ಮಂಗಳವಾರ, ಏಪ್ರಿಲ್ 13, 2021
28 °C

ಡಾ.ಭಟ್ ಈಗಲೂ ಮೌಲ್ಯಮಾಪನ ಕುಲಸಚಿವರೇ?

ಪ್ರಜಾವಾಣಿ ವಾರ್ತೆ/ ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಧಾರವಾಡ: ಕಳೆದ 23ರಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾಗಿದ್ದ ಡಾ.ಜೆ.ಎಸ್.ಭಟ್ ಅವರನ್ನು ಆ ಹುದ್ದೆಯಿಂದ ಬಿಡುಗಡೆ ಮಾಡಿತ್ತು.ಜೊತೆಗೆ ಸಿಂಡಿಕೇಟ್ ಸಭೆಯಿಂದಲೂ ಹೊರಗಿಡಲಾಗಿತ್ತು. ಆದರೆ ಭಟ್ `ಸರ್ಕಾರವೇ ತಮ್ಮನ್ನು ಹುದ್ದೆಯಿಂದ ಕೆಳಗಿಳಿಸಿದ ಬಗ್ಗೆ ಆದೇಶ ನೀಡಬೇಕು~ ಎಂಬ ನಿಲುವಿಗೆ ಕಟ್ಟುಬಿದ್ದಂತೆ ತೋರುತ್ತಿದೆ.ಈ ಮಾತಿಗೆ ಪುಷ್ಟಿ ನೀಡುವಂತೆ ಮೌಲ್ಯಮಾಪನ ಕುಲಸಚಿವರ ಹುದ್ದೆಯಿಂದ ಕೆಳಗಿಳಿಸಿದ ಬಗ್ಗೆ ವಿ.ವಿ. ಕುಲಸಚಿವರು ಆದೇಶ ಹೊರಡಿಸಿ ಅದಕ್ಕೆ ಡಾ.ಜೆ.ಎಸ್.ಭಟ್ ಅವರ ಸಹಿಯನ್ನು ಪಡೆದಿದ್ದರೂ ಜೂನ್ 25ರಂದು ವಿ.ವಿ. ಕುಲಸಚಿವರಿಗೆ ಎರಡು ದಿನ ರಜೆ ನೀಡುವಂತೆ ಕೋರಿ ಕಳುಹಿಸಿದ ಫ್ಯಾಕ್ಸ್ ಸಂದೇಶದಲ್ಲಿ `ಮೌಲ್ಯಮಾಪನ ಕುಲಸಚಿವ~ ಎಂದೇ ತಮ್ಮನ್ನು ಕರೆದುಕೊಂಡಿದ್ದಾರೆ! ಅದಕ್ಕೆ ಪೂರಕವಾಗಿ ಕಚೇರಿಯ ಅಧಿಕೃತ `ಲೆಟರ್ ಹೆಡ್~ನಲ್ಲಿ ರಜೆ ಮನವಿ ಸಲ್ಲಿಸಿದ್ದಾರೆ.ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ವಿಶ್ವವಿದ್ಯಾಲಯವು ಇನ್ನಿತರ ಹಲವು ಮಹತ್ವದ ಸಂಗತಿಗಳನ್ನೂ ಉಲ್ಲೇಖಿಸಿ, `ಭಟ್ ಅವರನ್ನು ಸೇವೆಯಿಂದ ಬಿಡುಗಡೆಗೊಳಿಸಿದ~ ಬಗ್ಗೆ ಅಧಿಕೃತ ಆದೇಶವನ್ನು ಹೊರಡಿಸಬೇಕು ಎಂದು ಕೋರಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಮೂರು ಪುಟಗಳ ಸುದೀರ್ಘ ಪತ್ರವನ್ನು ಬರೆದಿದೆ. ಪತ್ರದ ಪ್ರತಿ `ಪ್ರಜಾವಾಣಿ~ಗೆ ಲಭ್ಯವಾಗಿದೆ.ಅದಕ್ಕೆ ಪೂರಕವಾಗಿ ಭಟ್ ಅವರು ಈ ಹಿಂದೆ ಮೌಲ್ಯಮಾಪನ ಕುಲಸಚಿವರಾಗಿ ನೇಮಕವಾಗಿದ್ದ ಡಾ.ಎನ್.ಬಿ.ಮಲ್ಲೂರ ಅವರಿಗೆ ಅಧಿಕಾರ ಹಸ್ತಾಂತರಿಸಲು ತಡಮಾಡಿದ್ದು, ಹೆಚ್ಚುವರಿ ವೇತನ ಪಡೆದ ಬಗ್ಗೆ ಲೆಕ್ಕ ಪರಿಶೋಧಕರ ಆಕ್ಷೇಪಣೆ ದಾಖಲಿಸಿದ್ದು, ಕಳೆದ 23ರಂದು ಪ್ರಭಾರಿ ಮೌಲ್ಯಮಾಪನ ಕುಲಸಚಿವರಾಗಿ ನೇಮಕವಾದ ಡಾ.ಎಚ್.ಝಡ್.ನಿನ್ನೇಕರ್ ಅವರ ಕಚೇರಿಗೆ ತೆರಳಿ ತಾವು ಆ ಸ್ಥಾನವನ್ನು ಅತಿಕ್ರಮಣ ಮಾಡಿದ್ದನ್ನು ಈ ಪತ್ರದಲ್ಲಿ ಕುಲಪತಿ ಪ್ರೊ.ಎಚ್.ಬಿ.ವಾಲೀಕಾರ ವಿವರವಾಗಿ ದಾಖಲಿಸಿದ್ದಾರೆ.ಪರೀಕ್ಷಾ ವಿಭಾಗದ ಕಾರ್ಯಗಳು ಸುಗಮವಾಗಿ ಸಾಗುವ ಉದ್ದೇಶದಿಂದ ಪ್ರಭಾರಿ ಕುಲಸಚಿವರನ್ನಾಗಿ ಸೇವಾ ಜ್ಯೇಷ್ಠತೆಯ ಆಧಾರದ ಮೇಲೆ ಡಾ.ನಿನ್ನೇಕರ್ ಅವರನ್ನು ನೇಮಕ ಮಾಡಲಾಗಿದ್ದು, ಜೂನ್ 23ರಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ಮೌಲ್ಯಮಾಪನ ಕುಲಸಚಿವರನ್ನಾಗಿ ನೇಮಕ ಮಾಡಲು ಮೂವರ ಹೆಸರನ್ನೂ ನೇಮಕ ಮಾಡಲಾಗಿದೆ ಎಂದೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಒಟ್ಟು 15 ಮಹತ್ವದ ಸಂಗತಿಗಳ ಬಗ್ಗೆ ಪತ್ರದಲ್ಲಿ ಪ್ರಸ್ತಾಪಿಸಲಾಗಿದ್ದು, ಅಂತಿಮವಾಗಿ ಕಳೆದ 30ರಂದು ಹೈಕೋರ್ಟ್‌ನ ಧಾರವಾಡ ಸಂಚಾರಿ ಪೀಠವು ಕರ್ನಾಟಕ ವಿಶ್ವವಿದ್ಯಾಲಯಗಳ ಕಾಯ್ದೆಯ 18 (1) 2000ರ ಕಾಯ್ದೆಯನ್ನು ಉಲ್ಲೇಖಿಸಿ ನೀಡಿದ ತೀರ್ಪಿನ ಅನ್ವಯ ಬೇರೊಬ್ಬರ ನೇಮಕ ಮಾಡಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದೂ ಒತ್ತಾಯಿಸಲಾಗಿದೆ.ಕಳೆದ 28ರಂದು ಹೈಕೋರ್ಟ್ ಈ ಮೊದಲು ನ್ಯಾಯಮೂರ್ತಿ ರಾಮಮೋಹನ ರೆಡ್ಡಿ ಅವರು ನೀಡಿದ್ದ ತೀರ್ಪನ್ನು ಎತ್ತಿಹಿಡಿಯುವ ಮೂಲಕ ಭಟ್‌ಗೆ ಮತ್ತೆ ಹಿನ್ನಡೆಯಾಗಿದೆ. ಆದರೆ ಭಟ್ ರಾಜಕೀಯವಾಗಿ ಪ್ರಭಾವಿಯಾಗಿದ್ದು ಮತ್ತೆ ತಮ್ಮ ಪರ ಆದೇಶ ತರುವರೇ? ಇಲ್ಲ ವಿ.ವಿ. ಸೂಚಿಸಿದ ಮೂರು ಹೆಸರಲ್ಲಿ ಸರ್ಕಾರ ಒಬ್ಬರನ್ನು ಅಂತಿಮಗೊಳಿಸುವುದೇ? ಎಂಬುದು  ಕುತೂಹಲ ಕೆರಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.