ಶನಿವಾರ, ಮೇ 21, 2022
26 °C

ತಲಕಾವೇರಿ: ಇಂದು ರಾತ್ರಿ 11.43ಕ್ಕೆ ತೀರ್ಥೋದ್ಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಲಕಾವೇರಿ: ಇಂದು ರಾತ್ರಿ 11.43ಕ್ಕೆ ತೀರ್ಥೋದ್ಭವ

ಮಡಿಕೇರಿ:  ಜೀವನದಿ ಕಾವೇರಿ ಮಾತೆಯ ಸನ್ನಿಧಿ ತಲಕಾವೇರಿಯಲ್ಲಿ ಅ. 17 ರಂದು (ಸೋಮವಾರ) ರಾತ್ರಿ 11.43 ಗಂಟೆಗೆ ಸಲ್ಲುವ ತುಲಾ ಸಂಕ್ರಮಣದಲ್ಲಿ ನಡೆಯುವ ತೀರ್ಥೋದ್ಭವಕ್ಕಾಗಿ ಪುಣ್ಯ ಕ್ಷೇತ್ರದಲ್ಲಿ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.

ತೀರ್ಥೋದ್ಭವ ವೀಕ್ಷಿಸಲು ಆಗಮಿಸುವ ಸಹಸ್ರಾರು ಜನರಿಗೆ ಯಾವುದೇ ರೀತಿಯ ಅನಾನುಕೂಲ ಆಗದಂತೆ ದೇವಸ್ಥಾನ ಸಮಿತಿ ಹಾಗೂ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದೆ.

ಭಕ್ತರಿಗೆ ನಿರಂತರವಾಗಿ ಕುಡಿಯುವ ನೀರು ಒದಗಿಸಲು ವ್ಯವಸ್ಥೆ ಮಾಡಲಾಗಿದೆ. ತೀರ್ಥೋದ್ಭವದ ನಂತರ ನಡೆಯುವ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ವಿಶೇಷ ಒತ್ತು ನೀಡಿದ್ದಾರೆ. ಅನ್ನಸಂತರ್ಪಣೆ ಮಾಡುವುದಕ್ಕೆ ವಿಶೇಷ ತಂಡಗಳನ್ನು ರಚಿಸಲಾಗಿದೆ.

ಅನ್ನದಾನ: ಈ ಬಾರಿ ತೀರ್ಥೋದ್ಭವ ದಿನದಂದು ದೇವಸ್ಥಾನದ ಆವರಣದೊಳಗೆ ಅನ್ನದಾನ ಮಾಡಲು ಯಾರಿಗೆ ಅವಕಾಶ ನೀಡಬೇಕು ಎನ್ನುವ ವಿಷಯ ಚರ್ಚೆಗೆ ಗ್ರಾಸವಾಯಿತು. ಕಳೆದ 20 ವರ್ಷಗಳಿಂದ ಅನ್ನದಾನ ನೀಡುತ್ತಿದ್ದ ಕೊಡಗು ಏಕೀಕರಣ ರಂಗಕ್ಕೆ ಈ ಬಾರಿ ಅವಕಾಶ ನೀಡಬಾರದು ಎಂದು ತುಂಬ ವಿರೋಧ ವ್ಯಕ್ತವಾಗಿತ್ತು.

ಪೂರ್ವಭಾವಿ ಸಭೆಯಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆ ನಡೆದು ಕೊಡಗು ಏಕೀಕರಣ ರಂಗಕ್ಕೆ ಅನ್ನದಾನದ ಅವಕಾಶ ನಿರಾಕರಿಸಲಾಯಿತು. ಇದೇ ಮೊದಲ ಬಾರಿಗೆ ಅನ್ನದಾನ ನೀಡಲು ದೇವಸ್ಥಾನ ಸಮಿತಿಗೆ ಅವಕಾಶ ನೀಡಲಾಗಿದೆ.

ಅ. 17 ಹಾಗೂ 18ರಂದು ಎರಡು ದಿನಗಳ ಕಾಲ ದೇವಸ್ಥಾನ ಸಮಿತಿಯಿಂದಲೇ ಅನ್ನದಾನ ನಡೆಯಲಿದೆ. ಇನ್ನುಳಿದಂತೆ ದೇವಸ್ಥಾನದ ಹೊರಗೆ ಮಂಡ್ಯ ಅನ್ನಸಂತರ್ಪಣಾ ಸಮಿತಿ, ಚೆಟ್ಟಿಯಾರ್ ಗ್ರೂಪ್, ಹಿಂದೂ ಜಾಗರಣ ವೇದಿಕೆ, ವೀರಾಜಪೇಟೆ ಕೊಡವ ಸಮಾಜ ಸಂಘಗಳು ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ಅನ್ನದಾನ ಮಾಡಲಿವೆ.

ನೇರ ಪ್ರಸಾರ: ಕಾವೇರಿ ತೀರ್ಥೋದ್ಭವವನ್ನು ನೇರವಾಗಿ ಭಕ್ತರು ವೀಕ್ಷಿಸಲಿ ಎನ್ನುವ ಕಾರಣಕ್ಕೆ ತಲಕಾವೇರಿಯಲ್ಲಿ ನಾಲ್ಕು ಕಡೆ ದೊಡ್ಡ ಪರದೆಗಳನ್ನು ಅಳವಡಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.

ತೀರ್ಥೋದ್ಭವ ರಾತ್ರಿ ವೇಳೆ ನಡೆಯುವುದರಿಂದ  ಅ. 17 ಮತ್ತು 18 ರಂದು ಯಾವುದೇ ವ್ಯತ್ಯಯವಿಲ್ಲದೆ ನಿರಂತರ ವಿದ್ಯುತ್ ಪೂರೈಕೆ ಮಾಡಲು ಸೆಸ್ಕ್ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಇದಲ್ಲದೇ, ಸುಮಾರು 10 ರಿಂದ 15 ಜನರೇಟರ್‌ಗಳನ್ನು ಸಹ ಬಳಸಲು ನಿರ್ಧರಿಸಲಾಗಿದೆ. ಭಾಗಮಂಡಲ - ತಲಕಾವೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗಿದೆ.

ಬಸ್ ಸೌಲಭ್ಯ: ಭಾಗಮಂಡಲ-ಮಡಿಕೇರಿ ನಡುವೆ ಓಡಾಟಕ್ಕೆ ಹೆಚ್ಚುವರಿಯಾಗಿ 20 ಬಸ್ ಹಾಗೂ ತಲ      ಕಾವೇರಿ- ಭಾಗಮಂಡಲ ನಡುವೆ 10 ಡಬಲ್ ಡೋರ್ ಬಸ್‌ಗಳ  ವ್ಯವಸ್ಥೆ ಮಾಡಲಾಗಿದೆ. ವಾಹನ ಸಂಚಾರ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಡಿವೈಎಸ್‌ಪಿ, ಸರ್ಕಲ್ ಇನ್ಸ್‌ಪೆಕ್ಟರ್, ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ ಸುಮಾರು 800 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್ ಅಣ್ಣಿಗೇರಿ ತಿಳಿಸಿದ್ದಾರೆ.

ತಲಕಾವೇರಿವರೆಗೆ ತೆರಳಲು ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಅವಕಾಶ ಕಲ್ಪಿಸಲಾಗಿದೆ. ಖಾಸಗಿ ಬೃಹತ್ ವಾಹನಗಳನ್ನು ಭಾಗಮಂಡಲದಲ್ಲಿಯೇ ನಿಲ್ಲಿಸಬೇಕಾಗುತ್ತದೆ.

ನಾಲ್ಕು ಚಕ್ರದ ವಾಹನಗಳನ್ನು ಮಾತ್ರ ತಲಕಾವೇರಿ ಬಳಿಯ ಪಾರ್ಕಿಂಗ್ ಸ್ಥಳಕ್ಕೆ ಬಿಡಲಾಗುವುದು. ಅಲ್ಲಿಂದ 200 ಮೀಟರ್ ನಡೆದು ಭಕ್ತಾದಿಗಳು ತಲಕಾವೇರಿಗೆ ತೆರಳಬೇಕಾಗಿದೆ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.