ಶನಿವಾರ, ಮಾರ್ಚ್ 6, 2021
24 °C

ತಾಲಿಬಾನ್‌ಗೆ ಶಸ್ತ್ರಾಸ್ತ್ರ ಪೂರೈಸಿದ್ದ ಶೋಭ್‌ರಾಜ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಾಲಿಬಾನ್‌ಗೆ ಶಸ್ತ್ರಾಸ್ತ್ರ ಪೂರೈಸಿದ್ದ ಶೋಭ್‌ರಾಜ್‌

ನವದೆಹಲಿ (ಪಿಟಿಐ): ಸರಣಿ ಹಂತಕ ಚಾರ್ಲ್ಸ್‌ ಶೋಭ್‌ರಾಜ್‌ ತಾನು ತಾಲಿಬಾನ್‌ ಸಂಘಟನೆಗಳಿಗೆ ಶಸ್ತ್ರಾಸ್ತ್ರ ಪೊರೈಕೆ ಮಾಡುತ್ತಿದ್ದಾಗಿ ಹೇಳಿಕೊಂಡಿದ್ದಾನೆ.‘ತಿಹಾರ್‌ ಜೈಲಿನಲ್ಲಿದ್ದಾಗ ಜೈಶೆ–ಎ–ಮೊಹಮ್ಮದ್‌ (ಜೆಎಎಂ) ಮುಖ್ಯಸ್ಥ ಮಸೂದ್‌ ಅಜರ್‌ನನ್ನು ಭೇಟಿ ಮಾಡಿದ್ದೆ. ಆತ ಅಮೆರಿಕದ ಕೇಂದ್ರೀಯ ಬೇಹುಗಾರಿಕಾ ಸಂಸ್ಥೆ (ಸಿಐಎ) ಸಂಪರ್ಕದಲ್ಲಿದ್ದ’ ಎಂದು ಕಠ್ಮಂಡು ಕೇಂದ್ರ ಕಾರಾಗೃಹದಲ್ಲಿರುವ 70 ವರ್ಷದ ಶೋಭ್‌ರಾಜ್‌ ತಿಳಿಸಿದ್ದಾನೆ.‘ಅಜರ್‌ ಪರಿಚಯವಾದ ಮೇಲೆ ಶಾಸ್ತ್ರಾಸ್ತ್ರ ಮಾರಾಟದ ದಲ್ಲಾಳಿಯಾದೆ. ಆದರೆ, ಆತ ಸಂಸತ್‌ ಭವನದ ಮೇಲೆ ದಾಳಿ ಮಾಡಲು ಸಂಚು ಮಾಡಿದ’ ಎಂದು ಶೋಭ್‌ರಾಜ್‌  ಬ್ರಿಟನ್ನಿನ ‘ಜಿಕ್ಯೂ’ ನಿಯತಕಾಲಿಕೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾನೆ. 1999ರಲ್ಲಿ ಉಗ್ರರು ಅಪಹರಣ ಮಾಡಿದ್ದ ಇಂಡಿಯನ್‌ ಏರ್‌ಲೈನ್ಸ್‌ ವಿಮಾನದ ಪ್ರಯಾಣಿಕರನ್ನು ಬಿಡಿಸಿಕೊಂಡು ಬರಲು ಅಜರ್‌ ಮತ್ತು ಇನ್ನಿಬ್ಬರು ಉಗ್ರರನ್ನು ಭಾರತ ಬಿಡುಗಡೆ ಮಾಡಿತ್ತು. ನಂತರ ಮಸೂದ್ ಜೈಶೆ–ಎ–ಮೊಹಮ್ಮದ್‌ ಸಂಘಟನೆ ಸ್ಥಾಪಿಸಿದ.‘ತಾಲಿಬಾನ್‌ ಸಂಘಟನೆಗಳು ಶಸ್ತ್ರಾಸ್ತ್ರಕ್ಕೆ ಖರೀದಿಸಲು ಹೆರಾಯಿನ್‌ ಮಾರಾಟ ಮಾಡುತ್ತಿದ್ದವು. ನನಗೆ ಪರಿಚಯವಿದ್ದ ಮಾದಕವಸ್ತುಗಳ ಅವ್ಯವಹಾರದಲ್ಲಿ ತೊಡಗಿದ್ದ ಚೀನಾ ಮತ್ತು ನೇಪಾಳದ ಗುಂಪುಗಳನ್ನು ತಾಲಿಬಾನ್‌ ಸಂಘಟನೆಗಳಿಗೆ ಪರಿಚಯಮಾಡಿಕೊಟ್ಟಿದೆ. ನಾನು ಸಿಐಎ ಏಜೆಂಟ್‌ ಆಗಿಯೂ ಕೆಲಸ ಮಾಡಿದ್ದೇನೆ’ ಎಂದು ಆತ ಹೇಳಿಕೊಂಡಿದ್ದಾನೆ.‘ಯುದ್ಧ ಮತ್ತು ಭಯೋತ್ಪಾದನೆಗಾಗಿ ನಾನು ನನ್ನ ಜೀವಕ್ಕೆ ಅಪಾಯ ತಂದುಕೊಂಡಿದೆ. ಬಂಧನಕ್ಕೆ ಒಳಗಾದ ನಂತರ ಅಮೆರಿಕದ ಸಿಐಎ ನನ್ನನ್ನು  ದೂರ ಇರಿಸಿತು. ಅಲ್ಲಿಂದೀಚೆಗೆ ಸಿಐಎ ನನ್ನ ನೆರವಿಗೆ ಯಾವತ್ತೂ ಬಂದಿಲ್ಲ’ ಎಂದಿದ್ದಾನೆ.

‘2003ರಲ್ಲಿ ಇರಾಕ್‌ ಯುದ್ಧ ನಡೆಯುವುದಕ್ಕೂ ಮುನ್ನ ನನ್ನನ್ನು ಸದ್ದಾಂ ಹುಸೇನ್‌ ಅವರ ವ್ಯಕ್ತಿಯೊಬ್ಬ ಸಂಪರ್ಕಿಸಿದ್ದ. ಅಣ್ವಸ್ತ್ರ ತಯಾರಿಕೆ ಅಗತ್ಯವಾದ ‘ರೆಡ್‌ ಮರ್ಕ್ಯುರಿ’ ಒದಗಿಸಿಕೊಂಡುವಂತೆ ದುಂಬಾಲು ಬಿದ್ದಿದ್ದ’ ಎಂದು ಹೇಳಿದ್ದಾನೆ.ಶೋಭರಾಜ್‌ 1986ರಲ್ಲಿ ತಿಹಾರ್‌ ಜೈಲಿನಿಂದ ತಪ್ಪಿಸಿಕೊಂಡಿದ್ದ. ವಿವಿಧ ಪ್ರಕರಣ­-ಗಳಲ್ಲಿ ಅವನಿಗೆ 10 ವರ್ಷ ಸಜೆ ಆಗಿತ್ತು. 1975ರಲ್ಲಿ ಅಮೆರಿಕದ ಮಹಿಳೆ­ಯೊಬ್ಬರನ್ನು ಹತ್ಯೆ ಪ್ರಕರಣ ಸಂಬಂಧ ಶೋಭರಾಜ್‌ಗೆ ನೇಪಾಳದಲ್ಲಿ ಜೀವಾವಧಿ ಶಿಕ್ಷೆ (20 ವರ್ಷ ಸೆರೆವಾಸ) ವಿಧಿಸಲಾಗಿದೆ. 2003ರಿಂದ ಆತ ಜೈಲಿನಲ್ಲಿ ಇದ್ದಾನೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.