ಬುಧವಾರ, ಮೇ 12, 2021
26 °C

ಡೆಂಗೆ ಭೀತಿ: ಫಾಗಿಂಗ್ ಕಾರ್ಯಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಡಗೋಡ: ಪಟ್ಟಣದಲ್ಲಿ 6 ಶಂಕಿತ ಡೆಂಗೆ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದರಲ್ಲಿ ಒಂದು ಡೆಂಗೆ ಖಚಿತವಾಗಿದೆ. ಶಂಕಿತ ಡೆಂಗೆ ಜ್ವರದಿಂದ ಬಳಲುತ್ತಿರುವ ಐದು ಜನರ ರಕ್ತದ ಮಾದರಿಯನ್ನು ಹುಬ್ಬಳ್ಳಿ  ಕಿಮ್ಸಗೆ ಕಳುಹಿಸಿಕೊಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.ಪಟ್ಟಣದ ನೆಹರುನಗರ ನಿವಾಸಿಯೊಬ್ಬರಿಗೆ ಡೆಂಗೆ ಜ್ವರ ಬಂದಿರುವುದು ಖಚಿತಗೊಂಡಿದ್ದು ಈಗಾಗಲೇ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ ಎನ್ನಲಾಗಿದೆ.ಡೆಂಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಟ್ಟಣದ ಚರಂಡಿ ವ್ಯವಸ್ಥೆಯನ್ನು ಸ್ವಚ್ಚಗೊಳಿಸುವಲ್ಲಿ ಪ.ಪಂ.ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಸಾವಿರ ಮೀಟರ್ ಉದ್ದದ ಚರಂಡಿಯನ್ನು ಸ್ವಚ್ಛಗೊಳಿಸಲು ಟೆಂಡರ್ ಕರೆಯಲಾಗಿದ್ದು ಮಂಗಳವಾರದಿಂದ ಸ್ವಚ್ಛಾತಾ ಕಾರ್ಯ ನಡೆಯಲಿದೆ. ಅಲ್ಲದೇ ಸೊಳ್ಳೆ ನಾಶಕ್ಕಾಗಿ ಫಾಗಿಂಗ್(ಧೂಮೀಕರಣ) ಮಾಡಲಾಗುತ್ತಿದೆ ಎಂದು ಪ.ಪಂ.ಮುಖ್ಯಾಧಿಕಾರಿ ಬಿ.ಗಿರೀಶ ತಿಳಿಸಿದರು.ಈಗಾಗಲೇ ತಾಲ್ಲೂಕಿನ ಚಿಗಳ್ಳಿ, ಪಾಳಾ, ನ್ಯಾಸರ್ಗಿ, ಮಳಗಿ, ಕೊಳಗಿ ಗ್ರಾಮಗಳಲ್ಲಿ ಶಂಕಿತ ಡೆಂಗೆ ಜ್ವರದಿಂದ ಬಳಲುತ್ತಿರುವವರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ಕಾರ್ಯಕರ್ತೆಯರು ಡೆಂಗೆ ಕಾಣಿಸಿಕೊಂಡ ಗ್ರಾಮಗಳಿಗೆ ಭೇಟಿ ನೀಡಿ ಜನರಿಗೆ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಮಾಹಿತಿ ನೀಡುತ್ತಿದ್ದಾರೆ. ಸೊಳ್ಳೆ ಉತ್ಪತ್ತಿ ತಾಣ(ಲಾರ್ವಾ) ಗಳನ್ನು ನಾಶಪಡಿಸುವಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಕಾರ್ಯನಿರತರಾ ಗಿದ್ದಾರೆ.ಚಿಗಳ್ಳಿ ಗ್ರಾಮದ 145 ಮನೆಗಳಲ್ಲಿ ಲಾರ್ವಾ ಸರ್ವೆ ನಡೆಸಲಾಗಿದ್ದು ಇದರಲ್ಲಿ 51ಮನೆಗಳಲ್ಲಿ ಲಾರ್ವಾ ಇರುವದು ಪತ್ತೆಯಾದರೆ, ಮಳಗಿಯ 178 ಮನೆಗಳಲ್ಲಿ 5ಮನೆಗಳಲ್ಲಿ ಲಾರ್ವಾ ಇರುವದು, ಪಾಳಾ ಗ್ರಾಮದ 596ಮನೆಗಳ ಸರ್ವೆ ಕಾರ್ಯದಲ್ಲಿ 76 ಮನೆಗಳಲ್ಲಿ ಲಾರ್ವಾ ಇರುವದು ಕಂಡುಬಂದಿದೆ. ಪಟ್ಟಣದ 182ಮನೆಗಳಲ್ಲಿ ಸರ್ವೆ ಕಾರ್ಯ ನಡೆಸಿದ್ದು 52 ಮನೆಗಳಲ್ಲಿ ಸೊಳ್ಳೆ ಉತ್ಪತ್ತಿ ತಾಣ ಗಳು ಕಂಡುಬಂದಿವೆ ಎಂದು ಆರೋಗ್ಯ ಇಲಾಖೆ ಮೂಲಗಳಿಂದ ತಿಳಿದುಬಂದಿದೆ.ಡೆಂಗೆ ಜ್ವರದಿಂದ ಬಳಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಪಾಳಾ ಗ್ರಾಮದ ಮಾರುತಿ ಮಾಳಾಪುರ ಅವರ ಮನೆಗೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಬ್ರಾಯ ಕಾಮತ ಶುಕ್ರವಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.ಸಾರ್ವಜನಿಕರು ಸ್ವಚ್ಚತೆಗೆ ಹೆಚ್ಚಿನ ಗಮನ ನೀಡುವದರೊಂದಿಗೆ ಸೊಳ್ಳೆ ಉತ್ಪತ್ತಿ ತಾಣಗಳು ನಿರ್ಮಾಣವಾಗದಂತೆ ಎಚ್ಚರಿಕೆ ವಹಿಸಬೇಕು. ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸುವ ಕ್ರಿಯೆ ನಿರಂತರವಾಗಿದ್ದರೆ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಸಾಧ್ಯ ಎಂದರು.ಜಿಲ್ಲಾ ಪಂಚಾಯಿತಿ ಸದಸ್ಯ ಅಶೋಕ ಸಿರ್ಸಿಕರ, ತಾಲ್ಲೂಕು ವೈದ್ಯಾಧಿಕಾರಿ ಡಾ.ಲಕ್ಷ್ಮೀದೇವಿ, ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ತಾಂಡೇಲ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.