ಭಾನುವಾರ, ಮೇ 16, 2021
28 °C

ಟೇಬಲ್ ಟೆನಿಸ್: ಶರತ್ ಕಮಲ್‌ಗೆ ನಿರಾಸೆ:ಒಲಿಂಪಿಕ್ಸ್‌ಗೆ ಸೌಮ್ಯಜಿತ್, ಅಂಕಿತಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ಭಾರತದ ಟೇಬಲ್ ಟೆನಿಸ್ ಸ್ಪರ್ಧಿಗಳಾದ ಸೌಮ್ಯಜಿತ್ ಘೋಷ್ ಮತ್ತು ಅಂಕಿತಾ ದಾಸ್ ಲಂಡನ್ ಒಲಿಂಪಿಕ್‌ಗೆ ಅರ್ಹತೆ ಗಿಟ್ಟಿಸಿದ್ದಾರೆ. ಆದರೆ ಪ್ರಮುಖ ಆಟಗಾರ ಅಚಂತಾ ಶರತ್ ಕಮಲ್ ನಿರಾಸೆ ಅನುಭವಿಸಿದ್ದಾರೆ.ಹಾಂಕಾಂಗ್‌ನಲ್ಲಿ ನಡೆದ ಏಷ್ಯಾ ವಲಯದ ಅರ್ಹತಾ ಟೂರ್ನಿಯಲ್ಲಿ ದಕ್ಷಿಣ ಏಷ್ಯಾ ವಲಯದಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಸೌಮ್ಯಜಿತ್ ಮತ್ತು ಅಂಕಿತಾ ಅರ್ಹತೆ ಪಡೆದರು. ಪುರುಷರ ವಿಭಾಗದ ತನ್ನ ಕೊನೆಯ ಪಂದ್ಯದಲ್ಲಿ ಸೌಮ್ಯಜಿತ್ 12-10, 11-9, 11-6, 11-7 ರಲ್ಲಿ ಅಂಥೋಣಿ ಅಮಲ್‌ರಾಜ್ ವಿರುದ್ಧ ಗೆದ್ದರು. ಮಹಿಳೆಯರ ವಿಭಾಗದ ಪಂದ್ಯದಲ್ಲಿ ಅಂಕಿತಾ 8-11, 11-3, 11-8, 11-13, 11-9, 9-11, 11-8 ರಲ್ಲಿ ಕೆ. ಶಾಮಿನಿ ವಿರುದ್ಧ ಪ್ರಯಾಸದ ಜಯ ಪಡೆದರು.ಅಮಲ್‌ರಾಜ್ ಇದಕ್ಕೂ ಮುನ್ನ ನಡೆದ ಪಂದ್ಯದಲ್ಲಿ 4-3 ರಲ್ಲಿ ಶರತ್ ಕಮಲ್ ಅವರನ್ನು ಮಣಿಸಿದ್ದರು. ಈ ಪಂದ್ಯದಲ್ಲಿ ಗೆಲುವು ಪಡೆದಿದ್ದಲ್ಲಿ, ಶರತ್‌ಗೆ ಸೌಮ್ಯಜಿತ್ ವಿರುದ್ಧ ಪೈಪೋಟಿ ನಡೆಸುವ ಅವಕಾಶ ಲಭಿಸುತ್ತಿತ್ತು. ಆದರೆ ಪ್ರಭಾವಿ ಪ್ರದರ್ಶನ ನೀಡಿದ ಅಮಲ್‌ರಾಜ್ 9-11, 12-10, 11-13, 12-10, 4-11, 11-9, 11-3 ರಲ್ಲಿ ಜಯ ಸಾಧಿಸಿದರು.ಲಂಡನ್‌ಗೆ ಅರ್ಹತೆ ಪಡೆಯಲು ಶರತ್‌ಗೆ ಇನ್ನೊಂದು ಅವಕಾಶ ಇದೆ. ದೋಹಾದಲ್ಲಿ ನಡೆಯುವ ವಿಶ್ವ ಅರ್ಹತಾ ಚಾಂಪಿಯನ್‌ಷಿಪ್ ವೇಳೆ ಅವರು ಒಲಿಂಪಿಕ್ ಅವಕಾಶಕ್ಕಾಗಿ ಪ್ರಯತ್ನಿಸಬಹುದು.`ಒಲಿಂಪಿಕ್‌ಗೆ ಅರ್ಹತೆ ಪಡೆಯುವ ಕನಸು ಈಡೇರಿದೆ.ಲಂಡನ್ ಒಲಿಂಪಿಕ್‌ಗೆ ಚೆನ್ನಾಗಿ ಅಭ್ಯಾಸ ನಡೆಸುವುದು ನನ್ನ ಮುಂದಿನ ಕೆಲಸ. ಅಮಲ್‌ರಾಜ್ ವಿರುದ್ಧದ ಪಂದ್ಯ ಪ್ರಬಲ ಪೈಪೋಟಿಯಿಂದ ಕೂಡಿತ್ತು. ಇಬ್ಬರಿಗೂ ಗೆಲುವು ಪಡೆಯುವ ಸಮಾನ ಅವಕಾಶವಿತ್ತು. ನನಗೆ ಜಯ ಲಭಿಸಿದ್ದು ಸಂತಸ ನೀಡಿದೆ~ ಎಂದು 19ರ ಹರೆಯದ ಸೌಮ್ಯಜಿತ್ ಪ್ರತಿಕ್ರಿಯಿಸಿದ್ದಾರೆ.ಮಹಿಳೆಯರ ವಿಭಾಗದಲ್ಲಿ ದಕ್ಷಿಣ ಏಷ್ಯಾ ವಲಯದಿಂದ ಅರ್ಹತೆ ಪಡೆಯುವ ಅವಕಾಶ ಅಂಕಿತಾ ಮತ್ತು ಶಾಮಿನಿಗೆ ಒಲಿದಿತ್ತು. ಅಂತಿಮವಾಗಿ 19ರ ಹರೆಯದ ಅಂಕಿತಾ ಈ ಅವಕಾಶವನ್ನು ಗಿಟ್ಟಿಸಿಕೊಂಡರು. ಮಾತ್ರವಲ್ಲ ಒಲಿಂಪಿಕ್‌ಗೆ ಅರ್ಹತೆ ಪಡೆದ ಭಾರತದ ಅತಿ ಕಿರಿಯ ಸ್ಪರ್ಧಿ ಎನಿಸಿಕೊಂಡರು. ಕಳೆದ ವರ್ಷ ಬಹರೇನ್‌ನಲ್ಲಿ ನಡೆದ ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಸಿಲಿಗುರಿಯ ಅಂಕಿತಾ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.