ಬುಧವಾರ, ಜೂನ್ 16, 2021
27 °C
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಭೀತಿ

ತರಾತುರಿಯಲ್ಲಿ ರಸ್ತೆ ಕಾಮಗಾರಿಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಭೀತಿಯಿಂದ ಮುಖ್ಯಮಂತ್ರಿ­ಗಳು, ಸಚಿವರ ಅನುಪಸ್ಥಿತಿಯಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆ (ಪಿಎಂಜಿಎಸ್‌ವೈ)–2ರ ಅಡಿಯ ರಸ್ತೆ ಅಭಿವೃದ್ಧಿ ಕಾಮಗಾರಿ­ಗಳಿಗೆ ಅಧಿಕಾರಿಗಳು ಹಾಗೂ ಬಿಜೆಪಿ ಶಾಸಕರು ತರಾತುರಿಯಲ್ಲಿ ಚಾಲನೆ ನೀಡಿದ ಪ್ರಸಂಗ ಬುಧವಾರ ನಡೆಯಿತು.ನೀತಿ ಸಂಹಿತೆ ಉಲ್ಲಂಘನೆ ಭೀತಿ­ಯಿಂದ ಸರ್ಕಾರಿ ಕಾರ್ಯಕ್ರಮವಾಗಿ­ದ್ದರೂ ನಾಡಗೀತೆ ಹಾಡದೇ ಉದ್ಘಾ­ಟನೆ ಮಾಡಲಾಯಿತು. ಉದ್ಘಾಟನೆ ಹಾಗೂ ಭಾಷಣದ ನಂತರ ಪ್ರಾರ್ಥನಾ ಗೀತೆ ಪ್ರಸ್ತುತಪಡಿಸಲಾಯಿತು.ಪಿಎಂಜಿಎಸ್‌ವೈ ಯೋಜನೆಯಡಿ ₨ 1,044.59 ಕೋಟಿ ಮೊತ್ತದ ರಾಜ್ಯದ 2245 ಕಿ.ಮೀ. ಉದ್ದದ 315 ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಸುವರ್ಣ ವಿಧಾನಸೌಧದಲ್ಲಿ ಇಂದು ಮುಖ್ಯ­ಮಂತ್ರಿ­ಗಳು ಚಾಲನೆ ನೀಡಬೇಕಿತ್ತು. ಆದರೆ, ಮುಖ್ಯಮಂತ್ರಿಗಳು ಆಗಮಿಸ­ಲಿಲ್ಲ. ಬೆಳಿಗ್ಗೆ 11ಕ್ಕೆ ನಡೆಯಬೇಕಿದ್ದ ಕಾರ್ಯಕ್ರಮ 10.15ಕ್ಕೆ ನಡೆಯಿತು. ಶಾಸಕ ಸಂಜಯ ಪಾಟೀಲ ಕಾರ್ಯ­ಕ್ರಮ ಉದ್ಘಾಟಿಸಿದರೆ, ಆರ್‌ಡಿಪಿಆರ್‌ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತ.ಮ.ವಿಜಯಭಾಸ್ಕರ್‌ ಕಾಮಗಾರಿಯ ಕೈಪಿಡಿ ಬಿಡುಗಡೆ ಮಾಡುವ ಮೂಲಕ ಕಾಮಗಾರಿಗಳಿಗೆ ಚಾಲನೆ ನೀಡಿದರು.ವಿಜಯಭಾಸ್ಕರ್‌ ಅವರು, ಗ್ರಾಮೀಣ ಭಾಗದ ಜನರ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಈ ಯೋಜನೆ ಜಾರಿಗೊಳಿಸಲಾಗಿದೆ. ಕೇಂದ್ರ ಸರ್ಕಾರ ಶೇ. 75 ರಷ್ಟು ಅನುದಾನ ನೀಡಿದ್ದು, ಉಳಿದ ಶೇ. 25 ರಷ್ಟು ಅನುದಾನವನ್ನು ರಾಜ್ಯ ಸರ್ಕಾರ ಭರಿಸಲಿದೆ. ಈ ಕಾಮಗಾರಿಗಳಿಗೆ ಟೆಂಡರ್‌ ಪ್ರಕ್ರಿಯೆ ನಡೆದಿದ್ದು, ಈಗಾ­ಗಲೇ 220 ಟೆಂಡರ್‌ ಅಂತಿಮ­ಗೊಳಿ­ಸಲಾಗಿದ್ದು, ಸದ್ಯದಲ್ಲಿಯೇ ಕಾರ್ಯಾ­ದೇಶ ಪತ್ರ ನೀಡಲಾಗುವುದು ಎಂದು ತಿಳಿಸಿದರು.‘ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಪಿಎಂಜಿಎಸ್‌ವೈ ಯೋಜನೆಯನ್ನು ಜಾರಿಗೆ ತರಲಾಯಿತು. ಗ್ರಾಮೀಣ ಭಾಗದ ಜನರಿಗೆ ಉತ್ತಮ ಸಂಪರ್ಕ ಒದಗಿಸುವ ಉದ್ದೇಶದಿಂದ ಈ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಗುಣಮಟ್ಟದ ರಸ್ತೆಗಳ ನಿರ್ಮಾಣಕ್ಕೆ ಅಧಿಕಾರಿಗಳು ಗಮನ ಹರಿಸಬೇಕು’ ಎಂದು ಸಂಸದ ಸುರೇಶ ಅಂಗಡಿ ಹೇಳಿದರು.ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ಸಮಾರಂಭದ ವೇದಿಕೆಗೆ ಆಗಮಿಸಿದ ಗ್ರಾಮೀಣಾಭಿ­ವೃದ್ಧಿ ಹಾಗೂ ಪಂಚಾಯತ್‌ರಾಜ್‌ ಸಚಿವ ಎಚ್‌.ಕೆ. ಪಾಟೀಲ ಅವರು, ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಕಾರ್ಯಕ್ರ ಮ­ವನ್ನು ಮೊಟಕುಗೊಳಿಸುವುದಾಗಿ ಘೋಷಿಸಿದರು.ವಿಧಾನ ಪರಿಷತ್‌ ಸದಸ್ಯ ಮಹಾಂತೇಶ ಕವಟಗಿಮಠ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಉಷಾ ಶಿಂತ್ರಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಜಾನನ ನಾಯಕ, ಪ್ರಾದೇಶಿಕ ಆಯುಕ್ತ ವಿ.ಬಿ. ಪಾಟೀಲ, ಜಿಲ್ಲಾಧಿಕಾರಿ ಎನ್‌.ಜಯರಾಂ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೀಪಾ ಚೋಳನ ಉಪಸ್ಥಿತರಿದ್ದರು. ಅನೀಲ ದೇಸಾಯಿ ನಿರೂಪಿಸಿದರು.ಜಿಲ್ಲಾ ಚುನಾವಣಾಧಿಕಾರಿಗೆ ಒಪ್ಪಿಸಿದ ಸರ್ಕಾರಿ ವಾಹನ: ಸಮಾರಂಭಕ್ಕೆ ತಡವಾಗಿ ಬಂದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಸಚಿವ ಎಚ್‌.ಕೆ. ಪಾಟೀಲ ಅವರು ಸರ್ಕಾರಿ ವಾಹನದಲ್ಲಿ ಆಗಮಿಸಿದರು. ಇದಕ್ಕೂ ಮುನ್ನ ಸಂಸದ ಸುರೇಶ ಅಂಗಡಿ ಸಹ ಸರ್ಕಾರಿ ವಾಹನದಲ್ಲಿಯೇ ಬಂದಿದ್ದರು.ಚುನಾವಣಾ ನೀತಿ ಸಂಹಿತೆ ಪ್ರಕಟವಾಗುತ್ತಿದ್ದಂತೆ ಸಚಿವರು ಹಾಗೂ ಸಂಸದರು ತಮ್ಮ ಸರ್ಕಾರಿ ವಾಹನಗಳನ್ನು ಜಿಲ್ಲಾ ಚುನಾವಣಾ­ಧಿಕಾರಿಯ ಸುಪರ್ದಿಗೆ ಒಪ್ಪಿಸಿದ ನಂತರ ಖಾಸಗಿ ವಾಹನಗಳಲ್ಲಿ ತೆರಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.