ಗುರುವಾರ , ಮಾರ್ಚ್ 4, 2021
29 °C

ಡಾ.ರಾಜ್‌ ಸಮಾಧಿಗೆ ಕುಟುಂಬ ಸದಸ್ಯರಿಂದ ನಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಾ.ರಾಜ್‌ ಸಮಾಧಿಗೆ ಕುಟುಂಬ ಸದಸ್ಯರಿಂದ ನಮನ

ಬೆಂಗಳೂರು: ವರನಟ ಡಾ.ರಾಜ್‌ಕುಮಾರ್ ಅವರ 6ನೇ ಪುಣ್ಯತಿಥಿ ಅಂಗವಾಗಿ ನಗರದ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಅವರ ಸಮಾಧಿ ಬಳಿಗೆ ತೆರಳಿದ ಕುಟುಂಬ ಸದಸ್ಯರು ಗುರುವಾರ ಪೂಜೆ ಸಲ್ಲಿಸಿದರು.ಪತ್ನಿ ಪಾರ್ವತಮ್ಮ ರಾಜ್‌ಕುಮಾರ್, ಪುತ್ರರಾದ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಸೊಸೆಯಂದಿರಾದ ಗೀತಾ, ಮಂಗಳಾ, ಅಶ್ವಿನಿ ಸೇರಿದಂತೆ ರಾಜ್ ಸಂಬಂಧಿಕರು `ಅಣ್ಣಾವ್ರಿ~ಗೆ ಪ್ರಿಯವಾದ ತಿಂಡಿ ತಿನಿಸು ನೈವೇದ್ಯಕ್ಕಿಟ್ಟು ಪೂಜೆ ಸಲ್ಲಿಸಿದರು.ಅಣ್ಣಾವ್ರ ಸಮಾಧಿಯನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧೆಡೆಯಿಂದ ಅಭಿಮಾನಿಗಳು ಆಗಮಿಸಿದ್ದರು. ಸರತಿ ಸಾಲಿನಲ್ಲೇ ಬಂದ ಅಭಿಮಾನಿಗಳು ನೆಚ್ಚಿನ ನಟನಿಗೆ ಗೌರವಪೂರ್ವಕ ನಮನ ಸಲ್ಲಿಸಿದರು. ಶ್ರೇಷ್ಠ ನಟ ಅಗಲಿ ಆರು ವರ್ಷ ಸಂದಿದ್ದರೂ ಸ್ಮಾರಕ  ಪೂರ್ಣಗೊಳಿಸದೇ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದ ಅಭಿಮಾನಿಗಳು, ಶೀಘ್ರವೇ ಸರ್ಕಾರ ಈ ಯೋಜನೆಯನ್ನು ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಪಾರ್ವತಮ್ಮ ರಾಜ್‌ಕುಮಾರ್, `ರಾಜ್ಯದ ವಿವಿಧೆಡೆಯಿಂದ ಆಗಮಿಸುತ್ತಿರುವ ಅಭಿಮಾನಿಗಳ ಅಭಿಮಾನವನ್ನು ಕಂಡರೆ ಸಂತಸವೆನಿಸುತ್ತದೆ. ಇವರ ಅಭಿಮಾನದಲ್ಲಿಯೇ ರಾಜ್‌ಕುಮಾರ್ ಅವರನ್ನು ಕಾಣುತ್ತಿದ್ದೇನೆ~ ಎಂದು ಭಾವುಕರಾದರು. ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, `ರಾಜ್‌ಕುಮಾರ್ ಅವರ ಸ್ಮಾರಕವನ್ನು ಶೀಘ್ರವೇ ಉದ್ಘಾಟನೆ ಮಾಡುವಂತೆ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರಲ್ಲಿ ಮನವಿ ಮಾಡಿದ್ದೇವೆ. ಏ. 24 ರಂದು ರಾಜ್‌ಕುಮಾರ್ ಹುಟ್ಟುಹಬ್ಬವಿರುವುದರಿಂದ ಈ ದಿನವೇ ಉದ್ಘಾಟನಾ ದಿನ ನಿಗದಿಪಡಿಸಬೇಕೆಂಬುದು ಅಭಿಮಾನಿಗಳ ಅಪೇಕ್ಷೆ. ಆದರೆ ಬರ ಇರುವುದರಿಂದ ಒತ್ತಡ ಹಾಕಲು ಸಾಧ್ಯವಾಗುತ್ತಿಲ್ಲ. ನವೆಂಬರ್ 1ರೊಳಗಾದರೂ ಉದ್ಘಾಟನೆ ಮಾಡುವಂತೆ ಮನವಿ ಮಾಡಿಕೊಂಡಿದ್ದೇವೆ~ ಎಂದು ಹೇಳಿದರು.ಪಾರ್ವತಮ್ಮನವರ ತಮ್ಮಂದಿರಾದ ಎಸ್.ಎ.ಚಿನ್ನೇಗೌಡ, ಎಸ್.ಎ. ಗೋವಿಂದರಾಜು, ಸಾಹಿತಿ ಬರಗೂರು ರಾಮಚಂದ್ರಪ್ಪ ಇತರರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.