಶಗಳಿಗೆಲ್ಲಾ ಕಾರಣ. ನಾವು ಅದರಲ್ಲಿ ಫೈನಲ್ ತಲುಪಿದ್ದೆವು. ಜೊತೆಗೆ ರಾಜ್ಯ ತಂಡ ರಣಜಿ ಏಕದಿನ ಟ್ರೋಫಿಯಲ್ಲಿ ಕೂಡ ಸೆಮಿಫೈನಲ್ ತಲುಪಿತ್ತು. ಇದರಲ್ಲಿ ನಾನು ನೀಡಿದ ಪ್ರದರ್ಶನ ಖುಷಿ ನೀಡಿದೆ.

* ನಿಮ್ಮ ಕ್ರಿಕೆಟ್ ಜೀವನ ಆರಂಭವಾಗಿದ್ದು ಹೇಗೆ?

ಮೊದಲು ನಾನು ಕ್ರಿಕೆಟ್ ಆರಂಭಿಸಿದ್ದು ಬ್ರಿಜೇಶ್ ಪಟೇಲ್ ಕ್ರಿಕೆಟ್ ಅಕಾಡೆಮಿಯಲ್ಲಿ. ವೈದ್ಯರಾಗಿರುವ ಅಪ್ಪ ಡಾ.ಸತೀಶ್ ಹಾಗೂ ಅಮ್ಮ ಡಾ.ಮಮತಾ ಹೆಚ್ಚಿನ ಕಾಳಜಿ ವಹಿಸಿ ನನಗೆ ಸಹಾಯ ಮಾಡುತ್ತಿದ್ದಾರೆ. ಇದುವರೆಗಿನ ನನ್ನ ಈ ಎಲ್ಲಾ ಸಾಧನೆಗೆ ಅವರೇ ಕಾರಣ.

ಐದನೇ ವಯಸ್ಸಿನಲ್ಲೇ ನನಗೆ ಕ್ರಿಕೆಟ್ ಮೇಲೆ ಆಸಕ್ತಿ ಬೆಳೆಯಿತು. ಮೊದಲು 14 ವರ್ಷದೊಳಗಿನವರ ಟೂರ್ನಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದೆ. ಆಗ ನನಗೆ 12 ವರ್ಷ ಅಷ್ಟೆ. ಬಳಿಕ 19 ವರ್ಷದೊಳಗಿನ ಭಾರತ ತಂಡದಲ್ಲಿ ಆಡಿದ್ದೇನೆ. ಆಗ ಇಂಗ್ಲೆಂಡ್‌ನವರು ಭಾರತ ಪ್ರವಾಸಕ್ಕೆ ಬಂದಿದ್ದರು. 

9 ವರ್ಷ ವಯಸ್ಸಿನಿಂದ ನಾನು ರಾಜೇಶ್ ಕಾಮತ್ ಅವರಿಂದ ತರಬೇತಿ ಪಡೆಯುತ್ತಿದ್ದೇನೆ. ರಾಜ್ಯ ತಂಡದ ಕೋಚ್ ಸನತ್ ಕುಮಾರ್ ನನಗೆ ಹಲವು ವಿಷಯಗಳ ಬಗ್ಗೆ ಹೇಳಿಕೊಟ್ಟಿದ್ದಾರೆ. ದ್ರಾವಿಡ್ ಕೂಡ ಮಾರ್ಗದರ್ಶನ ನೀಡಿದ್ದಾರೆ.

* ಮುಂಬರುವ ರಣಜಿ ಋತುವಿಗೆ ಯಾವ ರೀತಿ ಸಿದ್ಧತೆ ನಡೆಸುತ್ತಿದ್ದೀರಿ?

ತುಂಬಾ ದಿನಗಳಿಂದಲೇ ತರಬೇತಿ ನಡೆಸುತ್ತಿದ್ದೇವೆ. ಪ್ರಮುಖರಿಂದ ಬ್ಯಾಟಿಂಗ್ ಟಿಪ್ಸ್ ಕೂಡ ಪಡೆಯುತ್ತಿದ್ದೇನೆ. ಕಳೆದ ಬಾರಿಯ ಆಟ ಪುನರಾವರ್ತಿಸಲು ಎದುರು ನೋಡುತ್ತಿದ್ದೇನೆ.

* ಕೆಪಿಎಲ್ ಟೂರ್ನಿಯ ಅನುಭವ ಹೇಗಿತ್ತು?

ಇದೊಂದು ವಿಶೇಷ ಅನುಭವ. ಈ ಬಾರಿ ನಾವು (ಮಲ್ನಾಡ್ ಗ್ಲ್ಯಾಡಿಯೇಟರ್ಸ್) ಸೆಮಿಫೈನಲ್ ತಲುಪಿದ್ದೆವು. ಪ್ರದರ್ಶನದಲ್ಲಿ ತುಂಬಾ ಸುಧಾರಣೆ ಕಂಡುಬಂತು. ತಂಡವನ್ನು ಮುನ್ನಡೆಸುವ ಅವಕಾಶ ಸಿಕ್ಕಿತ್ತು. ಆದರೆ ನನಗೆ ನಾಯಕತ್ವ ಹೊಸದೇನಲ್ಲ. ಈ ಮೊದಲು 22 ವರ್ಷದೊಳಗಿನವರ ರಾಜ್ಯ ತಂಡವನ್ನು ಮುನ್ನಡೆಸಿದ್ದೆ.

* ಕ್ರಿಕೆಟ್‌ನಲ್ಲಿ ಸಾಧಿಸಬೇಕು ಎಂದುಕೊಂಡಿರುವ ಕನಸು? 

ಭಾರತ ಟೆಸ್ಟ್ ತಂಡದಲ್ಲಿ ಆಡಬೇಕು ಎಂಬುದು ನನ್ನ ಬಹುದೊಡ್ಡ ಕನಸು.

* ನಿಮ್ಮ ನೆಚ್ಚಿನ ಕ್ರಿಕೆಟಿಗ?

ಅಫ್ ಕೋರ್ಸ್, ಸಚಿನ್ ತೆಂಡೂಲ್ಕರ್

* ಟರ್ನಿಂಗ್ ಪಾಯಿಂಟ್ ಎನಿಸಿದ ಘಟನೆ?

22 ವರ್ಷದೊಳಗಿನವರ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡಿದ ಐದು ಪಂದ್ಯಗಳಲ್ಲಿ ನಾನು 4 ಶತಕ ಗಳಿಸಿದ್ದೆ. 2008ರಲ್ಲಿ ಈ ಟೂರ್ನಿ ನಡೆದಿತ್ತು. ಅದೇ ನನ್ನ ಕ್ರಿಕೆಟ್ ಜೀವನದ ಟರ್ನಿಂಗ್ ಪಾಯಿಂಟ್. ಅದರಿಂದ ನನಗೆ ರಣಜಿ ಟ್ರೋಫಿಯಲ್ಲಿ ಆಡಲು ಅವಕಾಶ ಲಭಿಸಿತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.