ಸೋಮವಾರ, ಜನವರಿ 20, 2020
29 °C
ಕೆ.ಡಿ.ಪಿ. ಸಭೆಯಲ್ಲಿ ಗೃಹ ಸಚಿವರ ಎದುರು ಎಚ್‌.ಡಿ.ಕೆ ಆಕ್ರೋಶ

ತಹಶೀಲ್ದಾರ್‌ ದಾಕ್ಷಾಯಿಣಿ ನನ್ನ ಫೋನ್‌ ಕರೆ ಸ್ವೀಕರಿಸುತ್ತಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ‘ಕನಕಪುರ ತಹಶೀಲ್ದಾರ್‌ಗೆ ದುರಹಂಕಾರ ಜಾಸ್ತಿಯಾಗಿದೆ. ನಾನು ಎಷ್ಟು ಬಾರಿ ದೂರವಾಣಿ ಕರೆ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲ. ಬದಲಿಗೆ ಉದ್ಧಟತನದಿಂದ ಕರೆಯನ್ನೇ ಸ್ಥಗಿತಗೊಳಿಸುತ್ತಿದ್ದಾರೆ. ಇದು ಒಳ್ಳೆ ಲಕ್ಷಣವಲ್ಲ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.ಗೃಹ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್‌ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅವರು ತಹಶೀಲ್ದಾರ್‌ ವಿರುದ್ಧ ಅವರು ಹೀಗೆ ಹರಿಹಾಯ್ದರು. ಇದು ಸಭೆಯಲ್ಲಿ ಬಿಸಿ ಬಿಸಿ ಚರ್ಚೆಗೆ ಆಸ್ಪದ ನೀಡಿತು.‘ನಿಮ್ಮ ಹಿನ್ನೆಲೆ ಏನು ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ಸಹಾಯ ಕೇಳಿ ಎಷ್ಟು ಬಾರಿ ನೀವು ನನ್ನ ಮನೆಗೆ ಬಂದಿದ್ದೀರ ಎಂಬುದೂ ಗೊತ್ತಿದೆ. ಈಗ ನಾನು ಕರೆ ಮಾಡಿದರೆ ಸ್ವೀಕರಿಸುವುದಿಲ್ಲ ಎಂದರೆ ಏನರ್ಥ ? ಇದು ನಿಮ್ಮ ದುರಹಂಕಾರ ತೋರಿಸುತ್ತದೆಯಲ್ಲವೇ’ ಎಂದು ಕುಮಾರಸ್ವಾಮಿ ಕಿಡಿಕಾರಿದರು.ಆಗ ಪ್ರತಿಕ್ರಿಯಿಸಿದ ಕನಕಪುರ ತಹಶೀಲ್ದಾರ್ ದಾಕ್ಷಾಯಿಣಿ ಅವರು, ‘ನನಗೆ ನೀವು ಒಮ್ಮೆ ಮಾತ್ರ ಕರೆ ಮಾಡಿದ್ದು’ ಎಂದು ಹೇಳಿದರು.

‘ಒಮ್ಮೆ ನಿಮ್ಮ ಆಪ್ತ ಸಹಾಯಕರು (ಪಿ.ಎ) ಕರೆ ಮಾಡಿದ್ದರು. ಸ್ವಲ್ಪ ಹೊತ್ತಿನಲ್ಲಿಯೇ ಎಚ್‌.ಡಿ. ಕುಮಾರಸ್ವಾಮಿ ಅವರು ನಿಮಗೆ ಕರೆ ಮಾಡುತ್ತಾರೆ, ನೀವು ಅದನ್ನು ಸ್ವೀಕರಿಸಬೇಡಿ ಎಂದು ಹೇಳಿದ್ದರು’ ಎಂದು ಅವರು ಸಭೆಗೆ ತಿಳಿಸಿದರು.ಇದರಿಂದ ಅವಕ್ಕಾದ ಕುಮಾರ ಸ್ವಾಮಿ ಅವರು ‘ಆ ಪಿ.ಎ ಯಾರು ? ಅವರೇಕೆ ಹಾಗೆ ಹೇಳುತ್ತಾರೆ ?’ ಎಂದು ಪ್ರಶ್ನಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್‌.ಸಿ.ರಾಜಣ್ಣ ಅವರು ‘ಹಾಗೆ ಹೇಳಿದ ಪಿ.ಎ ದೂರವಾಣಿ ಸಂಖ್ಯೆ ಮತ್ತು ಹೆಸರನ್ನು ತಿಳಿಸಿ’ ಎಂದು ಒತ್ತಾಯಿಸಿದರು.ಮಾಗಡಿ ಶಾಸಕ ಎಚ್‌.ಸಿ.ಬಾಲಕೃಷ್ಣ ಮಾತನಾಡಿ, ‘ತಹಶೀಲ್ದಾರ್‌ ಅವರು ಪಿ.ಎ ಮಾತು ಕೇಳುತ್ತಾರೋ, ಶಾಸಕರ ಮಾತನ್ನು ಕೇಳುತ್ತಾರೋ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಆಗ ಮಧ್ಯ ಪ್ರವೇಶಿಸಿದ ಸಚಿವ ಕೆ.ಜೆ.ಜಾರ್ಜ್‌ ಅವರು, ‘ಪಿ.ಎ ಕರೆ ಮಾಡಿ ನಿಮ್ಮ ಕರೆ ಸ್ವೀಕರಿಸಬೇಡ ಎಂದು ಹೇಳಿದ್ದರು ಎಂಬುದನ್ನು ಕುಮಾರಸ್ವಾಮಿ ಅವರ ಗಮನಕ್ಕೆ ತಾರದೆ, ಈಗ ಸಭೆಯಲ್ಲಿ ಎಲ್ಲರ ಎದುರು ಹೀಗೆ ಹೇಳಿದರೆ ಹೇಗೆ’ ಎಂದು ತರಾಟೆಗೆ ತೆಗೆದುಕೊಂಡರು.ಈ ವಿಷಯವನ್ನು ಬೇರೆ ಕಡೆ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳು ವಂತೆ ಸಚಿವರು ಕುಮಾರಸ್ವಾಮಿ ಅವರಿಗೂ ಕಿವಿಮಾತು ಹೇಳಿದರು.

ಇದಕ್ಕೂ ಮುನ್ನ, ‘ಅಧಿಕಾರಿಗಳು ಜನಪ್ರತಿನಿಧಿಗಳ ಕರೆಗಳನ್ನು ಸ್ವೀಕರಿಸುತ್ತಿಲ್ಲ. ಕರೆ ಬಂದಿರುವುದು ಗೊತ್ತಿದ್ದರೂ ನಿರ್ಲಕ್ಷ್ಯ ತೋರುತ್ತಿ ದ್ದಾರೆ’ ಎಂದು ಮಾಗಡಿ ಶಾಸಕ ಬಾಲಕೃಷ್ಣ ಅಸಮಾಧಾನ ವ್ಯಕ್ತಪಡಿಸಿದ್ದರು.ಖಂಡನೆ: ಕುಮಾರಸ್ವಾಮಿ ಅವರ ಆರೋಪವನ್ನು ದಲಿತ ಮುಖಂಡ ರಾಂಪುರ ನಾಗೇಶರ್‌ ತೀವ್ರವಾಗಿ ಖಂಡಿಸಿದ್ದಾರೆ. ದಲಿತ ಅಧಿಕಾರಿಯ  ವಿರುದ್ಧ ಅವರು ದುರುದ್ದೇಶದಿಂದ ಆರೋಪ ಮಾಡಿದ್ದಾರೆ ಎಂದಿದ್ದಾರೆ.

ಪ್ರತಿಕ್ರಿಯಿಸಿ (+)