ಗುರುವಾರ , ಮೇ 19, 2022
21 °C

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಜಿಲ್ಲೆಯ ಕಿರುಗಾವಲು ಮತ್ತು ಕಸುವಿನಹಳ್ಳಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಜನರ ಮೇಲೆ ನಡೆದ ದೌರ್ಜನ್ಯಕ್ಕೆ ಆಯಾ ತಾಲ್ಲೂಕುಗಳ ಆಡಳಿತದ ವೈಫಲ್ಯವೇ ಕಾರಣವಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಜೆಡಿಎಸ್ ಎಸ್‌ಸಿ/ ಎಸ್‌ಟಿ  ರಾಜ್ಯ ಘಟಕ ಆಗ್ರಹಪಡಿಸಿದೆ.ಜಿಲ್ಲೆಯಲ್ಲಿ ಅಸ್ಪೃಶ್ಯತೆ ಜೀವಂತ ವಾಗಿದೆ ಎನ್ನುವುದಕ್ಕೆ ಈ ಅಮಾನವೀಯ ಘಟನೆಗಳೇ ಸಾಕ್ಷಿ ಯಾಗಿದ್ದು, ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ ಮತ್ತು ಸುರೇಶ್‌ಗೌಡರು ಜವಾಬ್ದಾರಿ ಹೊರಬೇಕು ಎಂದು ಘಟಕದ ರಾಜ್ಯಾಧ್ಯಕ್ಷ ಅನ್ನದಾನಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.ಪರಿಶಿಷ್ಟ ಜಾತಿಯ ಜನರ ಮೇಲೆ ಪದೇ ಪದೇ ದೌರ್ಜನ್ಯ, ಬಹಿಷ್ಕಾರ ದಂತ ಪ್ರಕರಣಗಳು ಪುನರಾವರ್ತನೆ ಆಗಲು ಆಡಳಿತ ವೈಫಲ್ಯವೇ ಕಾರಣ ಎಂದು ದೂರಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್, ಜಿಲ್ಲಾಧಿಕಾರಿ ಪಿ.ಸಿ.ಜಾಫರ್ ಅವರು ಘಟನೆ ನಡೆದ ಸ್ಥಳಗಳಿಗೆ ಭೇಟಿ ನೀಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.ಜಿಲ್ಲಾ ಆಡಳಿತ, ಆಯಾ ಕ್ಷೇತ್ರಗಳ ಶಾಸಕರು ಸ್ಥಳಕ್ಕೆ ಭೇಟಿ ನೀಡಿ, ಸೌಹಾರ್ದಯುತವಾಗಿ ಬದುಕುವುದಕ್ಕೆ ಅಲ್ಲಿನ ಜನರಲ್ಲಿ ವಿಶ್ವಾಸ ಮೂಡಿಸಬೇಕು. ಅಲ್ಲದೆ, ಘಟನೆಯಲ್ಲಿ ನೊಂದವರಿಗೆ ತಕ್ಷಣ ಪರಿಹಾರ ಕಲ್ಪಿಸಲು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.ಮಂಡ್ಯ ತಾಪಂ ಅಧ್ಯಕ್ಷ ಭದ್ರಾಚಲಾ ಮೂರ್ತಿ, ಮುಖಂಡರಾದ ಸೋಮಶೇಖರ್ ಕೆರೆಗೋಡು, ಪ್ರಸನ್ನ, ಜಯರಾಂ ಹಾಜರಿದ್ದರು.ಡಿವೈಎಸ್ಪಿ ಅಮಾನತಿಗೆ ಆಗ್ರಹ

ಕಿರುಗಾವಲು ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಗೆ ಕ್ಷೌರ ಮಾಡಲು ನಿರಾಕರಿಸಿ ಹಲ್ಲೆ ನಡೆಸಿರುವ ಕ್ರಮ ಅಕ್ಷಮ್ಯವಾಗಿದ್ದು, ಘಟನೆಯ ನಂತರ ಆರೋಪಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ವಿಫಲವಾಗಿರುವ ಡಿವೈಎಸ್ಪಿ ಉತ್ತಪ್ಪ ಅವರನ್ನು ತಕ್ಷಣ ಅಮಾನತು ಮಾಡುವಂತೆ ದಸಂಸ ಒತ್ತಾಯಿಸಿದೆ.ಅಲ್ಲದೆ, ಮಂಡ್ಯ ವೈದ್ಯಕೀಯ, ವಿಜ್ಞಾನಗಳ ಸಂಸ್ಥೆ (ಮಿಮ್ಸ) ನಿರ್ದೇಶಕ ಗುರುಸ್ವಾಮಿ ವಿರುದ್ಧ ಜಾತಿ ನಿಂದನೆ ಮಾಡಿರುವವರು ಹಾಗೂ ನಾಗಮಂಗಲದ ಕಸುವಿನಹಳ್ಳಿ ಗ್ರಾಮದಲ್ಲಿ ಪರಿಶಿಷ್ಟರ ಮೇಲೆ ದೌರ್ಜನ್ಯ ನಡೆಸಿರುವವರ ವಿರುದ್ಧ ಕ್ರಮ ಜರುಗಿಸಬೇಕೆಂದು ದಸಂಸ ರಾಜ್ಯ ಸಂಚಾಲಕ ಲಕ್ಷ್ಮಿನಾರಾಯಣ ಆಗ್ರಹಪಡಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ರಮಾನಂದ ತರೀಕೆರೆ, ಕೆಂಪಯ್ಯ ಸಾಗ್ಯ, ಕುಮಾರ್ ಬಸವನಹಳ್ಳಿ, ಮುನಿಸ್ವಾಮಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.