ಬುಧವಾರ, ಏಪ್ರಿಲ್ 21, 2021
31 °C

ಡಿಜಿಟಲ್ ಮಾಧ್ಯಮದಲ್ಲಿ ಭರತನ ನಾಟ್ಯ ಶಾಸ್ತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಕ್ರಿಸ್ತಶಕ ಪೂರ್ವ 2ನೇ ಶತಮಾನದಲ್ಲಿ ರಚಿಸಲಾದ ಕನ್ನಡ ಓಲೆಗರಿಯಲ್ಲಿರುವ ಭರತನ ನಾಟ್ಯ ಶಾಸ್ತ್ರ ಪುಸ್ತಕವನ್ನು ಡಿಜಿಟಲ್ ಮಾಧ್ಯಮದಲ್ಲಿ ಹಾಗೂ ಸಮಗ್ರವಾಗಿ ಪುಸ್ತಕ ರೂಪದಲ್ಲಿ ಪ್ರಕಟಿಸಲು ಪ್ರಾಚ್ಯ ವಿದ್ಯಾ ಸಂಶೋಧನಾಲಯ ನಿರ್ಧರಿಸಿದೆ.ಭರತನ ನಾಟ್ಯ ಶಾಸ್ತ್ರ ಈಗಾಗಲೇ ಪುಸ್ತಕ ರೂಪದಲ್ಲಿ ಬಂದಿದ್ದರೂ ಸಮಗ್ರವಾಗಿ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಈ ಮಹತ್ವಪೂರ್ಣ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದ್ದು ಶೀಘ್ರದಲ್ಲಿಯೇ ಪುಸ್ತಕ ಹೊರಬಲಿದೆ ಎಂದು ಸಂಶೋಧನಾಲಯದ ನಿರ್ದೇಶಕ ವಿದ್ವಾನ್ ಶಿವಕುಮಾರಸ್ವಾಮಿ `ಪ್ರಜಾವಾಣಿ~ಗೆ ತಿಳಿಸಿದರು.ತಂತ್ರ, ಮಂತ್ರ, ಜ್ಯೋತಿಷ್ಯದ ಬಗ್ಗೆ ಅವರೂಪದ ಮಾಹಿತಿಗಳನ್ನು ಹೊಂದಿರುವ 7ನೇ ಶತಮಾನದಲ್ಲಿ ರಚಿತವಾದ ಶಾರದಾ ತಿಲಕ, ಕೌಟಿಲ್ಯನ ಅರ್ಥಶಾಸ್ತ್ರ ಪುಸ್ತಕಗಳನ್ನೂ ಸಹ ಪ್ರಕಟಿಸುವ ಯೋಜನೆಯನ್ನು ಹೊಂದಲಾಗಿದೆ. ಈ ಎಲ್ಲ ಪುಸ್ತಕಗಳನ್ನೂ ಡಿಜಿಟಲ್ ಮಾಧ್ಯಮಕ್ಕೆ ಅಳವಡಿಸಲಾಗುವುದು ಎಂದು ಅವರು ಹೇಳಿದರು.ಕೌಟಿಲ್ಯನ ಅರ್ಥಶಾಸ್ತ್ರ ಪುಸ್ತಕ ಪ್ರಕಟವಾಗಿ 103 ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ಕೌಟಿಲ್ಯನ ಅರ್ಥಶಾಸ್ತ್ರ ಪುಸ್ತಕ ಪ್ರಕಟಣೆಯ ಶತಮಾನೋತ್ಸವ ಆಚರಣೆಗೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಆಸ್ಥಾನದಲ್ಲಿ ಪಂಡಿತನಾಗಿದ್ದ ವೆಂಕಾಮಾತ್ಯ ರಚಿಸಿರುವ `ಜಗನ್ನಾಥ ವಿಜಯಂ~ ಎಂಬ ಗ್ರಂಥವನ್ನೂ ಡಿಜಿಟಲ್ ಮಾಧ್ಯಮಕ್ಕೆ ಅಳವಡಿಸಲಾಗುವುದು. ಮಧುಗಿರಿಯವನಾದ ವೆಂಕಾಮಾತ್ಯ ವ್ಯಾಕರಣ ಶಾಸ್ತ್ರವನ್ನು ಸಂಸ್ಕೃತ ಭಾಷೆಯಲ್ಲಿ ಕನ್ನಡ ಲಿಪಿಯಲ್ಲಿ ರಚಿಸಿದ್ದಾನೆ. ಈಗ ಅದನ್ನು ಸಂಸ್ಕೃತದಲ್ಲಿ ಹೊರ ತರಲಾಗುವುದು ಎಂದರು.ದೇಶದ ವಿವಿಧ ಭಾಗಗಳಲ್ಲಿ ಇರುವ ಪ್ರಾಚ್ಯವಿದ್ಯಾ ಸಂಶೋಧನಾಲಯಗಳ ಪ್ರತಿನಿಧಿಗಳನ್ನು ಮೈಸೂರಿಗೆ ಕರೆಸಿ ಸಮ್ಮೇಳನ ನಡೆಸಲೂ ಆಲೋಚಿಸಲಾಗಿದೆ. ಇದಕ್ಕೆ ಮೈಸೂರು ವಿಶ್ವವಿದ್ಯಾಲಯ 90 ಸಾವಿರ ರೂಪಾಯಿಗಳನ್ನು ಮಂಜೂರು ಮಾಡಿದೆ. ದೇಶದಲ್ಲಿಯೇ ಅತ್ಯಂತ ಹಳೆಯದಾದ ಮೈಸೂರು ಪ್ರಾಚ್ಯ ವಿದ್ಯಾ ಸಂಶೋಧನಾಲಯದ 125 ವರ್ಷಾಚರಣೆಯನ್ನೂ ಅದ್ದೂರಿಯಾಗಿ ಮಾಡಲು ಚಿಂತನೆ ನಡೆಸಲಾಗಿದೆ ಎಂದರು.ಪ್ರಾಚ್ಯ ವಿದ್ಯಾ ಸಂಶೋಧನಾಲಯದಲ್ಲಿ 900ಕ್ಕೂ ಹೆಚ್ಚು ತಮಿಳು ಓಲೆಗರಿಗಳಿದ್ದು ಈ ಬಗ್ಗೆ ಅಧ್ಯಯನ ನಡೆಸಲು ಸಹಕರಿಸುವಂತೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರನ್ನು ಕೇಳಿಕೊಳ್ಳಲಾಗಿದ್ದು ಅವರಿಂದ ಸಕಾರಾತ್ಮಕ ಉತ್ತರ ಬಂದಿದೆ ಎಂದರು.ಪ್ರಾಚ್ಯ ವಿದ್ಯಾ ಸಂಶೋಧನಾಲಯದ ಕಟ್ಟಡ ದುರಸ್ತಿಗೆ ಅಮೆರಿಕ ರಾಯಭಾರ ಕಚೇರಿ 50 ಸಾವಿರ ಡಾಲರ್ ಹಣವನ್ನು ನೀಡಿದೆ. ಅದರ ಕೆಲಸವನ್ನೂ ಶೀಘ್ರದಲ್ಲಿಯೇ ಆರಂಭಿಸಲಾಗುವುದು ಎಂದರು.ನಿವೃತ್ತಿ: ಪ್ರಾಚ್ಯ ವಿದ್ಯಾ ಸಂಶೋಧನಾಲಯದ ನಿರ್ದೇಶಕರಾಗಿ ತಾವು ಕಳೆದ ಮೇ 18ಕ್ಕೆ ನಿವೃತ್ತಿ ಹೊಂದಿದ್ದು ತಕ್ಷಣವೇ ತಮ್ಮನ್ನು ಕರ್ತವ್ಯದಿಂದ ಬಿಡುಗಡೆಗೊಳಿಸುವಂತೆ ಕುಲಪತಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾಗಿ ಅವರು ತಿಳಿಸಿದರು. ಆದರೆ ಪ್ರಾಚ್ಯ ವಿದ್ಯಾ ಸಂಶೋಧನಾಲಯದಲ್ಲಿ ಹಲವಾರು ಉತ್ತಮ ಕೆಲಸಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೆ ಇದೇ ಸ್ಥಾನದಲ್ಲಿ ಮುಂದುವರಿಯಲು ಕುಲಪತಿ ಅವರು ಅವಕಾಶ ನೀಡಿದ್ದಾರೆ ಎಂದರು.ಇತ್ತೀಚೆಗೆ ನಡೆದ ಸಿಂಡಿಕೇಟ್ ಸಭೆಯಲ್ಲಿ ತಮ್ಮನ್ನು ಬದಲಾಯಿಸುವ ತೀರ್ಮಾನ ಕೈಗೊಂಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು `ಅವಕಾಶ ಸಿಕ್ಕರೆ ನನ್ನ ಕನಸಿನ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸುತ್ತೇನೆ. ಆದರೆ ನಿರ್ದೇಶಕನಾಗಿ ನನ್ನನ್ನು ಮುಂದುವರಿಸುವುದು ಅಥವಾ ಬಿಡುವುದು ವಿಶ್ವವಿದ್ಯಾಲಯಕ್ಕೆ ಸೇರಿದ್ದು~ ಎಂದು ಉತ್ತರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.