ಬುಧವಾರ, ಜುಲೈ 28, 2021
29 °C

ಡಿಸೆಂಬರ್‌ನಲ್ಲಿ ಚಲನಚಿತ್ರೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಇದೇ ಮೊದಲ ಬಾರಿಗೆ ಸರ್ಕಾರದ ವತಿಯಿಂದ ಬೆಂಗಳೂರು ನಗರದಲ್ಲಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜಿಸಲು ತೀರ್ಮಾನಿಸಿದ್ದು, ಡಿಸೆಂಬರ್ ಎರಡನೇ ವಾರದಲ್ಲಿ ನಡೆಯುವುದು ಬಹುತೇಕ ಖಚಿತವಾಗಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ರಮೇಶ್ ಝಳಕಿ  ಮಂಗಳವಾರ ಇಲ್ಲಿ ತಿಳಿಸಿದರು.ಚಲನಚಿತ್ರೋತ್ಸವ ಆಯೋಜನೆ ಸಂಬಂಧ ಪೂರ್ವಭಾವಿಯಾಗಿ ಚರ್ಚಿಸಲು ವಿವಿಧ ಸಂಘಟನೆಗಳು ಮತ್ತು ಕಲಾವಿದರ ಸಭೆ ನಂತರ ಅವರು ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು.  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕರ್ನಾಟಕ ಚಲನಚಿತ್ರ ಅಕಾಡೆಮಿ, ಸುಚಿತ್ರಾ ಫಿಲಂ ಸೊಸೈಟಿಯ  ಪ್ರತಿನಿಧಿಗಳು ಮತ್ತಿತರ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು.ಚಿತ್ರಮಂದಿರಗಳ ಆಯ್ಕೆ, ಚಲನಚಿತ್ರಗಳ ಆಯ್ಕೆ ಇತ್ಯಾದಿ ಸಿದ್ಧತೆ ಸಲುವಾಗಿ ವಿವಿಧ ಸಮಿತಿ ಮತ್ತು ಉಪ ಸಮಿತಿಗಳನ್ನು ರಚಿಸಲಾಗುವುದು. ವಾರ್ತಾ ಇಲಾಖೆ ನಿರ್ದೇಶಕ ಡಾ. ಮುದ್ದುಮೋಹನ್ ಅವರು ಕಾರ್ಯಕಾರಿ ಸಮಿತಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿರುತ್ತಾರೆ.ಉತ್ಸವ ನಿರ್ವಹಣೆಯ ಕಲಾ ನಿರ್ದೇಶಕರಾಗಿ ನರಹರಿ ರಾವ್ ಅವರನ್ನು, ಚಲನಚಿತ್ರೋತ್ಸವದ ನಿರ್ದೇಶಕರಾಗಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ, ಉತ್ಸವದ ಸಲಹೆಗಾರರಾಗಿ ನಿರ್ಮಾಪಕ ಗಿರೀಶ್ ಕಾಸರವಳ್ಳಿ ಅವರನ್ನು ನೇಮಿಸಲು ಈ ಸಭೆಯಲ್ಲಿ ನಿರ್ಧರಿಸಲಾಯಿತು ಎಂದರು.ಉತ್ಸವದ ವ್ಯವಸ್ಥೆಗಾಗಿ ರಚಿಸುವ ಪ್ರಮುಖ ಸಮಿತಿಯಲ್ಲಿ ಈ ಐದು ಜನರ ಜತೆಗೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು, ಮಾಧ್ಯಮ ಅಕಾಡೆಮಿ ಅಧ್ಯಕ್ಷರು, ಚಲನಚಿತ್ರ ಅಕಾಡೆಮಿ ಅಧ್ಯಕ್ಷರು, ಹಿರಿಯ ಚಲನಚಿತ್ರ ನಟಿ ಜಯಂತಿ, ಪತ್ರಕರ್ತೆ ಸಾವಿತ್ರಿ ಸದಸ್ಯರಾಗಿರುತ್ತಾರೆ. ಒಂದು ವಾರದಲ್ಲಿ ಅಂತರರಾಷ್ಟ್ರೀಯ ಉತ್ಸವದ ಲಾಂಛನ, ಥೀಮ್ ಮತ್ತು ಹಾಡು.... ಇತ್ಯಾದಿ ಕುರಿತಂತೆ ಪ್ರಮುಖರ ಸಮಿತಿ ತೀರ್ಮಾನಿಸಲಿದೆ. ಸುಮಾರು 8 ಉಪ ಸಮಿತಿಗಳನ್ನು ರಚಿಸಲು ಸಲಹೆ ಬಂದಿದೆ. ಇದಕ್ಕೆ ಒಂದು ವಾರದಲ್ಲಿ ಸ್ಪಷ್ಟ ರೂಪ ಬರಲಿದೆ. ಉತ್ಸವದ ಯಶಸ್ಸಿಗೆ ಕನ್ನಡ ಚಲನಚಿತ್ರ ಕ್ಷೇತ್ರದ ನಿರ್ಮಾಪಕರು, ವಿತರಕರು, ಪ್ರದರ್ಶಕರನ್ನು ಒಳಗೊಂಡಂತೆ ಎಲ್ಲರ ಸಹಕಾರ ಅಗತ್ಯವಿದೆ ಎಂದರು.ಈ ಉತ್ಸವಕ್ಕಾಗಿ ಐದು ಕೋಟಿ ರೂಪಾಯಿ ಮೀಸಲಿಟ್ಟಿದ್ದು, ಈಗಾಗಲೇ ರೂ 1.5 ಕೋಟಿ ಬಿಡುಗಡೆ ಆಗಿದೆ. ಸಮಿತಿಗಳ ರಚನೆಯ ನಂತರ ಉತ್ಸವ ವ್ಯವಸ್ಥೆಗೆ ಎಷ್ಟು ಅಗತ್ಯವೆಂಬ ಬಗ್ಗೆ ನಿಖರವಾಗಿ ತೀರ್ಮಾನಿಸಲಾಗುತ್ತದೆ ಎಂದು ಝಳಕಿ ತಿಳಿಸಿದರು.ವಾರ್ತಾ ಇಲಾಖೆ ನಿರ್ದೇಶಕ ಡಾ.ಮುದ್ದುಮೋಹನ್, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಟಿ.ಎಸ್.ನಾಗಾಭರಣ, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಡಿ. ಪಿ. ಪರಮೇಶ್ವರ್, ಫಿಲಂ ಚೇಂಬರ್ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲ್,ನರಹರಿ ರಾವ್, ಚಲನಚಿತ್ರ ತಾರೆ ಜಯಂತಿ ಮತ್ತಿತರರು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.