ಡ್ರಾದಲ್ಲಿ ಅಂತ್ಯಕಂಡ ಟೆಸ್ಟ್

ಫಟುಲ್ಲಾ (ಪಿಟಿಐ/ಐಎಎನ್ಎಸ್): ಪಂದ್ಯದ ಆರಂಭದ ದಿನದಿಂದಲೂ ಪದೇ ಪದೇ ಕಾಡಿದ್ದ ವರುಣನ ಕಾಟ ಕೊನೆಯ ದಿನವೂ ತಪ್ಪಲಿಲ್ಲ. ಆದ್ದರಿಂದ ಭಾರತ ತಂಡ ಬಾಂಗ್ಲಾದೇಶ ಎದುರಿನ ಟೆಸ್ಟ್ ಕ್ರಿಕೆಟ್್ ಪಂದ್ಯದಲ್ಲಿ ಡ್ರಾಕ್ಕೆ ತೃಪ್ತಿಪಡಬೇಕಾಯಿತು.
ಖಾನ್ ಸಾಹೇಬ್ ಒಸ್ಮಾನ್ ಅಲಿ ಕ್ರೀಡಾಂಗಣದಲ್ಲಿ ಮುಕ್ತಾಯವಾದ ಟೆಸ್ಟ್ನಲ್ಲಿ ಪ್ರವಾಸಿ ತಂಡ ಕೊನೆಯ ದಿನ ಗೆಲುವಿಗಾಗಿ ಸಾಕಷ್ಟು ಕಸರತ್ತು ನಡೆಸಿತು. ಬಾಂಗ್ಲಾ ತಂಡವನ್ನು ಮೊದಲ ಇನಿಂಗ್ಸ್ನಲ್ಲಿ 256 ರನ್ಗೆ ಆಲೌಟ್ ಮಾಡಿ ಗೆಲುವಿನ ಕನಸು ಕಂಡಿತ್ತು. ಆದರೆ, ಭಾನುವಾರವೂ ಮಳೆ ಮುಂದುವರಿದ ಕಾರಣ 50.4 ಓವರ್ಗಳ ಆಟವಷ್ಟೇ ನಡೆಯಿತು. ಆದ್ದರಿಂದ ಪಂದ್ಯ ಡ್ರಾ ಆಯಿತು. ಉಭಯ ತಂಡಗಳು ಟ್ರೋಫಿ ಹಂಚಿಕೊಂಡವು. ಭಾರತ ಮೊದಲ ಇನಿಂಗ್ಸ್ನಲ್ಲಿ ಆರು ವಿಕೆಟ್ ನಷ್ಟಕ್ಕೆ 462 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು.
ಒಟ್ಟು ಐದು ದಿನಗಳ ಆಟದಲ್ಲಿ 192.2 ಓವರ್ಗಳ ಆಟವಷ್ಟೇ ನಡೆಯಿತು. ಆದ್ದರಿಂದ ಪೂರ್ಣಾವಧಿ ನಾಯಕರಾದ ಬಳಿಕ ಮೊದಲ ಟೆಸ್ಟ್ನಲ್ಲಿ ಜಯ ಪಡೆಯುವ ಕೊಹ್ಲಿ ಆಸೆ ಈಡೇರಲಿಲ್ಲ. ಬಾಂಗ್ಲಾ ತಂಡ ಭಾರತದ ಎದುರು ಟೆಸ್ಟ್ ಡ್ರಾ ಮಾಡಿಕೊಂಡಿದ್ದು ಇದು ಎರಡನೇ ಬಾರಿ. 2007ರಲ್ಲಿ ಚಿತ್ತಗಾಂಗ್ನಲ್ಲಿ ನಡೆದಿದ್ದ ಪಂದ್ಯವು ಡ್ರಾ ಆಗಿತ್ತು. ಉಭಯ ತಂಡಗಳು ಟೆಸ್ಟ್ನಲ್ಲಿ ಎಂಟು ಸಲ ಮುಖಾಮುಖಿಯಾಗಿದ್ದು ಆರು ಸಲ ಭಾರತ ಗೆದ್ದಿದೆ.
ಮಿಂಚಿದ ಸ್ಪಿನ್ನರ್ಗಳು: ಶನಿವಾರದ ದಿನದಾಟದ ಅಂತ್ಯಕ್ಕೆ 111 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡಿದ್ದ ಆತಿಥೇಯ
ತಂಡ ಕೊನೆಯ ದಿನ ಬೇಗನೆ ಆಲೌಟಾಯಿತು. ಇದಕ್ಕೆ ಕಾರಣವಾಗಿದ್ದು ಸ್ಪಿನ್ನರ್ಗಳಾದ ಆರ್. ಅಶ್ವಿನ್ ಮತ್ತು ಹರಭಜನ್ ಸಿಂಗ್.
25 ಓವರ್ ಬೌಲಿಂಗ್ ಮಾಡಿದ ಅಶ್ವಿನ್ ಐದು ವಿಕೆಟ್ ಪಡೆದರೆ, ಹರಭಜನ್ ಮೂರು ವಿಕೆಟ್ ಕಬಳಿಸಿ ಬಾಂಗ್ಲಾ ಅಲ್ಪ ಮೊತ್ತಕ್ಕೆ ಕುಸಿಯಲು ಕಾರಣರಾದರು. ಎರಡನೇ ಇನಿಂಗ್ಸ್ ಆರಂಭಿಸಿದ ಆತಿಥೇಯರು ವಿಕೆಟ್ ನಷ್ಟವಿಲ್ಲದೆ 23 ರನ್ ಗಳಿಸಿದ್ದ ವೇಳೆ ಕೊನೆಯ ದಿನದಾಟಕ್ಕೆ ತೆರೆಬಿತ್ತು. ಟೆಸ್ಟ್ ಡ್ರಾ ಮಾಡಿಕೊಂಡಿರುವ ಭಾರತ ಮೂರು ಏಕದಿನ ಪಂದ್ಯಗಳ ಸರಣಿ ಆಡಲಿದೆ. ಮೊದಲ ಪಂದ್ಯ ಜೂನ್ 18ರಂದು ಢಾಕಾದಲ್ಲಿ ಆಯೋಜನೆಯಾಗಿದೆ.
ನಾಲ್ಕನೇ ಸ್ಥಾನಕ್ಕೆ ಕುಸಿದ ಭಾರತ
ಭಾರತ ಐಸಿಸಿ ಟೆಸ್ಟ್ ರ್ಯಾಂಕಿಂಗ್ನಲ್ಲಿ ಒಂದು ಸ್ಥಾನ ಕುಸಿತ ಅನುಭವಿಸಿದ್ದು ಈಗ ನಾಲ್ಕನೇ ಸ್ಥಾನದಲ್ಲಿದೆ. ಟೆಸ್ಟ್ಗೂ ಮೊದಲು ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ತಲಾ 99 ರೇಟಿಂಗ್ ಪಾಯಿಂಟ್ಸ್ ಹೊಂದಿದ್ದವು. ಆದರೆ, ವಿರಾಟ್ ಕೊಹ್ಲಿ ಪಡೆ ಈಗ ಎರಡು ರೇಟಿಂಗ್ ಪಾಯಿಂಟ್ಸ್ ಕಳೆದುಕೊಂಡಿದೆ. ಕಿವೀಸ್ ಮೂರನೇ ಸ್ಥಾನದಲ್ಲಿದ್ದು, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಕ್ರಮವಾಗಿ ಮೊದಲ ಎರಡು ಸ್ಥಾನ ಉಳಿಸಿಕೊಂಡಿವೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.