ಮಂಗಳವಾರ, ಜೂನ್ 15, 2021
27 °C

ತಮಿಳುನಾಡು: ಕಾಂಗ್ರೆಸ್ ಏಕಾಂಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ (ಪಿಟಿಐ, ಐಎಎನ್‌ಎಸ್‌): ಲೋಕಸಭೆ ಚುನಾವಣೆ ಎದುರಿ­ಸಲು ತಮಿಳುನಾಡಿನಲ್ಲಿ ಮಿತ್ರರೇ ಇಲ್ಲದೆ ಕಾಂಗ್ರೆಸ್‌ ಏಕಾಂಗಿಯಾಗಿದೆ. ರಾಜಕೀಯವಾಗಿ ಪಕ್ಷ ಏಕಾಂಗಿಯಾಗಿದೆ ಎಂಬುದನ್ನು ಕಾಂಗ್ರೆಸ್ ನಾಯಕರು ಮಾತ್ರ ಒಪ್ಪುತ್ತಿಲ್ಲ.ಸಂಭಾವ್ಯ ಮಿತ್ರ ಪಕ್ಷಗಳ ಜೊತೆಗೆ ಹೈಕಮಾಂಡ್‌ ಮಾತುಕತೆ ನಡೆಸುತ್ತಿದೆ ಎಂದು ಕಾಂಗ್ರೆಸ್‌ ಮುಖಂಡ ಜ್ಞಾನದೇಶಿಕನ್‌ ಹೇಳಿದ್ದಾರೆ. ಡಿಎಂಡಿಕೆ ಅಥವಾ ಪಿಎಂಕೆಯಲ್ಲಿ ಯಾವ ಪಕ್ಷದ ಜೊತೆಗೆ ಹೈಕಮಾಂಡ್‌ ಮಾತುಕತೆ ನಡೆಸುತ್ತಿದೆ ಎಂಬುದನ್ನು ಅವರು ಬಹಿರಂಗಪಡಿಸಲು ಒಪ್ಪಲಿಲ್ಲ. ಡಿಎಂಕೆ ಮಾತ್ರ ಈಗಾಗಲೇ ಮೈತ್ರಿಯ ಬಾಗಿಲನ್ನು ಮುಚ್ಚಿಬಿಟ್ಟಿದೆ ಎಂದು ಜ್ಞಾನದೇಶಿಕನ್‌ ಹೇಳಿದ್ದಾರೆ.

ಬಿಜೆಪಿಗೆ ಮುನ್ನಡೆ: ಡಿಎಂಡಿಕೆ ಮತ್ತು ಪಿಎಂಕೆಗಳನ್ನು ಓಲೈಸಲು ಬಿಜೆಪಿಯೂ ಈ ಪಕ್ಷಗಳ ಹಿಂದೆ ಬಿದ್ದಿದೆ. ಡಿಎಂಡಿಕೆ ಜೊತೆಗೆ ಬಿಜೆಪಿ ಮೈತ್ರಿ ಬಹುತೇಕ ಅಂತಿಮ ಹಂತಕ್ಕೆ ತಲುಪಿದೆ ಎನ್ನಲಾಗುತ್ತಿದೆ.ಡಿಎಂಡಿಕೆ ಮತ್ತು ಪಿಎಂಕೆಯೊಂದಿಗೆ ಮಾತುಕತೆ ಮುಂದುವರಿದಿದೆ. ಪಿಎಂಕೆ ಈಗಾಗಲೇ 10 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಕೆಲವು ಕ್ಷೇತ್ರಗಳಿಗೆ ಡಿಎಂಡಿಕೆ ಮತ್ತು ಪಿಎಂಕೆಗಳು ಪಟ್ಟು ಹಿಡಿದಿರುವುದು ಮಾತ್ರ ಈಗ ಇರುವ ಸಮಸ್ಯೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.ನಟ ವಿಜಯಕಾಂತ್‌ ನಾಯಕತ್ವದ ಡಿಎಂಡಿಕೆ ತಮಿಳು­ನಾಡಿನಲ್ಲಿ ಶೇ 10ರಷ್ಟು ಮತಗಳನ್ನು ಹೊಂದಿದೆ. ಹಾಗಾಗಿ ಆ ಪಕ್ಷವನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ. ಇದು ಪಿಎಂಕೆಯ ಅಸಮಾಧಾನಕ್ಕೂ ಕಾರಣವಾಗಿದೆ.ಕಾಂಗ್ರೆಸ್‌ ಕಂಗಾಲು: ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಸಮಸ್ಯೆ ಮತ್ತು ಆಡಳಿತ ವಿರೋಧಿ ಅಲೆ­ಯಿಂದಾಗಿ 42 ಸಂಸತ್‌ ಸ್ಥಾನಗಳನ್ನು ಹೊಂದಿರುವ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗುವ ಸಾಧ್ಯತೆಯೇ ಹೆಚ್ಚು.ದಕ್ಷಿಣದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ­ಗಳಲ್ಲಿ ಇರುವ ಒಟ್ಟು ಸ್ಥಾನಗಳ ಸಂಖ್ಯೆ 130. ಆಂಧ್ರ­ಪ್ರದೇಶ 42, ಕರ್ನಾಟಕ 28, ಕೇರಳ 20, ತಮಿಳು­ನಾಡು 39 ಮತ್ತು ಪುದುಚೇರಿ ಒಂದು ಸ್ಥಾನಗಳನ್ನು ಹೊಂದಿವೆ.ಇವುಗಳಲ್ಲಿ 61 ಸ್ಥಾನಗಳನ್ನು ಕಳೆದ ಚುನಾವಣೆ­ಯಲ್ಲಿ ಕಾಂಗ್ರೆಸ್‌ ಪಡೆದಿತ್ತು. ಆಂಧ್ರದಲ್ಲಿ 30 ಸ್ಥಾನಗಳನ್ನು ಗೆದ್ದು ಮೆರೆದಿತ್ತು.

ಆದರೆ ವಿಶ್ಲೇಷಕರು ಹೇಳುವಂತೆ ಕಾಂಗ್ರೆಸ್‌ ಈ ಬಾರಿ ನೆಲಕಚ್ಚಲಿದೆ. ತಮಿಳುನಾಡಿನಲ್ಲಿ  ಕಾಂಗ್ರೆಸ್‌ನ ಪ್ರಮುಖ ನಾಯಕರೇ ಸೋಲುವ ಭಯದಲ್ಲಿದ್ದಾರೆ. ಯಾಕೆಂದರೆ ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಪಡೆದ ಮತ ಪ್ರಮಾಣ ಶೇ 5ಕ್ಕಿಂತ ಕಡಿಮೆ. ಇದು ಎಐಎಡಿಎಂಕೆ, ಡಿಎಂಕೆ ಮತ್ತು ಡಿಎಂಡಿಕೆಗಳಿಗಿಂತ ಬಹಳ ಹಿಂದೆ ಇದೆ.ದೀರ್ಘ ಕಾಲದಿಂದಲೂ ಎಐಎಡಿಎಂಕೆ ಅಥವಾ ಡಿಎಂಕೆ ಬೆನ್ನ ಮೇಲೇರಿಯೇ ಕಾಂಗ್ರೆಸ್‌ ನಾಯಕರು ಲೋಕಸಭೆ ಪ್ರವೇಶಿಸಿದ್ದಾರೆ. ಆದರೆ ಈ ಬಾರಿ ಬೆಲೆ ಏರಿಕೆ, ಹಣದುಬ್ಬರ ಮತ್ತು ಇತರ ವಿಷಯಗಳಲ್ಲಿ ವಿರೋಧ ಪಕ್ಷಗಳೆಲ್ಲವೂ ಕಾಂಗ್ರೆಸ್‌ ಮೇಲೆ ಮುಗಿಬೀಳಲಿವೆ. ಹಾಗಾಗಿ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಠೇವಣಿಯನ್ನೇ ಕಳೆದುಕೊಳ್ಳಬಹುದು ಎಂಬ ವಿಶ್ಲೇಷಣೆಯೂ ಇದೆ.ಕಳೆದ ಬಾರಿ ಕಷ್ಟಪಟ್ಟು ಗೆಲುವಿನ ದಡ ಸೇರಿದ್ದ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ರಾಜ್ಯದ ಹೊರಗೆ ಸುರಕ್ಷಿತ ಕ್ಷೇತ್ರವೊಂದರ ಹುಡುಕಾಟ­ದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.ಬಿಜೆಪಿ–ಡಿಎಂಡಿಕೆ ಮತ್ತಷ್ಟು ಹತ್ತಿರ

ಚೆನ್ನೈ:
ಡಿಎಂಡಿಕೆ ಹಾಗೂ ಪಿಎಂಕೆ ಪಕ್ಷಗಳ ಜತೆ ಸೀಟು ಹಂಚಿಕೆ ಮಾತುಕತೆಯಿಂದ ಬೀಗಿರುವ ಬಿಜೆಪಿ,  2–3 ದಿನಗಳಲ್ಲಿ ರಾಜ್ಯದಲ್ಲಿ  ಮೈತ್ರಿ ಕೂಟ ಅಸ್ಥಿತ್ವಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.