ಸೋಮವಾರ, ಮೇ 10, 2021
22 °C

ಡಾಲರ್ ಎದುರು ರೂಪಾಯಿ ಅಪಮೌಲ್ಯ : ಆರ್‌ಬಿಐ ಮಧ್ಯಪ್ರವೇಶ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಡಾಲರ್ ಎದುರು ರೂಪಾಯಿ ಮೌಲ್ಯ ತೀವ್ರವಾಗಿ ಕುಸಿಯುತ್ತಿರುವ ಹಿನ್ನೆಲೆಯಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಜತೆ ಶೀಘ್ರದಲ್ಲೇ ಚರ್ಚೆ ನಡೆಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿದ್ದಾರೆ.ಕಳೆದ ಒಂದು ವಾರದಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 231 ಪೈಸೆಗಳಷ್ಟು (ಶೇ 4.89) ಕುಸಿತ ಕಂಡಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು  ಮತ್ತು ತೈಲ ಕಂಪೆನಿಗಳಿಂದ ಡಾಲರ್ ಬೇಡಿಕೆ ಹೆಚ್ಚಾಗಿರುವುದು ದೇಶಿ ಮಾರುಕಟ್ಟೆಯಲ್ಲಿ ಏರಿಳಿತ ಸೃಷ್ಟಿಸಿದೆ. ಈ ಸಂಗತಿಗಳ ಹಿನ್ನೆಲೆಯಲ್ಲಿ ಶೀಘ್ರದಲ್ಲಿಯೇ `ಆರ್‌ಬಿಐ~ ಗವರ್ನರ್ ಡಿ. ಸುಬ್ಬರಾವ್ ಜತೆ ಚರ್ಚೆ ನಡೆಸುವುದಾಗಿ ಪ್ರಣವ್ ಹೇಳಿದ್ದಾರೆ.ರೂಪಾಯಿ ಮೌಲ್ಯ ಕಳೆದ 28 ತಿಂಗಳ ಹಿಂದಿನ ಮಟ್ಟಕ್ಕೆ ದುರ್ಬಲಗೊಂಡಿದ್ದರೂ, ಈ ಹಂತದಲ್ಲಿ ಮಧ್ಯಪ್ರವೇಶಿಸಬೇಕಾದ ತುರ್ತು ಉದ್ಭವಿಸಿಲ್ಲ ಎಂದು `ಆರ್‌ಬಿಐ~ ಡೆಪ್ಯುಟಿ ಗವರ್ನರ್ ಸುಬೀರ್ ಗೋಕರ್ಣ ಶುಕ್ರವಾರ ಹೇಳಿಕೆ ನೀಡಿದ್ದರು.ಆದರೆ, ಆರ್‌ಬಿಐ ಈಗ ಮಧ್ಯಪ್ರವೇಶಿಸಬೇಕಾದ ತುರ್ತು ಉದ್ಭವಿಸಿದೆ. ವಿದೇಶಿ ಕರೆನ್ಸಿಗಳನ್ನು ಖರೀದಿಸುವ ಅಥವಾ ಮಾರಾಟ ಮಾಡುವ ಮೂಲಕ `ಆರ್‌ಬಿಐ~ ವಿದೇಶಿ ವಿನಿಮಯ ದರ ನಿಯಂತ್ರಿಸಬಹುದು ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸುಬ್ಬರಾವ್ ಮತ್ತು ಪ್ರಣವ್ ಇಬ್ಬರೂ ಇಲ್ಲಿ ನಡೆಯುತ್ತಿರುವ ಅಂತರರಾಷ್ಟೀಯ ಹಣಕಾಸು ನಿಧಿ (ಐಎಂಎಫ್) ಮತ್ತು ವಿಶ್ವಬ್ಯಾಂಕ್ ಸಭೆಗಳಿಗೆ ಭಾಗವಹಿಸಲು ಆಗಮಿಸಿದ್ದಾರೆ.ಡಾಲರ್ ಎದುರು ರೂಪಾಯಿ ಅಪಮೌಲ್ಯವನ್ನು ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ.  ಸಂಭವನೀಯ `ಕರೆನ್ಸಿ ಸಮರ~ವನ್ನು ತಡೆಯಲು ಅಂತರರಾಷ್ಟ್ರೀಯ ಸಮುದಾಯ ಕೈಜೋಡಿಸಬೇಕು ಎಂದು ಪ್ರಣವ್ ಹೇಳಿದ್ದಾರೆ.ಧೃಡ ಕ್ರಮ ಅಗತ್ಯ: ಜಾಗತಿಕ ಆರ್ಥಿಕತೆಯು ಎರಡನೆಯ ಸುತ್ತಿನ ಹಿಂಜರಿತಕ್ಕೆ ಜಾರುತ್ತಿರುವುದರ ಕುರಿತು ಪ್ರತಿಕ್ರಿಯಿಸಿರುವ ಪ್ರಣವ್‌ಮುಖರ್ಜಿ, ಇದನ್ನು ತಡೆಗಟ್ಟಲು ಯಾವುದೇ ಸಿದ್ಧ ಸೂತ್ರಗಳಿಲ್ಲ. ಆದರೆ, ಪ್ರತಿ ದಿನ ಧೃಡ ಕ್ರಮಗಳ ಮೂಲಕ ಸಂಭಾವ್ಯ ಆರ್ಥಿಕ ಹಿಂಜರಿತವನ್ನು ತಡೆಗಟ್ಟಬಹುದು ಎಂದು ಹೇಳಿದ್ದಾರೆ.ಎರಡನೆಯ ಸುತ್ತಿನ ಆರ್ಥಿಕ ಹಿಂಜರಿತವನ್ನು ತಡೆಯಲು ಹಣಕಾಸು ಸಂಸ್ಥೆಗಳು ಮತ್ತು ಅಂತರರಾಷ್ಟ್ರೀಯ ಸಮುದಾಯ ಏನು ಮಾಡಲು ಸಾಧ್ಯ ಎನ್ನುವುದರ ಕುರಿತು ಶನಿವಾರ ಇಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ಈ  ಅಭಿಪ್ರಾಯ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.