ಶನಿವಾರ, ಮೇ 8, 2021
26 °C

ಟೋಲ್ ಸಂಗ್ರಹ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು - ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ ಏಳರ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಟೋಲ್‌ಗೇಟ್‌ನಲ್ಲಿ ಗುರುವಾರದಿಂದ ಟೋಲ್ ಸಂಗ್ರಹ ಸ್ಥಗಿತಗೊಂಡಿದೆ.ರಸ್ತೆಯಲ್ಲಿ ಸಂಚರಿಸಲು ಟೋಲ್ ದರ ಹೆಚ್ಚಾಗಿದ್ದು ಇದರಿಂದ ರೈತರಿಗೆ ಹಾಗೂ ಜನ ಸಾಮಾನ್ಯರಿಗೆ ಆರ್ಥಿಕ ಒತ್ತಡ ಹೆಚ್ಚಾಗಿದೆ ಎಂದು ದೇವನಹಳ್ಳಿಯ ನ್ಯಾಯಾಲಯದಲ್ಲಿ ನಾಲ್ವರು ವಕೀಲರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಪ್ರಕರಣ ಇತ್ಯರ್ಥಗೊಳ್ಳುವವರೆಗೂ ಟೋಲ್‌ಗೇಟ್‌ನಲ್ಲಿ ಟೋಲ್ ಸಂಗ್ರಹಣೆಯನ್ನು ಸ್ಥಗಿತಗೊಳಿಸಲು ಮಂಗಳವಾರದಂದು ಆದೇಶ ನೀಡಿದೆ.ನವಯುಗ್ ಕನ್‌ಸ್ಟ್ರಕ್ಷನ್ಸ್ ಲಿಮಿಟೆಡ್ ಹಾಗೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಹೋಗುವ ಬಗ್ಗೆ ಇನ್ನೂ ಯಾವುದೇ ನಿರ್ಧಾರವನ್ನು ಪ್ರಕಟಿಸಿಲ್ಲ.`ನ್ಯಾಯಾಲಯದ ಆದೇಶ ಪಾಲಿಸಿ ಗುರುವಾರದಿಂದ ಟೋಲ್ ಸಂಗ್ರಹ ನಿಲ್ಲಿಸಿದ್ದೇವೆ. ಪ್ರಕರಣದ ಅಂತಿಮ ತೀರ್ಪು ಯಾವಾಗ ಬರುತ್ತದೋ ಗೊತ್ತಿಲ್ಲ. ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವ ಬಗ್ಗೆ ಈಗ ಯಾವುದೇ ಚಿಂತನೆ ನಡೆಸಿಲ್ಲ~ ಎಂದು ನವಯುಗ್ ಕನ್‌ಸ್ಟ್ರಕ್ಷನ್ಸ್ ಲಿಮಿಟೆಡ್‌ನ ಅಧಿಕಾರಿಗಳು ಹೇಳಿದ್ದಾರೆ.`ನ್ಯಾಯಾಲಯದ ಆದೇಶ ಪಾಲಿಸಲಾಗಿದೆ. ಮುಂದಿನ ಕ್ರಮದ ಬಗ್ಗೆ ಚಿಂತನೆ ನಡೆಸಲಾಗುವುದು~ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಆರ್ . ಕೆ.ಗುಪ್ತಾ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.`ದಿನ ನಿತ್ಯ ಟೋಲ್‌ಗೇಟ್‌ನಲ್ಲಿ ಐದರಿಂದ ಹತ್ತು ನಿಮಿಷ ಕಾದು ಸಮಯ ವ್ಯರ್ಥ ಮಾಡಬೇಕಿತ್ತು. ಆದರೆ ಈಗ ಹಣದ ಜೊತೆಗೆ ಸಮಯವೂ ಉಳಿಯುತ್ತದೆ~ ಎಂದು ಸ್ಥಳೀಯ ವಾಹನ ಚಾಲಕ ರಾಮಮೂರ್ತಿ ಹರ್ಷ ವ್ಯಕ್ತ ಪಡಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.