ಗುರುವಾರ , ಫೆಬ್ರವರಿ 25, 2021
20 °C

ಡರ್ಟ್‌ ಬೈಕ್‌ ರಸ್ತೆಗಲ್ಲ; ರೇಸ್‌ಗೆ..!

ಬಸೀರಅಹ್ಮದ್‌ ನಗಾರಿ Updated:

ಅಕ್ಷರ ಗಾತ್ರ : | |

ಡರ್ಟ್‌ ಬೈಕ್‌ ರಸ್ತೆಗಲ್ಲ; ರೇಸ್‌ಗೆ..!

ಸೂಪರ್‌ ಬೈಕ್‌ ಸವಾರಿ ಅಂದರೆ ಉಸಿರು ಬಿಗಿ ಹಿಡಿಯುವ ಅನುಭವ. ಡರ್ಟ್‌ ಬೈಕ್‌ಗಳ ಸವಾರಿ ಇನ್ನೂ ರೋಚಕ! ಸವಾರಿ ಮಾಡುವುದಷ್ಟೇ ಅಲ್ಲ, ಅದನ್ನು ನೋಡುವವರ ಮೈಮನವೂ ಒಂದು ಕ್ಷಣ ರೋಮಾಂಚನದಿಂದ ಕಂಪಿಸುತ್ತದೆ! ಇಂಥ ರೋಚಕ ಅನುಭವ ನೀಡಬಲ್ಲ ಬೈಕ್‌ಗಳನ್ನು ರೂಪಿಸಿದೆ ಸುಜುಕಾ ಮೊಟರ್‌ ಸೈಕಲ್‌ ಕಂಪೆನಿ. 2000ರಲ್ಲಿ ಸ್ಥಾಪನೆಯಾದ ಗುಜರಾತ್‌ ಮೂಲದ ಸುಜುಕಾ, ಎಟಿವಿ ಹಾಗೂ ಆಫ್‌ ರೋಡ್‌ ಮೋಟೊ ಕ್ರಾಸ್‌ ವಿಭಾಗದಲ್ಲಿ ವಾಹನ ತಯಾರಿಕಾ ವ್ಯಾಪಾರಕ್ಕೆ ಇಳಿದಿದ್ದು 2005ರಲ್ಲಿ. ಇದೀಗ ಜಪಾನ್‌ ಎಂಜಿನಿಯರಿಂಗ್ ಸಹಯೋಗದೊಂದಿಗೆ ತಲಾ ಮೂರು ಡರ್ಟ್‌ ಬೈಕ್‌ ಹಾಗೂ ಎಟಿವಿಗಳನ್ನು ಭಾರತದಲ್ಲಿ ಪರಿಚಯಿಸಿದೆ. ಡರ್ಟ್‌ ಬೈಕ್‌ಗಳು ರಸ್ತೆಗಲ್ಲ. ಇವುಗಳನ್ನು  ಸಾರ್ವಜನಿಕ ರಸ್ತೆಗಳಲ್ಲಿ ಓಡಿಸುವಂತಿಲ್ಲ. ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ (ಆರ್‌ಟಿಒ) ಇವುಗಳನ್ನು ನೋಂದಾಯಿಸಲೂ ಆಗದು. ಡರ್ಟ್‌ ರೇಸ್‌ ಟ್ರಾಕ್‌ಗಳಲ್ಲಿ ಹಾಗೂ ರಸ್ತೆಗಳಿಲ್ಲದೆಡೆ ಸವಾರಿಗಾಗಿ ಇವನ್ನು ರೂಪಿಸಲಾಗುತ್ತದೆ. ಇನ್ನಷ್ಟು ಸರಳೀಕ ರಿಸಿ ಹೇಳುವುದಾದರೆ, ಮಣ್ಣು– ಕೆಸರು ತುಂಬಿದ ರಸ್ತೆಗಳಲ್ಲಿ, ಗದ್ದೆಗಳಲ್ಲಿ ಓಡಿಸಲು ಸೂಕ್ತ ಎನ್ನಬಹುದು.ಭಾರತದಲ್ಲಿ ಡರ್ಟ್‌ ಬೈಕ್‌ ಪ್ರೇಮಿಗಳ ಸಂಖ್ಯೆ ಸೂಪರ್‌ ಬೈಕ್‌ನಷ್ಟಿಲ್ಲ ಎನ್ನಬಹುದು. ಆದರೆ ಮಾರುಕಟ್ಟೆ ನಿಧಾನವಾಗಿ ಬೆಳೆಯುತ್ತಿದೆ. ಇದೀಗ ಸುಜುಕಾ, ಎಸ್‌ಆರ್‌ಎಂ 250ಎಸಿ, ಎಸ್‌ಆರ್‌ಎಂ 250ಡಬ್ಲ್ಯುಸಿ ಮತ್ತು ಎಸ್‌ಆರ್‌ಎಂ 250 ಎಂಬ ಮೂರು ಡರ್ಟ್‌ ಬೈಕ್‌ಗಳನ್ನು ಹೊರ ತಂದಿದೆ. ಈ ಮೂರು ಬೈಕ್‌ಗಳ ಎಂಜಿನ್‌ ಸಾಮರ್ಥ್ಯ 250ಸಿಸಿ.ಎಸ್‌ಆರ್‌ಎಂ 250ಎಸಿ

ಇದು 250 ಸಿಸಿ ಬೈಕ್‌. ಏರ್‌ ಕೂಲ್ಡ್‌ ಎಂಜಿನ್‌ ಹೊಂದಿದೆ. ಎರಡು ವಾಲ್ವ್‌ಗಳ ಎಂಜಿನ್‌ ಇದಕ್ಕಿದ್ದು, ಗರಿಷ್ಠ 16.3 ಪಿಎಸ್‌ (7000 ಆರ್‌ಪಿಎಂ) ಶಕ್ತಿ ಹಾಗೂ 17.5 ಎನ್‌ಎಂ ಟಾರ್ಕ್‌ (5500) ಉತ್ಪಾದಿಸಬಲ್ಲದು. ಇದು ಸಾಮಾನ್ಯ ದ್ವಿಚಕ್ರ ವಾಹನದ ಭಾಗಗಳನ್ನೇ ಹೊಂದಿದೆ. ಪ್ರತಿ ಗಂಟೆಗೆ ಗರಿಷ್ಠ 120 ಕಿ.ಮೀ ವೇಗ ನೀಡುತ್ತದೆ ಎಂದು ಕಂಪೆನಿ ಹೇಳಿದೆ. ಬೆಲೆ  ರೂ 3.4 ಲಕ್ಷ.ಎಸ್‌ಆರ್‌ಎಂ 250 ಡಬ್ಲ್ಯುಸಿ

ಇದು ಸಹ ಎಸ್‌ಆರ್‌ಎಂ 250 ಎಸಿ ಅಂತೆಯೇ 250ಸಿಸಿ ಎಂಜಿನ್‌ ಹೊಂದಿದ್ದರೂ ಗರಿಷ್ಠ 17 ಪಿಎಸ್‌ (7000) ಶಕ್ತಿ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಟಾರ್ಕ್‌ ಮಾತ್ರ ಅಷ್ಟೆ. ಲಿಕ್ವಿಡ್‌ ಕೂಲ್ಡ್‌ ಎಂಜಿನ್‌ ಇದಕ್ಕಿದೆ. ಜೊತೆಗೆ ಕಂಪೆನಿಯೇ ರೂಪಿಸಿರುವ ಅಪ್‌ಗ್ರೇಡ್‌ ಸಸ್ಪೆನ್ಷನ್‌ ಕಿಟ್‌ ಅವಳವಡಿಸಿಕೊಂಡಿದೆ. ಇದರ ಬೆಲೆ 3.45 ಲಕ್ಷ ರೂಪಾಯಿ.ಎಸ್‌ಆರ್‌ಎಂ 250

ಇದು ಇತರ ಎರಡು ಬೈಕ್‌ಗಿಂತಲೂ ಶಕ್ತಿಯಲ್ಲಿ ಬಲಶಾಲಿ. ನೋಡಲು 250ಎಸಿ ಹಾಗೂ 250ಡಬ್ಲ್ಯುಸಿಯಂತೆ ಕಾಣುತ್ತದೆ. ಆದರೆ ಎಂಜಿನ್‌ ಸಾಮರ್ಥ್ಯ ಇದನ್ನು ಭಿನ್ನವಾಗಿ ನಿಲ್ಲಿಸುತ್ತದೆ. 250.1ಸಿಸಿ ಸಾಮರ್ಥ್ಯದ ಎಂಜಿನ್‌ ಲಿಕ್ವಿಡ್‌ ಕೂಲ್ಡ್‌ ಆಗಿದೆ. ನಾಲ್ಕು ವಾಲ್ವ್‌ಗಳ ಸಿಂಗಲ್‌ ಸಿಲಿಂಡರ್‌ ಗರಿಷ್ಠ 22 ಬಿಎಚ್‌ಪಿ ಶಕ್ತಿ ಹಾಗೂ 20 ಎನ್‌ಎಂ ಟಾರ್ಕ್‌ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಗರಿಷ್ಠ ವೇಗ ಪ್ರತಿ ಗಂಟೆಗೆ 135 ಕಿ.ಮೀ ಎಂದು ಕಂಪೆನಿ ಹೇಳಿದೆ. ಇದರ ಬೆಲೆ 3.65 ಲಕ್ಷ ರೂಪಾಯಿ (ತೆರಿಗೆಗಳು ಹೆಚ್ಚುವರಿ).

ಸಮಾನ ಅಂಶಗಳು

ಈ ಮೂರು ಬೈಕ್‌ಗಳಲ್ಲಿ ಅನೇಕ ಸಮಾನ ಅಂಶಗಳು ಅಡಕವಾಗಿವೆ. ಅದು ಎಂಜಿನ್‌ನ ಸಿಸಿಯಿಂದಲೇ ಶುರುವಾಗುತ್ತದೆ. ಮೂರರಲ್ಲೂ 250ಸಿಸಿ ಸಾಮರ್ಥ್ಯದ ಎಂಜಿನ್‌ಗಳಿವೆ. ಎಲ್ಲವೂ ಸುಜುಕಾ ವಿನ್ಯಾಸಗೊಳಿಸಿರುವ ಎಂಜಿನ್‌ಗಳನ್ನು ಹೊಂದಿವೆ. ಗೇರ್‌ ಬಾಕ್ಸ್‌ ಸಾಮರ್ಥ್ಯ ಮೂರು ಬೈಕ್‌ಗಳಲ್ಲಿ ಸಮಾನವಾಗಿದೆ – ಗರಿಷ್ಠ ಐದು ಗೇರ್‌ಗಳು. ಇಂಧನ ಟ್ಯಾಂಕ್‌ ಸಾಮರ್ಥ್ಯವೂ ಅಷ್ಟೇ – 6 ಲೀಟರ್‌. ಮುಂದೆ ಹಾಗೂ ಹಿಂದೆ ಡಿಸ್ಕ್‌ ಬ್ರೇಕ್‌ಗಳಿವೆ. ಎಲ್ಲವೂ ಎಲೆಕ್ಟ್ರಿಕ್‌ ಹಾಗೂ ಕಿಕ್‌ ಸ್ಟಾರ್ಟ್‌ ಸೌಲಭ್ಯ ಪಡೆದಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.