ಶನಿವಾರ, ಮಾರ್ಚ್ 6, 2021
21 °C

ಡಿಸ್ಕೊ ಮಾಂತ್ರಿಕನ ಗಾನಾ ಜಮಾನಾ

ಸುಶೀಲಾ ಡೋಣೂರ Updated:

ಅಕ್ಷರ ಗಾತ್ರ : | |

ಡಿಸ್ಕೊ ಮಾಂತ್ರಿಕನ ಗಾನಾ ಜಮಾನಾ

ರಾಜಾಜಿನಗರದ ವೆಸ್ಟ್‌ ಗೇಟ್‌ ಮಾಲ್‌ನಲ್ಲಿ ಹೊಸದಾಗಿ ತೆರೆದಿರುವ ಬಾರ್ಬೆಕ್ಯು ನೇಷನ್‌ ಔಟ್‌ಲೆಟ್  ಉದ್ಘಾಟನೆಗೆಂದು ಆಗಮಿಸಿದ್ದರು ಖ್ಯಾತ ಗಾಯಕ ಬಪ್ಪಿ ಲಹಿರಿ. ಡಿಸ್ಕೊ ನಾದದ ಅಲೆಯಲ್ಲಿಯೇ ಔಟ್‌ಲೆಟ್‌ಗೆ ಚಾಲನೆ ನೀಡಿದ ಬಪ್ಪಿ, ಒಂದೆರಡು ವಿನೂತನ ಹಾಡುಗಳನ್ನು ಗುನುಗಿ ‘ಲೈವ್ ಗ್ರಿಲ್‌’ ಸವಿದು ನೋಡಿ, ಬಿಸಿ ಬಿಸಿ ಕಾಫಿಯೊಂದಿಗೆ ‘ಗಾನಾ ಜಮಾನಾ’ ಬಗ್ಗೆ ಮಾತಿಗಿಳಿದರು.

ಮೈತುಂಬ ಚಿನ್ನದ ಒಡವೆ, ಕೈ ತುಂಬ ಉಂಗುರ, ಜರ್ದಾರಿ ಕುರ್ತಾ ಧರಿಸಿ ತಮ್ಮ ಎಂದಿನ  ವಿಶೇಷ ಡಿಸ್ಕೊ ಶೈಲಿಯಲ್ಲಿ ಆಗಮಿಸಿದ ಬಪ್ಪಿ ದಾ, ಮೊದಲ ಮಾತು ಆರಂಭಿಸಿದ್ದು ತಮ್ಮ ಆಹಾರ ಪ್ರೀತಿಯ ಬಗ್ಗೆ. ನಂತರ ಸುಮಾರು ನಾಲ್ಕು ದಶಕಗಳ ಹಿಂದಿನ ನೆನಪಿಗೆ ಜಾರಿದ ಬಪ್ಪಿ, ಅಂದಿನ ಗೀತ ಸಾಹಿತ್ಯ, ಹಾಡಿನ ದಾಟಿ, ಹಾಡುಗಾರರ ಬಗ್ಗೆ ಹರಟಿದರು. ನಂತರ ಕನ್ನಡದ ನಂಟು ನೆನೆದು ಖುಷಿಪಟ್ಟರು.ಕಣ್ಣಂಚಿನಲ್ಲಿ ಕನಸ ರಾಶಿ...

“ಬರೋಬ್ಬರಿ 45 ವರ್ಷಗಳಾದವು.  ಕಣ್ಣಂಚಿನಲ್ಲಿ ರಾಶಿ ರಾಶಿ ಕನಸು ತುಂಬಿಕೊಂಡು ಮುಂಬೈಗೆ ಪಯಣ ಬೆಳೆಸಿದಾಗ ನನಗೆ ಕೇವಲ 19 ವರ್ಷ. 1972ನೇ ಸಾಲಿನಲ್ಲಿ ‘ದಾದು’ ಅಂತ ಬಂಗಾಲಿ ಸಿನಿಮಾದಲ್ಲಿ ಮೊದಲ ಅವಕಾಶ ಸಿಕ್ಕಿತ್ತು. ಅದರ ಹಿಂದೆಯೇ ‘ನನ್ನಾ ಶಿಕಾರಿ’ ಚಿತ್ರದ ಹಾಡಿಗೆ ಸಂಗೀತ ನೀಡಿದೆ” 80ರ ದಶಕಕ್ಕೆ ಜಾರಿದ ಬಪ್ಪಿ, ಆ ನೆನಪುಗಳನ್ನು ನಿನ್ನೆ ತಾನೆ ಗತಿಸಿದಂತೆ ಒಂದೊಂದಾಗಿ ಹೊರಗೆಡುವುತ್ತ ಸಾಗಿದರು...1952ರಲ್ಲಿ ಪಶ್ಚಿಮ ಬಂಗಾಳದ ಶಾಸ್ತ್ರೀಯ ಸಂಗೀತದ ಸಮೃದ್ಧ ಪರಂಪರೆ ಹೊಂದಿರುವ ಕುಟುಂಬದಲ್ಲಿಯೇ ಜನಿಸಿದರೂ ತಮ್ಮ ಬದುಕಿಗೆ ಬುನಾದಿ ಹಾಕಿಕೊಳ್ಳಲು  ಬಪ್ಪಿ ಸಾಕಷ್ಟು ಶ್ರಮಿಸಬೇಕಾಗಿತ್ತು. ತಂದೆ ಅಪರೇಶ್ ಬಂಗಾಳಿ ಗಾಯಕ, ತಾಯಿ ಬನ್ಸಾರಿ ಶಾಸ್ತ್ರೀಯ ಸಂಗೀತ ಮತ್ತು ಶ್ಯಾಮ ಸಂಗೀತದಲ್ಲಿ ಹೆಸರುವಾಸಿ. ಆದರೆ ಬಪ್ಪಿ  ನವ ಸಂಗೀತ ಶೈಲಿಯೊಂದನ್ನು ಹುಟ್ಟು ಹಾಕುವ ಹೊಂಗನಸು ಹೊತ್ತವರು. ಹೀಗಾಗಿ ಅವರಿಗೆ ಹೊಸ ದಾರಿಗಳ ಹುಡುಕಾಟವಿತ್ತು.ಅವರಿಗೆ ಬಯಸಿದ ಭಾಗ್ಯ ದೊರೆತದ್ದು ತಹೀರ್‌ ಹುಸೇನ್‌ ಅವರ ‘ಝಖ್ಮೀ’ (1975) ಚಿತ್ರದ ಮೂಲಕವೇ. ಸಂಗೀತ ನಿರ್ದೇಶನದ ಜೊತೆಗೆ ಹಿನ್ನೆಲೆ ಗಾಯಕನಾಗಿ ಗುರುತಿಸಿಕೊಂಡಿದ್ದು ಆಗಲೇ. ನಂತರ ‘ಚಲ್ತೆ ಚಲ್ತೆ’ (1976),  ಹಾಡುಗಳ ಮೂಲಕ ಸಂಗೀತ ಲೋಕದಲ್ಲಿ ಅವರು ಗುರುತರ ಸ್ಥಾನ ಪಡೆದರು. ರವಿಕಾಂತ್ ಅವರ ‘ಸುರಕ್ಷಾ’ (1979 ) ಚಿತ್ರ ವಿಶೇಷ ಮನ್ನಣೆ ತಂದು ಕೊಟ್ಟಿತು.1980ರ ದಶಕದ ಆರಂಭದ ದಿನಗಳಲ್ಲಿಯೇ ಭಾರತೀಯ ಸಂಗೀತ ಲೋಕದಲ್ಲಿ ‘ಡಿಸ್ಕೊ’ ಪ್ರಕಾರಕ್ಕೂ ಒಂದು ಓಘ ಸಿಗುವಂತೆ ಮಾಡಿದ್ದು ಬಪ್ಪಿ. ‘ಡಿಸ್ಕೊ ಡಾನ್ಸರ್’ ಚಿತ್ರದ ಮೂಲಕ ಮಿಥುನ್‌ ಚಕ್ರವರ್ತಿ ಹಾಗೂ ಬಪ್ಪಿ ಲಹಿರಿ ಜೋಡಿ ‘ಡಿಸ್ಕೊ ಜೋಡಿ’ಯಾಗಿ ಖ್ಯಾತಿಯಾಯಿತು. ಆ ಕಾಲಕ್ಕೆ ಚೀನಾ, ರಷ್ಯಾ ಸೇರಿದಂತೆ ವಿದೇಶಗಳಲ್ಲಿಯೂ ಬಪ್ಪಿ ಅಭಿಮಾನಿಗಳ ದಂಡು ಹುಟ್ಟಿಕೊಂಡಿದ್ದು ಅವರ ‘ಡಿಸ್ಕೊ’ ಮೋಡಿಗೇ.ಕನ್ನಡ ಎಂದರೆ ಆಪ್ತ ಭಾವ

‘‘ಬೆಂಗಳೂರು ನನಗೇನೂ ಹೊಸದಲ್ಲ. ಈ ಊರು, ಈ ಜನ, ಕನ್ನಡ ಚಿತ್ರಜಗತ್ತು ನನಗೆ ಹೆಚ್ಚು ಪ್ರಿಯ. 80ರ ದಶಕದಲ್ಲಿಯೇ ನಾನು ಕನ್ನಡ ದಿಗ್ಗಜರೊಂದಿಗೆ ಕೆಲಸ ಮಾಡಿದ್ದೇನೆ. ವಿಷ್ಣುವರ್ಧನ್‌ ಅಭಿನಯದ ‘ಪೊಲೀಸ್‌ ಮತ್ತು ದಾದಾ’, ‘ಕೃಷ್ಣ ನೀ ಬೇಗನೆ ಬಾರೋ’, ಅಂಬರೀಶ್ ಅಭಿನಯದ ‘ಗುರು’ ಚಿತ್ರಗಳಿಗೆ ಸಂಗೀತ ನೀಡಿದ್ದೇನೆ. ‘ಕರೆಂಟು ಹೋದ ಟೈಮಲಿ, ಹುಡುಗಿ ಇದ್ಳು  ಮಗ್ಗುಲಲಿ’ ಎಂಬ ಹಾಡನ್ನು ಇತ್ತೀಚೆಗೆ ‘ಲವ್‌ ಇನ್‌ ಮಂಡ್ಯ’ ಚಿತ್ರಕ್ಕಾಗಿ ಹಾಡಿದ ಹಾಡಿದೆ. ತುಂಬ ಇಷ್ಟ ಪಟ್ಟು ಹಾಡಿದ್ದೇನೆ’’ ಎಂದು ಹೆಮ್ಮೆಪಟ್ಟರು.ಪ್ರತಿ ಕ್ಷಣವೂ ಸಾರ್ಥಕ್ಯದ ಕ್ಷಣಗಳೇ...

ಗೀತ ಜಗತ್ತಿನಲ್ಲಿ ನಿಮಗೆ ಸಾರ್ಥಕ್ಯ ತಂದು ಕೊಟ್ಟ ಗಳಿಗೆ ಯಾವುದು? ಎಂದರೆ ಕ್ಷಣ ಕಣ್ಣು ಮಿಟುಕಿಸಿ, ‘ಇಲ್ಲಿ ಕಳೆದ ಪ್ರತಿ ಕ್ಷಣವೂ, ಮಾಡಿದ ಪ್ರತಿ ಕೆಲಸವೂ  ಸಾರ್ಥಕ್ಯ ತಂದು ಕೊಟ್ಟಿವೆ’ ಎನ್ನುತ್ತಾರೆ ಅವರು. ‘ದಾದು’ ಚಿತ್ರದಿಂದ ಹಿಡಿದು ಈಗ ಬರಲಿರುವ ‘ಜೈ ಗಂಗಾ ಜಲ್‌’ ಚಿತ್ರದವರೆಗೂ ಪ್ರತಿ ಕೆಲಸವೂ ಒಂದೊಂದು ಪಾಠ ಕಲಿಸಿದೆ ಎನ್ನುತ್ತಾರೆ.ಸುನಿಲ್‌ ದತ್‌ ಹಾಗೂ ಸಂಜಯ್‌ ದತ್, ಜಿತೇಂದ್ರ ಹಾಗೂ ತುಷಾರ್‌ ಕಪೂರ್, ಧರ್ಮೇಂದ್ರ ಹಾಗೂ ಸನ್ನಿ ದೇಓಲ್‌, ದೇವಾನಂದ್‌ ಹಾಗೂ ಸುನಿಲ್‌ ಆನಂದ್‌, ಅಮಿತಾಭ್‌ ಹಾಗೂ ಅಭಿಶೇಕ್‌ ಬಚ್ಚನ್‌... ಹೀಗೆ ಒಂದು ಕುಟುಂಬದ ಎರಡೂ ಪೀಳಿಗೆಯ ನಟರು ಅಭಿನಯಿಸಿದ ಸಿನಿಮಾಗಳಿಗೆ ಸಂಗೀತ ನೀಡಿದ ಹಿರಿಮೆ ಅವರದು.‘ಆನಂದ್‌ ಭಕ್ಷಿ ರಚಿಸಿದ ಗೀತೆಗಳಿಗೆ ಸಾಟಿ ಉಂಟೆ? ಲತಾ, ಆಶಾ, ಕಿಶೋರ್‌ ಕುಮಾರ್‌, ಮುಖೇಶ್ ಕುಮಾರ್‌ ಅವರೊಂದಿಗೆ ಹಾಡಿದ ಖುಷಿಯೇ ಬೇರೆ. ಕನ್ನಡ–ತಮಿಳು ಚಿತ್ರಗಳಿಗೆ ಬಂದರೆ ಪಿ ಸುಶೀಲಾ, ಜಾನಕಿ, ಎಸ್‌.ಪಿ. ಬಾಲಸುಬ್ರಹ್ಮಣ್ಯ ಅವರೊಂದಿಗೆ ಹಾಡಿದ ಸಂತೋಷ ಇಂದಿಗೂ ಪುಳಕ ನೀಡುತ್ತದೆ.ಅಂದಿದ್ದವರು ಇಂದಿಲ್ಲ. ನಾಳೆ ಮತ್ತೆ ಹೊಸ ನೀರು ಹರಿಯುತ್ತದೆ, ಹೊಸ ರಾಗ, ಹೊಸ ಶೈಲಿಗಳು ಉದಯಿಸುತ್ತವೆ. ಹೊಸತನವನ್ನು ನಾವು ಗೌರವಿಸಬೇಕು. ಈಗಿನ ಸಂಗೀತ ಪ್ರಪಂಚಕ್ಕೆ ಬಂದರೆ ಥಟ್ಟನೆ ನೆನಪಾಗುವ ಹೆಸರುಗಳೆಂದರೆ ಎ.ಆರ್‌. ರೆಹಮಾನ್‌, ಅನುಪ್‌, ವಿಜಯ್‌ ಪ್ರಕಾಶ್, ಜಾವೆದ್‌ ಅಖ್ತರ್‌, ಗುಲ್ಜಾರ್‌..’  ಎಂದು ಬಪ್ಪಿ ನೆನಪನ್ನು ಜೀಕುತ್ತಾರೆ.  

*

ಬಪ್ಪಿ ಚಿನ್ನದ ಪ್ರೀತಿ


ಬಪ್ಪಿ ತಮ್ಮದೇ ಆದ ವಿನೂತನ ಶೈಲಿಯಿಂದ ಗುರುತಿಸಿಕೊಂಡವರು. ಸಾಂಪ್ರದಾಯಿಕ ಭಾರತೀಯ ಕುರ್ತಾ– ಶೇರ್ವಾನಿಯಿಂದ ಹಿಡಿದು, ಪಾಶ್ಚಾತ್ಯ ಶೈಲಿಯ ಶರ್ಟ್‌ ಮತ್ತು –ಸೂಟ್‌, ಬ್ಲೇಜರ್‌ ವರೆಗೆ ಎಲ್ಲಾ ರೀತಿಯ ವಿಶಿಷ್ಟ ವಸ್ತ್ರಗಳೂ ಅವರ ಸಂಗ್ರಹದಲ್ಲಿವೆ.

‘ಚಿನ್ನ ಎಂದರೆ ನನ್ನ ದೇವರು, ನನ್ನ ಪಾಲಿನ ದೈವ’ ಎಂದು ನಿಸ್ಸಂಕೋಚವಾಗಿ ಹೇಳುವ ಬಪ್ಪಿ ಕೊರಳಲ್ಲಿ ಕೆ.ಜಿ. ಭಾರದ ಚಿನ್ನದ ಒಡವೆಗಳು ಯಾವಾಗಲೂ ಇರುತ್ತವೆ. ಅಂಗೈ ಅಗಲದ ಬಾಲಾಜಿ, ಗಣಪ, ಕೃಷ್ಣ, ಹನುಮಾನ್‌ ಪೆಂಡೆಂಟ್‌ ಇರುವ ತೂಕದ ಹಾರಗಳು, ಕೈತುಂಬ ಉಂಗುರಗಳನ್ನು ಹಾಕಿಕೊಂಡೇ ಓಡಾಡುತ್ತಾರೆ ಬಪ್ಪಿ. ‘ಇಷ್ಟೊಂದು ಆಭರಣ ಧರಿಸಲು ನಿಮಗೆ ಮುಜುಗರ ಆಗುವುದಿಲ್ಲವೇ?’ ಎಂದರೆ ಸಣ್ಣ ನಗುವಿನೊಂದಿಗೆ ಹೇಳುತ್ತಾರೆ: ‘ನನ್ನ ದೇವರು ಸದಾ ನನ್ನೊಂದಿಗೇ ಇರಬೇಕು. ಇದರಲ್ಲಿ ಮುಜುಗರ ಪಟ್ಟುಕೊಳ್ಳಲು ಏನೂ ಇಲ್ಲ. ಇದೆಲ್ಲ ಇನ್ನೊಬ್ಬರಿಗೆ ತೋರಿಸಲಿಕ್ಕಲ್ಲ. ನನ್ನ ಖುಷಿ, ನನ್ನ ನಂಬಿಕೆಗೆ ಅಷ್ಟೆ’

*

ಹಾಡುವುದು ನನ್ನ ಹಕ್ಕು. ನಟಿಸುವುದು ನನಗಿರುವ ಖಯಾಲಿ. ಕೆಲವು ಪಾತ್ರಗಳಿಗೆ ನಾನು ಸೂಕ್ತ ಅನಿಸಿದರೆ ನನ್ನನ್ನು ಆಹ್ವಾನಿಸುತ್ತಾರೆ. ಸಂತಸದಿಂದ ಈ ಕೆಂಪು ಮೂತಿಗೆ ಒಂದಷ್ಟು ಬಣ್ಣ ಹಚ್ಚುತ್ತೇನೆ...

-ಬಪ್ಪಿ ಲಹಿರಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.