ತಡಿಬಿಡಿ: ತರಕಾರಿ ವ್ಯಾಪಾರಿಗಳ ಗೋಳು

ಯಾದಗಿರಿ: ಕೇವಲ ಎರಡು ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವ ಶಹಾಪುರ ತಾಲ್ಲೂಕಿನ ಚಿಕ್ಕ ಗ್ರಾಮ ಪಂಚಾಯಿತಿ ತಡಿಬಿಡಿ. ಹುಂಡೆಕಲ್ ಮತ್ತು ತಡಿಬಿಡಿ ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವ ಈ ಪಂಚಾಯಿತಿಯಲ್ಲಿ 13 ಸದಸ್ಯರು ಆಯ್ಕೆಯಾಗಿದ್ದಾರೆ. ಆದರೆ, ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ತರಕಾರಿ ಮಾರುಕಟ್ಟೆ ಇಲ್ಲದೇ ಇರುವುದರಿಂದ ವ್ಯಾಪಾರಕ್ಕಾಗಿ ಬರುವ ವರ್ತಕರು ರಸ್ತೆಯ ಮೇಲೆಯೇ ತರಕಾರಿ ಮಾರುವಂತಾಗಿದೆ.
ಪ್ರತಿ ಬುಧವಾರ ಗ್ರಾಮದಲ್ಲಿ ಸಂತೆ ನಡೆಯುತ್ತದೆ. ರೈತರು ತಾವು ಬೆಳೆದ ತರಕಾರಿ, ದವಸ– ಧಾನ್ಯಗಳನ್ನು ಮಾರಾಟ ಮಾಡಲು ಇಲ್ಲಿಗೆ ಬರುತ್ತಾರೆ. ಆದರೆ ಮಾರಾಟಕ್ಕೆ ಸರಿಯಾದ ವ್ಯವಸ್ಥೆ ಇಲ್ಲದಂತಾಗಿದೆ. ಬಿಸಿಲು–ಮಳೆ ಎನ್ನದೇ ರಸ್ತೆಯ ಬದಿಯಲ್ಲಿ ಕುಳಿತುಕೊಂಡು ವ್ಯಾಪಾರ ಮಾಡುವಂತಾಗಿದೆ.
ಸುತ್ತಲಿನ ಗ್ರಾಮಸ್ಥರು ಮತ್ತು ಗ್ರಾಮದವರು ವಾರಕ್ಕೆ ಬೇಕಾದಷ್ಟು ತರಕಾರಿ ಹಾಗೂ ದಿನಸಿಯನ್ನು ಖರೀದಿಸಲು ಈ ಸಂತೆಗೆ ಬರುತ್ತಾರೆ. ಎಲ್ಲೆಡೆ ಸಂತೆಯು ಬೆಳಿಗ್ಗೆಯಿಂದ ಆರಂಭವಾದರೆ, ಈ ಗ್ರಾಮದಲ್ಲಿ ಮಾತ್ರ ಮಧ್ಯಾಹ್ನದ ನಂತರ ಸಂತೆ ಶುರುವಾಗುತ್ತದೆ.
ಸ್ಥಳದ ಅಭಾವ, ಖಾಸಗಿ ವ್ಯಕ್ತಿಗಳ ಸ್ಥಳಗಳಲ್ಲಿ ತಾವು ತಂದ ತರಕಾರಿ, ದಿನಸಿಗಳನ್ನು ಬುಟ್ಟಿಯಲ್ಲಿ ಚೀಲದಲ್ಲಿ ಇಟ್ಟುಕೊಂಡು ವ್ಯಾಪಾರವನ್ನು ಮಾಡುವ ದುಃಸ್ಥಿತಿ ಬಂದಿದೆ.
‘ಸ್ಥಳವನ್ನು ನೀಡಿದ ಖಾಸಗಿ ವ್ಯಕ್ತಿಗಳು, ಒಂದು ಬುಟ್ಟಿಯಿಂದ ಕನಿಷ್ಠವೆಂದರೂ ₨ 10 ವಸೂಲಿ ಮಾಡುತ್ತಾರೆ. ಹತ್ತು ರೂಪಾಯಿ ಹೋದರೂ ಚಿಂತೆ ಇಲ್ಲ, ನಮಗೆ ಕುಳಿತುಕೊಂಡು ವ್ಯಾಪಾರವನ್ನು ಮಾಡಲು ಅವಕಾಶ ಕೊಡುತ್ತಾರಲ್ಲ ಅಷ್ಟೆ ಸಾಕು’ ಎಂದು ತರಕಾರಿ ಮಾರುವ ಕ್ಯಾತನಾಳ ಗ್ರಾಮದ ಮಲ್ಲಮ್ಮ ಹೇಳುತ್ತಾರೆ.
ಆದರೆ ತರಕಾರಿ ಮಾರಾಟಗಾರರಿಗೆ ಹಾಗೂ ದಿನಸಿ ಮಾರಾಟಗಾರರಿಗೆ ಮೂಲ ಸೌಕರ್ಯಗಳನ್ನು ಒದಗಿಸಬೇಕಾದ ಪಂಚಾಯಿತಿಯು ಇತ್ತ ಗಮನ ನೀಡುತ್ತಿಲ್ಲ. ಇದರಿಂದಾಗಿ ವಾರದ ಸಂತೆಗಾಗಿ ಈ ಗ್ರಾಮಕ್ಕೆ ಬರುವ ಜನರು ಹಾಗೂ ವ್ಯಾಪಾರಸ್ಥರು ತೊಂದರೆ ಎದುರಿಸುವಂತಾಗಿದೆ.
‘ನಾವು ಕಷ್ಟಪಟ್ಟು ಬೆಳೆದ ತರಕಾರಿಯನ್ನು ಈ ಸಂತೆಗೆ ತಂದು ಮಾರಾಟ ಮಾಡಬೇಕಾದರೆ ಸರಿಯಾದ ಸ್ಥಳವಿಲ್ಲ. ಇದರಿಂದಾಗಿ ವ್ಯಾಪಾರದಲ್ಲಿ ಸಾಕಷ್ಟು ನಷ್ಟವಾಗುತ್ತಿದೆ ಎಂದು ತರಕಾರಿ ವ್ಯಾಪಾರಿ ಶಂಕ್ರಪ್ಪ ಹೇಳುತ್ತಾರೆ.
ಗ್ರಾಮ ಪಂಚಾಯಿತಿಯು ತರಕಾರಿ ಹಾಗೂ ದಿನಸಿ ಮಾರಾಟಗಾರರಿಗೆ ಸ್ಥಳವನ್ನು ಒದಗಿಸಿಕೊಡಬೇಕು. ಖಾಸಗಿ ವ್ಯಕ್ತಿಗಳಿಗೆ ಕೊಡುವ ಹಣವನ್ನು ವ್ಯಾಪಾರಸ್ಥರು ಪಂಚಾ-ಯಿತಿಯೇ ಆಕರಿಸುವ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳಬೇಕು ಎಂಬುದು ಗ್ರಾಮದ ಜನರ ಸಲಹೆಯಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.