ಶನಿವಾರ, ಜೂನ್ 12, 2021
23 °C

ತಂಬಾಕು ಬೆಳೆಗಾರರ ದಿಢೀರ್ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಾಥಪುರ: ಇಲ್ಲಿನ ತಂಬಾಕು ಮಾರುಕಟ್ಟೆಯಲ್ಲಿ ಸತತ ಬೆಲೆ ಕುಸಿತದಿಂದ ಹೈರಾಣಾದ ರೈತರು ಬುಧವಾರವೂ ಹರಾಜು ಪ್ರಕ್ರಿಯೆ ತಡೆದು ಮಂಡಳಿ ಅಧೀಕ್ಷಕರಿಗೆ ಮುತ್ತಿಗೆ ಹಾಕಿ ದಿಢಿರ್ ಪ್ರತಿಭಟನೆ ನಡೆಸಿದರು.ಮಾರುಕಟ್ಟೆಯ ಪ್ಲಾಟ್ ಫಾರಂ 63ರ ರಂಗಾಪುರ ಕ್ಲಸ್ಟರ್‌ನಲ್ಲಿ 1200 ಬೇಲ್‌ಗಳು ಆವಕವಾಗಿದ್ದವು. ಬೆಳಿಗ್ಗೆ 9ಕ್ಕೆ ಹರಾಜು ಶುರು ಮಾಡಿದ ಮಂಡಳಿ ಅಧೀಕ್ಷಕರು ಮತ್ತು ವರ್ತಕರು ಏಕಾಏಕಿ ಬೆಲೆ ಇಳಿಕೆ ಮಾಡಿ ಒಂದೆರಡು ಸಾಲುಗಳಲ್ಲಿ ಹಾಕಿದ್ದ ಸುಮಾರು 50 ಬೇಲ್‌ಗಳನ್ನು ಬೇಕಾಬಿಟ್ಟಿ ದರಕ್ಕೆ ಕೂಗಲಾರಂಭಿಸಿದರು. ಇನ್ನೊಂದೆಡೆ ಹೆಚ್ಚಿನ ಬೇಲ್‌ಗಳನ್ನು ಬಿಡ್ ಮಾಡದೇ ಹೋಗುತ್ತಿದ್ದರಿಂದ ಸಿಟ್ಟಿಗೆದ್ದ ರೈತರು ಹರಾಜು ಪ್ರಕ್ರಿಯೆ ತಡೆದು ಧಿಕ್ಕಾರ ಕೂಗಿದರು. ಮಂಡಳಿ ಅಧೀಕ್ಷಕರು ಮತ್ತು ವರ್ತಕರ ವಿರುದ್ಧ ತಿರುಗಿ ಬಿದ್ದರು. ಇದರಿಂದ ವಿಚಲಿತರಾದ ಹರಾಜು ಅಧೀಕ್ಷಕ ಎಸ್.ಕೆ. ತಾಜುದ್ದೀನ್ ಮಾರುಕಟ್ಟೆಯನ್ನು ಬಿಟ್ಟು ಕಚೇರಿಗೆ ತೆರಳಿದರು.ಅಧೀಕ್ಷಕರನ್ನು ಹಿಂಬಾಲಿಸಿದ ರೈತರು ಕಚೇರಿಗೆ ಮುತ್ತಿಗೆ ಹಾಕಿ ಅಲ್ಲಿಯೂ ಘೋಷಣೆ ಕೂಗತೊಡ ಗಿದರು. `ಈ ಬಾರಿ ನೀವು ಹರಾಜು ಅಧೀಕ್ಷಕರಾಗಿ ಇಲ್ಲಿಗೆ ಬಂದ ನಂತರ ಮಾರುಕಟ್ಟೆಯಲ್ಲಿ ಸತತವಾಗಿ ಬೆಲೆ ಕುಸಿತವಾಗುತ್ತಿದೆ. ಹರಾಜು ವೇಳೆ ಅಧೀಕ್ಷಕರು ಕೂಗುವ ಬೆಲೆಯನ್ನು ವರ್ತಕರು ಗಣನೆಗೆ ತೆಗೆದುಕೊಳ್ಳದೆ ನಿಮ್ಮನ್ನೇ ಬೆದರಿಸುತ್ತಾರೆ.

 

ನೀವು ಸಹ ವರ್ತಕರು ಕೂಗಿದ ಬೆಲೆಗೆ ಸಮ್ಮತಿ ಸೂಚಿಸಿ ರೈತರನ್ನು ವಂಚಿಸುತ್ತಿದ್ದೀರಿ. ನಿಮ್ಮ ಈ ವರ್ತನೆ ನೋಡಿದರೆ ವರ್ತಕರೊಂದಿಗೆ ಶಾಮೀಲಾಗಿರುವಂತೆ ತೋರುತ್ತದೆ ಎಂದು ಆರೋಪಿಸಿ ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕ ರನ್ನು ಸ್ಥಳಕ್ಕೆ ಕರೆಸಬೇಕು ಎಂದು ಪಟ್ಟುಹಿಡಿದರು.ತಂಬಾಕು ಕೊಳ್ಳುವ ಕಂಪೆನಿಗಳಿಂದ ಜನಪ್ರತಿನಿಧಿ ಗಳು ಮತ್ತು ಮಂಡಳಿ ಅಧಿಕಾರಿಗಳು ಎಷ್ಟೆಷ್ಟು ಪಾಲು ಪಡೆದಿದ್ದೀರಿ ಎಂಬುದನ್ನು ಹೇಳಬೇಕು. ನೀವು ಮಾಡುತ್ತಿರುವ ಭ್ರಷ್ಟಾಚಾರದಿಂದ ವರ್ತಕರು ಹೊಗೆಸೊಪ್ಪನ್ನು ಕಡಿಮೆ ಬೆಲೆಗೆ ಖರೀದಿಸುತ್ತಿದ್ದಾರೆ.

 

ರೈತರ ಹಿತಾಸಕ್ತಿ ಕಡೆಗಣಿಸಿ ಜಿಲ್ಲೆಯ ಜನಪ್ರತಿನಿಧಿ ಗಳೂ ಕೂಡ ಇತ್ತ ತಲೆಹಾಕುತ್ತಿಲ್ಲ. ಇದರಿಂದ ಕೋಟಿಗಟ್ಟಲೆ ಮೌಲ್ಯದ ತಂಬಾಕಿನ ದರ ಇಳಿಸಿ ಖರೀದಿಸುತ್ತಿರುವ ವರ್ತಕರು ರೈತರಿಗೆ ಮೋಸ ಮಾಡುತ್ತಿದ್ದಾರೆ. ಹೀಗಾಗಿ ಸಾಲ ಮಾಡಿಕೊಂಡು ಕಷ್ಟಪಟ್ಟು ಹೊಗೆಸೊಪ್ಪು ಬೆಳೆದ ರೈತರಿಗೆ ಕಿಂಚಿತ್ತೂ ಆದಾಯ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ತಂಬಾಕು ಬೆಳೆಯಲು ಲಕ್ಷಾಂತರ ಹಣ ಸಾಲ ಮಾಡಿಕೊಂಡು ಈಗ ತೀರಿಸಲು ಸಾಧ್ಯವಾಗದೇ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ತಲುಪಿದ್ದೇವೆ. ಮಾರುಕಟ್ಟೆಯಲ್ಲಿ ನ್ಯಾಯಯುತ ಬೆಲೆ ನೀಡದಿದ್ದರೆ ಮುಂದೆ ಹರಾಜು ಪ್ರಕ್ರಿಯೆ ತಡೆದು ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ರೈತರು ಎಚ್ಚರಿಕೆ ನೀಡಿದರು.ಕೊನೆಗೆ ಪ್ರತಿಭಟನಾ ನಿರತರೊಂದಿಗೆ ಮಾತುಕತೆ ನಡೆಸಿದ ಹರಾಜು ಅಧೀಕ್ಷಕರು ರೈತರ ಮನವೊಲಿಕೆಗೆ ಯತ್ನಿಸಿದರು. ಪ್ರತಿಭಟನೆ ಕಾವು ಮಧ್ಯಾಹ್ನ 12.30ಕ್ಕೆ ಶಮನಗೊಂಡಿತು. ಮಧ್ಯಾಹ್ನ ಹರಾಜು ಪುನರಾರಂಭಗೊಂಡಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.