ಸೋಮವಾರ, ಮಾರ್ಚ್ 8, 2021
31 °C

ತಪ್ಪು ತಿದ್ದಿಕೊಳ್ಳಲು ಸುನಿ ಸಂಕಲ್ಪ

ಡಿ.ಎಂ.ಕುರ್ಕೆ ಪ್ರಶಾಂತ Updated:

ಅಕ್ಷರ ಗಾತ್ರ : | |

ತಪ್ಪು ತಿದ್ದಿಕೊಳ್ಳಲು ಸುನಿ ಸಂಕಲ್ಪ

ಶಿವರಾಜ್‌ಕುಮಾರ್ ಅಭಿನಯದ ‘ಮನಮೋಹಕ’ ಚಿತ್ರದ ಬ್ಯಾನರ್ ಬದಲಾಗುತ್ತದೆಯೇ? ಹೌದು ಎನ್ನುತ್ತಾರೆ ಚಿತ್ರದ ನಿರ್ದೇಶಕ ಸುನಿಲ್‌. ಈ ಮೊದಲು ‘ಮನಮೋಹಕ’ನಿಗೆ ಸುನಿ ಮತ್ತು ಅವರ ಗೆಳೆಯರ ತಂಡವೇ ಬಂಡವಾಳ ಹೂಡುವ ಮನಸ್ಸು ಮಾಡಿತ್ತು. ಆದರೆ ‘ಉಳಿದವರು ಕಂಡಂತೆ’ ಚಿತ್ರದ ಹೂಡಿಕೆ ಪೂರ್ಣವಾಗಿ ಕೈಸೇರದ್ದು, ‘ಮನಮೋಹಕ’ ಬ್ಯಾನರ್ ಬದಲಾವಣೆಗೆ ಕಾರಣ ಎನ್ನುವುದನ್ನು ಸುನಿ ನೇರವಾಗಿ ಹೇಳದೆಯೇ ಒಪ್ಪಿಕೊಳ್ಳುತ್ತಾರೆ. ಅಲ್ಲದೆ ನಿರ್ಮಾಣಕ್ಕಿಂತ ನಿರ್ದೇಶನದತ್ತ ಗಮನ ಕೇಂದ್ರೀಕರಿಸುವುದು ಅವರ ಮುಂದಿನ ನಡೆ. ‘ಮನಮೋಹಕ’ ಜುಲೈನಲ್ಲಿ ಮುಹೂರ್ತ ಮುಗಿಸಿ ಚಿತ್ರೀಕರಣವನ್ನು ಆರಂಭಿಸುತ್ತದೆ. ಸುನಿ ನಿರ್ದೇಶನದ ಮತ್ತೊಂದು ಚಿತ್ರ ‘ಬಹುಪರಾಕ್’ ರೀರೆಕಾರ್ಡಿಂಗ್‌ನಲ್ಲಿದ್ದು, ಪ್ರಸಕ್ತ ಐಪಿಎಲ್‌ ಋತುವಿನ ನಂತರ ಬಿಡುಗಡೆಯಾಗಲಿದೆ. ಸಣ್ಣ ಪ್ರಮಾಣದ ಬಂಡವಾಳ ತೊಡಗಿಸಿ, ಸರಳವಾಗಿ ಕಥೆ ಹೇಳಿ ‘ಸಿಂಪಲ್ಲಾಗ್‌ ಒಂದ್ ಲವ್‌ ಸ್ಟೋರಿ’ ಚಿತ್ರ ಗೆಲ್ಲಿಸಿದ ಸುನಿಯತ್ತ ಗಾಂಧಿನಗರ ಕಣ್ಣರಳಿಸಿ ನೋಡುತ್ತಿರುವಾಗಲೇ ನಿರ್ಮಾಣ–ನಿರ್ದೇಶನ ಎಂದು ದೊಡ್ಡ ಪ್ರಾಜೆಕ್ಟ್‌ಗಳಿಗೆ ಕೈ ಹಾಕಿದರು. ಆದರೆ ತಮ್ಮದು ತುಸು ಆತುರದ ನಡೆಯಾಯಿತು ಎನ್ನುವುದು ಅವರಿಗೆ ಮನದಟ್ಟಾಗಿದೆ. ಮುಂದಿನ ದಿನಗಳಲ್ಲಿ ಸೂಕ್ಷ್ಮವಾಗಿ ಅವಲೋಕಿಸಿ ಹೆಜ್ಜೆ ಇಡಲು ಅವರು ನಿರ್ಧರಿಸಿದ್ದಾರೆ.‘ಮನಮೋಹಕ ಸಿನಿಮಾ ನಮ್ಮ ಬ್ಯಾನರ್‌ನಿಂದ ಬೇರೆ ಬ್ಯಾನರ್‌ಗೆ ಹೋಗುವುದು ಖಚಿತ. ಒಳ್ಳೆಯ ಬ್ಯಾನರ್ ಅಡಿಯೇ ಚಿತ್ರ ನಿರ್ದೇಶಿಸುತ್ತೇನೆ’ ಎಂದು ಸ್ಪಷ್ಟವಾಗಿ ಹೇಳುವ ಸುನಿ, ‘ಉಳಿದವರು ಕಂಡಂತೆ’ ಬಂಡವಾಳ ವಾಪಸಾಗದ ಕಾರಣ ‘ಮನಮೋಹಕ’ಕ್ಕೆ ಬಂಡವಾಳ ಹೂಡುತ್ತಿಲ್ಲವೆ ಎನ್ನುವ ಪ್ರಶ್ನೆಗೆ, ‘ನಿಮಗೇ ಸತ್ಯ ಗೊತ್ತಿದೆಯಲ್ಲ’ ಎಂದು ನಗುವಿನಿಂದಲೇ ಪ್ರತಿಕ್ರಿಯಿಸುತ್ತಾರೆ.‘ಬಹುಪರಾಕ್‌ ಮತ್ತು ‘ಉಳಿದವರು ಕಂಡಂತೆ’ ಚಿತ್ರಗಳಲ್ಲಿ ಏಕಕಾಲದಲ್ಲಿ ತೊಡಗಿದ್ದು ತಪ್ಪಾಯಿತು. ನಿರ್ಮಾಣಕ್ಕೆ ಅಲ್ಪ ಕಾಲದ ವಿರಾಮ ನೀಡುವೆ. ಮನಮೋಹಕ ಚಿತ್ರ ಬಿಡುಗಡೆಯಾಗುವವರೆಗೂ ಯಾವುದೇ ಸಿನಿಮಾ ನಿರ್ಮಿಸುವುದಿಲ್ಲ’ ಎನ್ನುವ ಸಂಕಲ್ಪ ಅವರದ್ದು. ಸದ್ಯ ನಿರ್ಮಾಣಕ್ಕಿಂತ ನಿರ್ದೇಶನದತ್ತ ಹೆಚ್ಚು ಆಸ್ಥೆ ತಳೆದಿದ್ದಾರೆ ಸುನಿ. ಸಿನಿಮಾ ಮಾಡಲೇಬೇಕು ಎಂದು ಸಿದ್ಧಪಡಿಸಿರುವ ಮೂರು ಚಿತ್ರಕಥೆಗಳು ಅವರ ಕೈಯಲ್ಲಿದ್ದರೆ, ಪತ್ತೆದಾರಿ ಕಾದಂಬರಿಯೊಂದರ ಹಕ್ಕು ಪಡೆದು ಚಿತ್ರಕಥೆ ಹೆಣೆಯುವ ಉತ್ಸಾಹವೂ ಮನದಲ್ಲಿದೆ.

‘‘ನನ್ನ ಎಲ್ಲ ಸಿನಿಮಾಗಳನ್ನೂ ವ್ಯಾಪಾರಿ ಮತ್ತು ಕಲಾತ್ಮಕತೆಯನ್ನು ಬ್ಲೆಂಡ್ ಮಾಡಿಯೇ ನಿರ್ಮಿಸುವೆ. ‘ಬಹುಪರಾಕ್’ ಪ್ರಯೋಗಾತ್ಮಕ ಚಿತ್ರವಾಗಿ ಬರಲಿದೆ. ‘ಮನಮೋಹಕ’ ಲವ್‌ಸ್ಟೋರಿಯ ಚಿತ್ರ’’ ಎನ್ನುವ ಸುನಿಗೆ ಎಲ್ಲ ರೀತಿಯ ಸಿನಿಮಾಗಳನ್ನು ಮಾಡುವ ಆಸೆ ಇದೆಯಂತೆ. ‘ಸ್ವಲ್ಪ ಆತುರ ಪಟ್ಟೆ. ನಿಧಾನವಾಗಿ ಸಿನಿಮಾ ಮಾಡಬೇಕು. ಅದರಲ್ಲೂ ಏಕಕಾಲದಲ್ಲಿ ಎರಡು ಚಿತ್ರಗಳಲ್ಲಿ ತೊಡಗಿದ್ದು ತಪ್ಪು. ನಮಗೆ ಇಷ್ಟವಾಗುವ ಸಿನಿಮಾಕ್ಕಿಂತ ಜನರಿಗೆ ಇಷ್ಟವಾಗುವ ಸಿನಿಮಾ ಮಾಡಬೇಕು’ ಎಂದು ಮತ್ತಷ್ಟು ಪ್ರೇಮಕಥೆಗಳನ್ನು ಹೊತ್ತು ತರುವ ಸುಳಿವು ನೀಡುತ್ತಾರೆ. ‘ಉಳಿದವರು ಕಂಡಂತೆ’ ಸಿನಿಮಾ ಬಗ್ಗೆ ತೃಪ್ತಿ ಇದೆ ಎನ್ನುವ ಸುನಿಗೆ, ಆ ಚಿತ್ರದ ಗಳಿಕೆಯ ಬಗ್ಗೆ ಹೆಚ್ಚು ಮಾತನಾಡಲು ಮನಸ್ಸಿಲ್ಲ. ಚಿತ್ರದ ಸ್ಯಾಟಲೈಟ್ ಹಕ್ಕು ಮಾರಾಟವಾಗದೆಯೇ ಆ ಬಗ್ಗೆ ಮಾತನಾಡುವುದು ಸೂಕ್ತ ಅಲ್ಲ ಎನ್ನುವುದು ಅವರ ನುಡಿ. ‘ನಿರೂಪಣೆ ನಿಧಾನವಾಯಿತು. ಒಂದು ವರ್ಗವನ್ನು ಕೇಂದ್ರೀಕರಿಸಿದ ಸಿನಿಮಾ ಅದಾಯಿತು. ಚಿತ್ರದ ಟ್ರೇಲರ್‌ನಲ್ಲಿ ಎಲ್ಲರಿಗೂ ಇಷ್ಟವಾಗುವ ಚಿತ್ರ ಎಂದು ತೋರಿಸಲಾಯಿತು. ಒಂದು ವರ್ಗವನ್ನು ದೃಷ್ಟಿಯಲ್ಲಿಟ್ಟುಕೊಂಡು ಸಿನಿಮಾ ಮಾಡುವುದಾದರೆ ಮೊದಲೇ ತೀರ್ಮಾನಿಸಬೇಕು. ಬುದ್ಧಿವಂತರಿಗೆ ಮಾತ್ರ, ಒಂದು ವರ್ಗದ ಚಿತ್ರ ಎಂದು ಹೇಳಬೇಕು. ಇಲ್ಲವಾದರೆ ನಿರೀಕ್ಷೆ ಹೊತ್ತ ಪ್ರೇಕ್ಷಕನಿಗೆ ಮೋಸ ಆಗುತ್ತದೆ. ಆ ಮೋಸ ನಮ್ಮಿಂದ ಆಗಿದೆ’ ಎಂದು ಮಾರ್ಮಿಕವಾಗಿ ಉತ್ತರಿಸುತ್ತಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.