ಶನಿವಾರ, ಆಗಸ್ಟ್ 15, 2020
24 °C

ಟ್ಯಾಪಿಂಗ್ ಪರಿಕರ ಶೋಧನೆಗೆ 5 ಲಕ್ಷ!

ರಾಜೇಶ್ ರೈ ಚಟ್ಲ Updated:

ಅಕ್ಷರ ಗಾತ್ರ : | |

ಟ್ಯಾಪಿಂಗ್ ಪರಿಕರ ಶೋಧನೆಗೆ 5 ಲಕ್ಷ!

ನೈಸರ್ಗಿಕ ರಬ್ಬರಿಗೆ ಬಂಪರ್ ಬೆಲೆ ಬಂದಿದೆ. ಕೃಷಿಯಲ್ಲಿ ಇಷ್ಟೊಂದು ಮಹತ್ವ ಇರುವ     ಉತ್ಪನ್ನ ಇನ್ನೊಂದು ಇಲ್ಲ. ಬೆಲೆ ಏರಿಕೆಯು ಈ ಕೃಷಿಯಲ್ಲೂ ಭಾರಿ ಸಂಚಲನ ಉಂಟು ಮಾಡಿದೆ. ಪರಿಣಾಮ ಮಲೆನಾಡು, ಕರಾವಳಿಯಲ್ಲಂತೂ ಖಾಲಿ ಭೂಮಿಯೇ ಇಲ್ಲ ಎನ್ನುವಷ್ಟರ ಮಟ್ಟಿಗೆ ರಬ್ಬರ್ ಬೆಳೆಯಲಾಗಿದೆ. ರಬ್ಬರ್ ಬೆಳೆಸಬೇಕೆಂಬ ಆಸೆ ಭೂಮಿಗೆ ಬೇಡಿಕೆ, ಚಿನ್ನದ ಬೆಲೆ ಬರಲೂ ಕಾರಣವಾಗಿದೆ!ರಬ್ಬರ್ ಬೆಳೆಗಾರರ ಬೆನ್ನಿಗೆ ರಬ್ಬರ್ ಮಂಡಳಿ ಇದೆ. ಅದರ ಪ್ರಾದೇಶಿಕ ಕಚೇರಿ, ತಾಂತ್ರಿಕ ಸಿಬ್ಬಂದಿ, ಸಹಾಯಕ ಕೃಷಿ ಅಧಿಕಾರಿಗಳು, ಕ್ಷೇತ್ರ ಸಹಾಯಕರು ಬೆಳೆಗೆ ಸಂಬಂಧಪಟ್ಟಂತೆ ಪ್ರೋತ್ಸಾಹ, ಮಾಹಿತಿ ನೀಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕಾರ್ಮಿಕರ ಕೊರತೆ ರಬ್ಬರ್ ವಲಯವನ್ನೂ ತೀವ್ರವಾಗಿ ಕಾಡುತ್ತಿದೆ.ಅದರಲ್ಲೂ ಕುಶಲ ಕಾರ್ಮಿಕರ ಅಲಭ್ಯತೆ ಈ ಕೃಷಿಯನ್ನೇ ಅವಲಂಬಿಸಿದವರಲ್ಲಿ ಆತಂಕ ಮೂಡಿಸಿದೆ. ಇದೀಗ ಈ ವಿಷಯವನ್ನೂ ರಬ್ಬರ್ ಮಂಡಳಿ ಗಂಭೀರವಾಗಿ ತೆಗೆದುಕೊಂಡಿದೆ.ರಬ್ಬರ್ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಮಂಡಳಿ ಹೊಸ ಚಿಂತನೆ, ಕೃಷಿಕನ ನೆರವಿಗೆ ನಿಲ್ಲುವ ನಿಟ್ಟಿನಲ್ಲಿ ನವೀನ ಯೋಚನೆಗೆ ಮುಂದಾಗಿದೆ. ಬಹುಶಃ ಕೃಷಿ ವಲಯದಲ್ಲಿ ಇಂಥದೊಂದು ಚಿಂತನೆ ಈ ಹಿಂದೆ ನಡೆದ ನಿದರ್ಶನವಿಲ್ಲ. ಕೃಷಿ ವಲಯದಲ್ಲಿ ಸಹಾಯಧನ, ಪರಿಹಾರಧನ ಕೇಳಿದ್ದೇವೆ.ಆದರೆ ಇದೀಗ ರಬ್ಬರ್ ಮಂಡಳಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ, ರಬ್ಬರ್ ಕೃಷಿಕ ಸದ್ಯ ಎದುರಿಸುತ್ತಿರುವ ಟ್ಯಾಪಿಂಗ್ ಕುಶಲ ಕಾರ್ಮಿಕರ ಕೊರತೆ ನೀಗಿಸಲು ಯಾಂತ್ರಿಕ ಪರಿಕರ ಸಂಶೋಧಿಸುವಂತೆ ಕರೆ ನೀಡಿದೆ.ಅಷ್ಟೇ ಅಲ್ಲ, `ಸಂಶೋಧಕ~ನಿಗೆ ರೂ 5 ಲಕ್ಷ  ಬಹುಮಾನ ನೀಡುವುದಾಗಿ ಪ್ರಕಟಿಸಿದೆ. ಮಂಡಳಿಯ ಅಧ್ಯಕ್ಷರಾದ ಶೀಲಾ ಥಾಮಸ್ ಇತ್ತೀಚೆಗೆ ಈ ಘೋಷಣೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ರಬ್ಬರ್ ಕೃಷಿ ವಲಯದಲ್ಲಿ ಕಾರ್ಮಿಕರ ಕೊರತೆ ನೀಗಿಸುವ ದೃಷ್ಟಿಯಲ್ಲಿ ಆಧುನಿಕವಾಗಿ ಆವಿಷ್ಕರಿಸಿದ ತಾಂತ್ರಿಕತೆ, ಯಂತ್ರೋಪಕರಣಗಳ ಮೊರೆ ಹೋಗಲು ಮಂಡಳಿ ನಿರ್ಧರಿಸಿದೆ. ಅದರ ಫಲವೇ `ಟ್ಯಾಪಿಂಗ್ ಪರಿಕರ ಶೋಧಿಸಿ ರೂ 5 ಲಕ್ಷ ಗೆಲ್ಲಿ~!ರಬ್ಬರ್ ಟ್ಯಾಪಿಂಗ್ ಅಂದರೆ ರಬ್ಬರ್ ಮರಕ್ಕೆ ನಿಯಂತ್ರಿತವಾಗಿ ಗಾಯ ಮಾಡಿ ಅದರಿಂದ ಹಾಲು ತೆಗೆಯುವ ವಿಧಾನ. ರಬ್ಬರ್ ಮರದ ತಿರುಳಿನ ಭಾಗಕ್ಕೆ ಗಾಯವಾಗದಂತೆ ವೈಜ್ಞಾನಿಕ ರೀತಿಯಲ್ಲಿ ಟ್ಯಾಪ್ ಮಾಡುವುದೂ ಒಂದು ಕಲೆ. ರಬ್ಬರ್ ಮರದ ಒಳಭಾಗದ ಮೃದುಪದರ ಹಾಗೂ ಹೊರಭಾಗದ ತೊಗಟೆಯಲ್ಲಿ ಹಾಲಿನ ಕೊಶಗಳಿರುತ್ತದೆ. ಟ್ಯಾಪಿಂಗ್ ಮಾಡಿದಾಗ ಅವುಗಳಿಂದ ಹಾಲು ಒಸರುತ್ತದೆ.ರಬ್ಬರ್ ಮರದ ತೊಗಟೆಯನ್ನು ನಿಧಾನವಾಗಿ ಜಾಗರೂಕತೆಯಿಂದ ತೆಗೆದು ಹಾಲಿಳಿಸುವುದರಿಂದ ರಬ್ಬರ್ ಇಳುವರಿಯೂ ಅಧಿಕವಾಗುತ್ತದೆ. ರಬ್ಬರ್ ಮರದ ಬಾಳ್ವಿಕೆಯೂ ದೀರ್ಘವಾಗುತ್ತದೆ ಎನ್ನುವುದು ಕೃಷಿ ಪಂಡಿತರ ಅನುಭವ.

ರಬ್ಬರ್ ಮಂಡಳಿ ಪ್ರತಿವರ್ಷ ಟ್ಯಾಪಿಂಗ್ ತರಬೇತಿ ನೀಡುತ್ತದೆ.ರಬ್ಬರ್ ಹಾಲು ಇಳಿಸುವ ವಿಧಾನ, ರಬ್ಬರ್ ಟ್ಯಾಪ್ ಮಾಡುವ ಮುನ್ನ ಅನುಸರಿಸಬೇಕಾದ ನಿಯಮ, ರಬ್ಬರ್ ಹಾಳೆ ತಯಾರಿ ಬಗ್ಗೆಯೂ ತರಬೇತಿ ನೀಡುತ್ತದೆ. ಟ್ಯಾಪಿಂಗ್ ಬಗ್ಗೆ ಅಲ್ಪಸ್ವಲ್ಲ ತಿಳಿದಿದ್ದರೂ ತರಬೇತಿ ಅವಧಿಯಲ್ಲಿ ರಬ್ಬರ್ ಟ್ಯಾಪಿಂಗ್ ಕೌಶಲ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಆದರೂ ಟ್ಯಾಪಿಂಗ್‌ಗೆ ಕುಶಲ ಕಾರ್ಮಿಕರ ಕೊರತೆ ಹೆಚ್ಚಿದೆ.ಸದ್ಯ `ಮಿಚಿ ಗೊಲಿಡ್ಜ್~ ಹಾಗೂ `ಜೆಬಾಂಗ್~ ಎಂಬ ಹರಿತವಾದ ಕತ್ತಿಗಳನ್ನು ಟ್ಯಾಪಿಂಗ್‌ಗೆ ಬಳಸಲಾಗುತ್ತಿದೆ. ಈ ಕತ್ತಿಗಳು ಬಳಕೆಯಲ್ಲಿದ್ದರೂ ಎಷ್ಟೋ ಸಂದರ್ಭಗಳಲ್ಲಿ ಅವೈಜ್ಞಾನಿಕವಾಗಿ ಟ್ಯಾಪಿಂಗ್ ನಡೆಯುತ್ತದೆ. ಇದರಿಂದ ಇಳುವರಿ ಮೇಲೆ ಪರಿಣಾಮ ಉಂಟಾಗುತ್ತದೆ. ಹೀಗಾಗಿ ರಬ್ಬರ್ ಮಂಡಳಿ ಅನಿವಾರ್ಯವಾಗಿ ಆಧುನಿಕ ಟ್ಯಾಪಿಂಗ್ ಪರಿಕರದ ಶೋಧಕ್ಕೆ ಕೈಹಾಕಿದೆ.`ಯಾಂತ್ರಿಕವಾಗಿ ಅಭಿವೃದ್ಧಿಪಡಿಸಿದ ಟ್ಯಾಪಿಂಗ್ ಪರಿಕರವನ್ನು ಮಂಡಳಿಗೆ ನೀಡಬೇಕು. ಒಪ್ಪಿಗೆಯಾದ ಪರಿಕರವನ್ನು ಶೋಧಿಸಿದ ವ್ಯಕ್ತಿ ಅಥವಾ ಸಂಸ್ಥೆಗೆ ರೂ 5 ಲಕ್ಷ  ನೀಡಲಾಗುವುದು. ತಾಂತ್ರಿಕವಾಗಿ ಅಭಿವೃದ್ಧಿಪಡಿಸಿದ ಪರಿಕರದ ಮೇಲೆ ಮತ್ತಷ್ಟು ಅಧ್ಯಯನ ನಡೆಸಲಾಗುವುದು.

 

ಅಭಿವೃದ್ದಿಗೊಳಿಸಿದ ಬಳಿಕ ಆ ಪರಿಕರವನ್ನು ಶೋಧಿಸಿದವರ ಸಹಭಾಗಿತ್ವದಲ್ಲಿ ಅದನ್ನು ರಬ್ಬರ್ ಕೃಷಿಕರ ಬಳಿಗೆ ಕೊಂಡೊಯ್ಯಲಾಗುವುದು~ ಎನ್ನುತ್ತಾರೆ ಶೀಲಾ ಥಾಮಸ್.ಟ್ಯಾಪಿಂಗ್ ವರ್ಕಿಂಗ್ ಮಾದರಿ ಶೋಧಿಸಿದವರು ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿರುವ ಭಾರತೀಯ ರಬ್ಬರ್ ಸಂಶೋಧನಾ ಸಂಸ್ಥೆಯನ್ನು ಸಂಪರ್ಕಿಸಬಹುದು. ಆಸಕ್ತರು ತಮ್ಮ ಮಾದರಿಯ ವಿವರವನ್ನು ಆಗಸ್ಟ್ 21ರೊಳಗೆ ಸಂಸ್ಥೆಯ ಗಮನಕ್ಕೆ ತರಬೇಕು. ಮಂಡಳಿ ರಚಿಸಿದ ಪರಿಣತ ಸಮಿತಿಯ ಎದುರು ಮಾದರಿಯ ವಿನ್ಯಾಸದ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ನೀಡಬೇಕು.ತಜ್ಞರ ಸಮಿತಿ ಆ ಪರಿಕರ ಶೋಧಕನ ಉಪಸ್ಥಿತಿಯಲ್ಲಿ ಅದರ ಗುಣಮಟ್ಟ ಮತ್ತು ಕಾರ್ಯಕ್ಷಮತೆಯ ಸಮಗ್ರ ಮೌಲ್ಯಮಾಪನ ಮಾಡಲಿದೆ. ಸೂಕ್ತವೆಂದು ಕಂಡುಬಂದ ಮಾದರಿಯನ್ನು ಮುಂದಿನ ದಿನಗಳಲ್ಲಿ ವಾಣಿಜ್ಯಕವಾಗಿ ಮಾರುಕಟ್ಟೆಗೆ ತರಲಾಗುವುದು. ಆಯ್ಕೆಯಾದ ಮಾದರಿಯ ಸುಧಾರಣೆಗಾಗಿ ಮಂಡಳಿ ಜೊತೆ ಸಹಭಾಗಿತ್ವದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು.

 

ಟ್ಯಾಪಿಂಗ್ ಕೆಲಸ ಯಾಂತ್ರಿಕಗೊಳಿಸಲು ಮತ್ತು ಈ ವಲಯದಲ್ಲಿರುವ ಕುಶಲಕರ್ಮಿಗಳ ಕೊರತೆಯನ್ನು ಸಮರ್ಥವಾಗಿ ಎದುರಿಸುವ ಉದ್ದೇಶದಿಂದ ಮಂಡಳಿ ಈ ನಿರ್ಧಾರಕ್ಕೆ ಬಂದಿದೆ~ ಎನ್ನುವುದು ಅವರ ಸಮರ್ಥನೆ.ರಬ್ಬರ್ ವಲಯದಲ್ಲಿ ಟ್ಯಾಪಿಂಗ್ ನಿರ್ವಹಿಸುವುದು ದೊಡ್ಡ ಸವಾಲು, ದೇಶದ ಒಟ್ಟು ರಬ್ಬರ್ ಉತ್ಪಾದನೆಯಲ್ಲಿ ಶೇ 90ರಷ್ಟು ಕೇರಳದಲ್ಲಿ ಉತ್ಪಾದನೆಯಾಗುತ್ತದೆ. ಇತರ ಬೆಳೆಗಳಿಗಿಂತ ಭಿನ್ನವಾಗಿರುವ ರಬ್ಬರ್ ಕೃಷಿಯಲ್ಲಿ ಹಾಲು ಇಳಿಸುವ ಪ್ರಕಿಯೆ ಸಂಕೀರ್ಣ ಕೆಲಸ.ಟ್ಯಾಪಿಂಗ್ ಕುಶಲತೆ ಇಲ್ಲವರು ಆ ವೃತ್ತಿ ಮಾಡಿದರೆ ಬೆಳವಣಿಗೆ, ಇಳುವರಿ ಮತ್ತು ರಬ್ಬರ್ ಮರದ ಜೀವಿತಾವಧಿ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ ಎಂಬ ಅಂಶವೂ ಅಧ್ಯಯನದಿಂದ ಸಾಬೀತಾಗಿದೆ.ಯಾಂತ್ರೀಕೃತ ಟ್ಯಾಪಿಂಗ್ ಪರಿಕರವನ್ನು ಅಕುಶಲಕರ್ಮಿಗಳೂ ಬಳಸಬಹುದು. ಇದರಿಂದ ರಬ್ಬರ್ ಬೆಳೆಯಲ್ಲಿ ಕ್ರಾಂತಿಕಾರಕ ಬದಲಾವಣೆ ಸಾಧ್ಯ. ರಬ್ಬರ್ ಉತ್ಪಾದಿಸುವ ದೇಶಗಳು ಈಗಾಗಲೇ ಯಾಂತ್ರೀಕೃತ ಪರಿಕರವನ್ನು ಅಭಿವೃದ್ಧಿಪಡಿಸುವ ಪ್ರಯತ್ನದಲ್ಲಿ ತೊಡಗಿವೆ.ರಬ್ಬರ್ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿರುವ ಮಲೇಷ್ಯಾ, ಜಪಾನ್ ಸಹಭಾಗಿತ್ವದಲ್ಲಿ ಈಗಾಗಲೇ ಯಾಂತ್ರೀಕೃತ ರಬ್ಬರ್ ಟ್ಯಾಪಿಂಗ್ ಸಾಧನವೊಂದನ್ನು ಅಭಿವೃದ್ಧಿಪಡಿಸಿದೆ. ಆದರೆ ಪ್ರಾಯೋಗಿಕ ಮತ್ತು ವ್ಯಾಪಾರೀ ದೃಷ್ಟಿಯಲ್ಲಿ ಅದು ಕಾರ್ಯಸಾಧುವಲ್ಲ. ಹೀಗಾಗಿ ನಮ್ಮ ರಬ್ಬರ್ ಮಂಡಳಿ ಈ ಕಾರ್ಯಕ್ಕೆ ಮುಂದಾಗಿದೆ.

               

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.