ಸೋಮವಾರ, ಜನವರಿ 20, 2020
27 °C

ಡಿಸಿ ವಿರುದ್ಧ ಹಕ್ಕುಚ್ಯುತಿ ಮಂಡನೆ: ಕತ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ನಗರದ ಪ್ರವಾಸಿ ಮಂದಿರದ ಒಳಗೆ ಮಾಜಿ ಸಚಿವ ಉಮೇಶ ಕತ್ತಿ ಹಾಗೂ ಶಾಸಕ ಬಸವರಾಜ ರಾಯರೆಡ್ಡಿ ಅವರಿಗೆ ಪ್ರತ್ಯೇಕವಾಗಿ ಪತ್ರಿಕಾಗೋಷ್ಠಿ ನಡೆಸಲು ಅವಕಾಶ ಕಲ್ಪಿಸದೇ ಇರುವ ಘಟನೆ ಭಾನುವಾರ ನಡೆಯಿತು.ಇದನ್ನು ಖಂಡಿಸಿದ ಕತ್ತಿ ಹಾಗೂ ರಾಯರೆಡ್ಡಿ ಅವರು ಜಿಲ್ಲಾಧಿಕಾರಿ ಎನ್‌. ಜಯರಾಮ್‌ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ನಿರ್ಧರಿಸಿದರು.ಅಧಿವೇಶನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ­ಗಳ ವಾಸ್ತವ್ಯದ ವ್ಯವಸ್ಥೆಯನ್ನು ಪ್ರವಾಸಿ ಮಂದಿರದಲ್ಲಿ ಮಾಡಲಾಗಿತ್ತು. ಭಾನುವಾರ ಮುಖ್ಯಮಂತ್ರಿಗಳು ನಗರದಲ್ಲಿ ಇಲ್ಲದಿದ್ದರೂ, ಅವರ ಸಿಬ್ಬಂದಿಗಾಗಿ ಪ್ರವಾಸಿ ಮಂದಿರವನ್ನು ಕಾಯ್ದಿರಿಸಲಾಗಿತ್ತು. ಪತ್ರಿಕಾಗೋಷ್ಠಿ ನಡೆಸಲು ಕತ್ತಿ ಹಾಗೂ ರಾಯರೆಡ್ಡಿ ಆಗಮಿಸಿದಾಗ ಸ್ಥಳದಲ್ಲಿದ್ದ ಪೊಲೀಸ್‌ ಅಧಿಕಾರಿ ಒಳಗೆ ಹೋಗಲು ಅವಕಾಶ ನೀಡಲಿಲ್ಲ. ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರೂ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಕೊಡದೇ ಇರುವುದರಿಂದ ಜನಪ್ರತಿನಿಧಿಗಳು ಅವರನ್ನು ದೂರವಾಣಿ ಮೂಲಕ ತರಾಟೆಗೆ ತೆಗೆದುಕೊಂಡರು.ಬಳಿಕ ಉಮೇಶ ಕತ್ತಿ ಪ್ರವಾಸಿ ಮಂದಿರದ ಬಾಗಿಲ ಬಳಿ ನಿಂತು ಪತ್ರಿಕಾಗೋಷ್ಠಿ ನಡೆಸಿದರೆ, ರಾಯರೆಡ್ಡಿ ಮೆಟ್ಟಿಲ ಮೇಲೆ ಕುಳಿತು ಮಾತನಾಡಿದರು.‘ಕಬ್ಬಿನ ದರ ನಿಗದಿ ಕುರಿತು ಮಾತನಾಡಲು ಬೆಳಿಗ್ಗೆ 11 ಗಂಟೆಗೆ ಪತ್ರಿಕಾಗೋಷ್ಠಿಯನ್ನು ನಡೆಸುವುದಾಗಿ ವಾರ್ತಾ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೆ. ಮಾಧ್ಯಮದವರಿಗೆ ಮಾಹಿತಿ ನೀಡಿರುವ ಬಗ್ಗೆ ಅವರಿಂದ ವಾಪಸ್‌ ಪ್ರತಿಕ್ರಿಯೆಯೂ ಬಂದಿತ್ತು. ಆದರೆ, ಆವರಣಕ್ಕೆ ಬಂದಾಗ ಒಳಗಡೆ ಹೋಗಲು ಅವಕಾಶ ನೀಡಲಿಲ್ಲ. ನಾನು 6 ಬಾರಿ ಶಾಸಕ, 10 ವರ್ಷಗಳ ಕಾಲ ಸಚಿವನಾಗಿದ್ದೇನೆ. ಉತ್ತರ ಕರ್ನಾಟಕ ಭಾಗದ ಹಿರಿಯ ಜನಪ್ರತಿನಿಧಿ ಇದ್ದೇನೆ. ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಲು ಅವಕಾಶ ಕಲ್ಪಿಸಿಕೊಡದೇ ಇರುವ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಜಿಲ್ಲಾಧಿಕಾರಿಗಳ ವಿರುದ್ಧ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ನಿಲುವಳಿ ಮಂಡಿಸಲಾಗುವುದು’ ಎಂದು ಉಮೇಶ ಕತ್ತಿ ತಿಳಿಸಿದರು.‘ಡಿ.ಸಿ ದೊಡ್ಡ ಮೂರ್ಖ’

‘ಶಾಸಕರಿಗೆ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಲು ಅವಕಾಶ ಇಲ್ಲ ಎಂದು ಯಾವು ಕಾನೂನಿನಲ್ಲಿದೆ ಎಂಬುದನ್ನು ತೋರಿಸಿ. ಮುಖ್ಯಮಂತ್ರಿಗಳಿಗೆ ಮೀಸಲಿರುವ ಕೊಠಡಿಯನ್ನು ನಾನು ಕೇಳುತ್ತಿಲ್ಲ. ನೀವು ಅಧಿಕಾರಶಾಹಿ ಧೋರಣೆಯನ್ನು ಪ್ರದರ್ಶಿಸಬೇಡಿ. ನಿಮಗಿಂತ ಹೆಚ್ಚು ಕಾನೂನು ನನಗೆ ಗೊತ್ತಿದೆ. ಡೈನಿಂಗ್‌ ಹಾಲ್‌ನಲ್ಲಾದರೂ ನೀಡಿ’ ಎಂದು ಬಸವರಾಜ ರಾಯರೆಡ್ಡಿ ಜಿಲ್ಲಾಧಿಕಾರಿಗಳನ್ನು ದೂರವಾಣಿ ಮೂಲಕ ತರಾಟೆಗೆ ತೆಗೆದುಕೊಂಡರು.ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಕೃಷ್ಣಾ ನ್ಯಾಯಮಂಡಳಿ ತೀರ್ಪಿನ ಕುರಿತು ಮಾತನಾಡಲು ಇಲ್ಲಿಗೆ ಬಂದಿದ್ದೆ. ಆದರೆ, ನನಗೆ ಕನಿಷ್ಠ ಕುಳಿತುಕೊಳ್ಳಲೂ ಅವಕಾಶ ಕಲ್ಪಿಸಿಲ್ಲ. ಜಿಲ್ಲಾಧಿಕಾರಿ ದೊಡ್ಡ ಮೂರ್ಖರಂತೆ ಇದ್ದಾರೆ. ನಮ್ಮ ಹಕ್ಕುಚ್ಯುತಿ ಆಗಿದ್ದು, ಈ ಬಗ್ಗೆ ಸದನದಲ್ಲಿ ವಿಷಯ ಪ್ರಸ್ತಾಪಿಸುತ್ತೇನೆ’ ಎಂದು ತಿಳಿಸಿದರು.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಅವರೂ ಪ್ರವಾಸಿ ಮಂದಿರದ ಆವರಣದಲ್ಲಿ ನಿಂತು ಪತ್ರಿಕಾಗೋಷ್ಠಿ ನಡೆಸಿದರು.

 

ಪ್ರತಿಕ್ರಿಯಿಸಿ (+)