ಸೋಮವಾರ, ಜನವರಿ 20, 2020
19 °C

ತಾರಕಕ್ಕೇರಿದ ಪರ್ಯಾಯ ವಿವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಸೋದೆ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಅವರ ಇದೇ 18ರ ಪರ್ಯಾಯ ಮಹೋತ್ಸವಕ್ಕೆ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರಿಗೆ ಆಹ್ವಾನ ನೀಡದ ಹಿನ್ನೆಲೆಯಲ್ಲಿ ಸೃಷ್ಟಿಯಾದ ವಿವಾದ ಈಗ ತಾರಕಕ್ಕೇರಿದೆ.ತಮಗೆ ಆಹ್ವಾನ ನೀಡಿಲ್ಲ. ತಮ್ಮ ಮಠವನ್ನೂ ಕಡೆಗಣಿಸಲಾಗಿದೆ ಎಂದು ಬೇಸರಗೊಂಡಿರುವ ಪುತ್ತಿಗೆ ಮಠದ ಸುಗುಣೇಂದ್ರ ಸ್ವಾಮೀಜಿ, ಇದೇ 17ರಂದು ಒಂದು ದಿನದ ಉಪವಾಸ ನಡೆಸುವುದಾಗಿ ಭಾನುವಾರ ಘೋಷಿಸಿದ ಬೆನ್ನಲ್ಲೇ, `ಪುತ್ತಿಗೆ ಶ್ರೀಗಳು ತಮ್ಮ ಬಗ್ಗೆ ಆಡಿದ ಮಾತಿನಿಂದ ನೋವಾಗಿದ್ದು, ತಾವೂ ಎರಡು ದಿನ ಉಪವಾಸ ನಡೆಸಲು ನಿರ್ಧರಿಸುವೆ~ ಎಂದು ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಸೋಮವಾರ ಹೇಳಿದ್ದಾರೆ.ನಗರದಲ್ಲಿ ಪರ್ಯಾಯ ವಿವಾದದ ವಿಚಾರವಾಗಿಯೇ ಎರಡು ಸುದ್ದಿಗೋಷ್ಠಿಗಳು ಸೋಮವಾರ ನಡೆದವು. ಒಂದೆಡೆ ಪೇಜಾವರ ಶ್ರೀ, ಇನ್ನೊಂದೊಡೆ ಪುತ್ತಿಗೆ ಶ್ರೀಗಳ ಜತೆಗೂಡಿ ಹಾಲಿ ಪರ್ಯಾಯ ಶೀರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಸುದ್ದಿಗೋಷ್ಠಿ ನಡೆಸಿದರು.`ಸೋದೆ ಮಠದ ಪರ್ಯಾಯಕ್ಕೆ ಪುತ್ತಿಗೆ ಶ್ರೀಗಳಿಗೆ ಆಮಂತ್ರಣ ನೀಡದ ಬಗೆಗಿನ ಗೊಂದಲ ನಿವಾರಿಸಲು ಸಾಕಷ್ಟು ಪ್ರಯತ್ನ ನಡೆಸಿದರೂ ಪುತ್ತಿಗೆ ಶ್ರೀ ತಮ್ಮ ವಿರುದ್ಧವೇ ಆರೋಪ ಮಾಡಿದ್ದಾರೆ. ಈ ಬಗ್ಗೆ ಒತ್ತಡ ಹಾಕಲು ಉಪವಾಸಕ್ಕೆ ಕುಳಿತುಕೊಳ್ಳುವ ನಿರ್ಧಾರ ಬೇಸರ ತಂದಿದೆ. ಇಂಥ ಕ್ಷುಲ್ಲಕ ವಿಷಯಕ್ಕೆ ಉಪವಾಸ ನಡೆಸುವುದು ಸರಿಯಲ್ಲ~ ಎಂದು ಪೇಜಾವರ ವಿಶ್ವೇಶತೀರ್ಥರು ಹೇಳಿದರು.ಈಗಿನ ವಿವಾದ ನಿವಾರಣೆಗೆ ಪೇಜಾವರ ಶ್ರೀಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದು ಪುತ್ತಿಗೆ ಸ್ವಾಮೀಜಿ ಆಗ್ರಹಿಸಿರುವ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ವಿಶ್ವೇಶತೀರ್ಥರು, `ಪುತ್ತಿಗೆ ಶ್ರೀ ಉಪವಾಸ ವಿಚಾರ ಕೇಳಿ ಬೇಸರವಾಗಿದೆ. ನಮಗೂ ಮಠದಲ್ಲಿ ಕುಳಿತು ಊಟ ಮಾಡಲು ಸಾಧ್ಯವಿಲ್ಲ. ನಾನೂ ಸೋಮವಾರ ಮಧ್ಯರಾತ್ರಿಯಿಂದಲೇ ಬುಧವಾರ ಮಧ್ಯಾಹ್ನದವರೆಗೂ ಉಪವಾಸ ನಡೆಸುವೆ~ ಎಂದರು.`ಪುತ್ತಿಗೆ ಶ್ರೀಗಳ ಪೀಠಾರೋಹಣ ಸಮಯದಲ್ಲಿ ಉಪವಾಸ ಮಾಡಿ ಪ್ರತಿಭಟನೆ ನಡೆಸಿದ್ದೆ. ಅದೇ ರೀತಿ ಈ ಬಾರಿಯೂ ಪ್ರತಿಭಟಿಸಬೇಕು ಎಂದು ಪುತ್ತಿಗೆ ಶ್ರೀ ಆಗ್ರಹಿಸುವುದು ಸರಿಯಲ್ಲ. ಆಗಿನ ಪರ್ಯಾಯ ವೇಳೆ ಉಳಿದ ಮಠಾಧಿಪತಿಗಳು ವಿಧಿಸಿದ್ದ ಷರತ್ತಿನಂತೆ ನಡೆದುಕೊಂಡಿದ್ದರೆ ಅವರನ್ನು ಬೆಂಬಲಿಸಬಹುದಿತ್ತು~ ಎಂದರು.`ನನ್ನಿಂದಾದ ಪ್ರಯತ್ನ ಮಾಡಿದ್ದೇನೆ. ಮಠಗಳ ನಡುವೆ ತಾತ್ವಿಕ ಭಿನ್ನಾಭಿಪ್ರಾಯವಿದೆ. ಪುತ್ತಿಗೆ ಸ್ವಾಮೀಜಿ ಪರ್ಯಾಯದಲ್ಲಿ ಪಾಲ್ಗೊಂಡರೆ ಅದನ್ನು ವಿರೋಧಿಸಿ ಕಾರ್ಯಕ್ರಮದಲ್ಲಿ ಭಾಗವಹಿಸದೇ ಇರುವ ಯತಿಗಳೂ ಇದ್ದಾರೆ. ಹೀಗಾಗಿ ಈ ವಿಚಾರದಲ್ಲಿ ನಾನು ಮಧ್ಯ ಪ್ರವೇಶಿಸಿ ಸೋದೆ ಮಠಕ್ಕೆ ಒತ್ತಡ ಹಾಕಲು ಸಾಧ್ಯವಿಲ್ಲ. ಉಭಯಸಂಕಟ ಉಂಟುಮಾಡಲಾರೆ~ ಎಂದು ಸ್ವಾಮೀಜಿ ಸ್ಪಷ್ಟಪಡಿಸಿದರು.ದೈವ ದೇವರ ಮೊರೆ: ಶೀರೂರು ಶ್ರೀಸೋದೆ ಪರ್ಯಾಯ ಆಮಂತ್ರಣ ಪತ್ರಿಕೆ ವಿವಾದ ಕುರಿತಂತೆ ಈಗ ಸ್ವಪ್ರತಿಷ್ಠೆಯಿಂದ ವಿವಾದ ಆಗಿದೆಯೇ ಹೊರತೂ ಮತ್ತೇನೂ ಅಲ್ಲ ಎಂದು ಹೇಳಿದ ಪರ್ಯಾಯ ಶೀರೂರು ಲಕ್ಷ್ಮೀವರ ತೀರ್ಥರು, `ಯಾರ ಉಪವಾಸದಿಂದಲೂ ಸಮಸ್ಯೆ ಬಗೆಹರಿಯದು. ಪರಿಹಾರಕ್ಕೆ ಶ್ರೀಕೃಷ್ಣ ಮುಖ್ಯಪ್ರಾಣ ಹಾಗೂ ಮಠದ ದೈವ `ಗೆಜ್ಜೆಮಲ್ಲಿ~ಯಲ್ಲಿ ಪ್ರಶ್ನಿಸಿದ್ದು ಎಲ್ಲವೂ ಸುಸೂತ್ರಾಗಿ ಬಗೆಹರಿಯುವ ಸೂಚನೆ ಸಿಕ್ಕಿದೆ~ ಎಂದರು.ಆರೋಪ ಹಿಂಪಡೆಯುವೆ: ಇದೇ ವೇಳೆ ಮಾತನಾಡಿದ ಪುತ್ತಿಗೆ ಶ್ರೀಗಳು, `ಪೇಜಾವರ ಶ್ರೀಗಳ ವಿರುದ್ಧ ಮಾಡಿದ್ದ ಆರೋಪದಿಂದ ಅವರಿಗೆ ಬೇಸರವಾಗಿದ್ದರೆ ಆ ಮಾತುಗಳನ್ನು ಹಿಂಪಡೆಯುವೆ. ಭಾವೋದ್ವೇಗದಲ್ಲಿ ಆರೋಪ ಮಾಡಿದೆನೇ ಹೊರತು ಬೇರೆ ಉದ್ದೇಶವಿಲ್ಲ. ಅವರಿಗೆ ನೋವಾಗಿದ್ದರೆ ವಿಷಾದಿಸುವೆ. ಇಡೀ ಸಮಾಜ ಅಷ್ಟಮಠಗಳನ್ನು ಒಟ್ಟಾಗಿ ನೋಡಬೇಕು ಎಂಬ ಕಳಕಳಿಯಿಂದ ಉಪವಾಸದ ಘೋಷಣೆ ಮಾಡಿದ್ದೇನೆ~ ಎಂದು ಸ್ಪಷ್ಟಪಡಿಸಿದರು.

ಪ್ರತಿಕ್ರಿಯಿಸಿ (+)