ಸೋಮವಾರ, ಜನವರಿ 20, 2020
26 °C

ತಾಲ್ಲೂಕು ರಸ್ತೆಗಳಿಗೆ ದುರಸ್ತಿ ಭಾಗ್ಯ!

ಪ್ರಜಾವಾಣಿ ವಾರ್ತೆ, Updated:

ಅಕ್ಷರ ಗಾತ್ರ : | |

 ನರಸಿಂಹರಾಜಪುರ: ಹಲವು ವರ್ಷಗಳಿಂದ ದುರಸ್ತಿ ಕಾಣದೆ ಇದ್ದ ತಾಲ್ಲೂಕು ಕೇಂದ್ರದಿಂದ ಪ್ರಮುಖ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಕೊನೆಗೂ ಅಭಿವೃದ್ಧಿ ಭಾಗ್ಯ ಕಂಡಿದೆ.  ತಾಲ್ಲೂಕು ಕೇಂದ್ರದಿಂದ ಬಾಳೆಹೊನ್ನೂರಿಗೆ ಹೋಗುವ ರಸ್ತೆ ಅಳೇಹಳ್ಳಿ ಗ್ರಾಮದವರೆಗೆ ಉತ್ತಮವಾಗಿತ್ತು. ಆದರೆ ಈ ಭಾಗದಿಂದ ಮುಂದಕ್ಕೆ 8ನೇ ಮೈಲಿಕಲ್ಲಿನಿಂದ ಚಿಕ್ಕಗ್ರಹಾರದವರೆಗೆ ಹಾಗೂ ಸೀಕೆಯಿಂದ ಬಾಳೆಹೊನ್ನೂರಿನವರೆಗೆ ರಸ್ತೆ ಗುಂಡಿ ಬಿದ್ದು ಹಾಳಾಗಿತ್ತು. ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗಿತ್ತು.ಅಲ್ಲದೆ ರಸ್ತೆಯ ಅಂಚುಗಳು ಕಡಿದಾಗಿದ್ದರಿಂದ ಎದುರಿನಿಂದ ವಾಹನಗಳು ಬಂದರೆ ಅವಗಳಿಗೆ ದಾರಿ ಮಾಡಿ ಕೊಡುವಾಗ ಚಾಲಕರು ಪರದಾಡುವ ಸ್ಥಿತಿ ನಿರ್ಮಾಣಾವಾಗಿತ್ತು.

 

ಮಳೆಗಾಲದಲ್ಲಂತೂ ರಸ್ತೆ ಮತ್ತು ಗುಂಡಿಗಳ ವ್ಯತ್ಯಾಸ ಗೊತ್ತಾಗುತ್ತಿರಲಿಲ್ಲ. ಅಗಾಗ ಗುಂಡಿ ಮುಚ್ಚುವ ಕೆಲಸವನ್ನು ಸಂಬಂಧಪಟ್ಟ ಇಲಾಖೆ ಕೈಗೊಂಡಿದ್ದರೂ ಸಹ ವಿಪರೀತ ಮಳೆ ಬೀಳುವುದರಿಂದ ಪ್ರಯೋಜ ವಾಗುತ್ತಿರಲಿಲ್ಲ.  ಆದರೆ ಸರ್ಕಾರ ಶಿವಮೊಗ್ಗದ ವಿಮಾನ ನಿಲ್ದಾಣದಿಂದ ಬಾಳೆಹೊನ್ನೂರು ರಂಬಾಪುರಿ ಪೀಠ ಹಾಗೂ ಶೃಂಗೇರಿವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರೂ. 35 ಕೋಟಿ ಹಣ ಬಿಡುಗಡೆ ಮಾಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಇದರಿಂದಾಗಿ ರಸ್ತೆಗಳ ಕಾಮಗಾರಿ ಪ್ರಾರಂಭವಾಗಿದ್ದು ಸಂಪೂರ್ಣ ಡಾಂಬರೀಕರಣ ಕಾರ್ಯ ನಡೆಯುತ್ತಿದೆ.

 

ಅಲ್ಲದೆ ರಸ್ತೆಯ ಎರಡು ಕಡೆ ವಿಸ್ತರಣೆ ಮಾಡಲಾಗಿದೆ. ತುಂಬಾ ತಿರುವು ಇರುವ ಸ್ಥಳಗಳಲ್ಲಿ ರಸ್ತೆಯನ್ನು ನೇರಗೊಳಿಸಲಾಗಿದೆ. ಉಬ್ಬಿನಿಂದ ಕೂಡಿದ ರಸ್ತೆಗಳನ್ನು ಸಾಕಷ್ಟು ಸಮತಟ್ಟಾಗಿಸುವ ಕಾರ್ಯ ನಡೆದಿದೆ. ಇದರಿಂದ ಎದುರಿನಿಂದ ಬರುವ ವಾಹನಗಳು ಸುಲಭವಾಗಿ ಕಾಣುತ್ತವೆ ಹಾಗೂ ರಸ್ತೆ ವಿಸ್ತರಣೆಯಾಗಿರುವುದರಿಂದ ಎದುರಿನ ವಾಹನಗಳಿಗೆ ದಾರಿ ಬಿಟ್ಟು ಕೊಡಲು ಸಾಧ್ಯವಾಗಿದೆ.ಈ ಬಗ್ಗೆ ಪ್ರಜಾವಾಣಿ ಜತೆ ಮಾತನಾಡಿದ ಶಾಸಕ ಡಿ.ಎನ್.ಜೀವರಾಜ್, ಶಿವಮೊಗ್ಗದಿಂದ ಬಾಳೆಹೊನ್ನೂರಿನವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಏಪ್ರಿಲ್ ಒಳಗೆ ಮುಗಿಸುವ ಗುರಿ ಹೊಂದಲಾಗಿದೆ. ಪ್ರಮುಖ ರಸ್ತೆಯ ಅಭಿವೃದ್ಧಿಯ ಜತೆಗೆ ಗ್ರಾಮೀಣ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಸರ್ಕಾರ ಕ್ಷೇತ್ರಕ್ಕೆ ರೂ.15ಕೋಟಿ ಬಿಡುಗಡೆ ಮಾಡಿದ್ದು ಕಾಮಗಾರಿ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದರು. 

              

ತಾಲ್ಲೂಕಿನ ವ್ಯಾಪ್ತಿಯಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಬಗ್ಗೆ ಮಾಹಿತಿ ನೀಡಿದ ಲೋಕೋಪಯೋಗಿ ಎಂಜಿನಿಯರ್ ರವಿಚಂದ್ರ ಅವರು, ವಿಶೇಷ ಅನುದಾನದಲ್ಲಿ ಎನ್.ಆರ್.ಪುರದ ಬಿ.ಎಚ್.ಕೈಮರದಿಂದ  ಬಾಳೆಹೊನ್ನೂರು, ಚಿಕ್ಕಗ್ರಹಾರ ಹಾಗೂ ಕುದುರೆಗುಂಡಿವರೆಗಿನ ರಸ್ತೆಗೆ ಒಟ್ಟು ರೂ.15 ಕೋಟಿ ಬಿಡುಗಡೆಯಾಗಿದೆ.ಎನ್.ಆರ್.ಪುರದ ಬೈಪಾಸ್ ರಸ್ತೆಯಿಂದ ಉಂಬ್ಳೆಬೈಲಿನವರೆಗೆ ರೂ.10ಕೋಟಿ, ಉಂಬ್ಳೆಬೈಲು ಶಿವಮೊಗ್ಗ ವಿಮಾನ ನಿಲ್ದಾಣದವರೆಗೆ ರಸ್ತೆಗೆ ರೂ. 3.50 ಕೋಟಿ, ಬಾಳೆ ಹೊನ್ನೂರು ಶೃಂಗೇರಿ ರಸ್ತೆ ಅಭಿವೃದ್ಧಿಗೆ ರೂ.6.50 ಕೋಟಿ ಬಿಡುಗಡೆಯಾಗಿದೆ. ಈಗಾಗಲೇ ಮುದುಗುಣಿ ಗ್ರಾಮದವರೆಗೆ ರಸ್ತೆ ಕಾಮಗಾರಿ ಮುಗಿದಿದ್ದು ಮಾರ್ಚ್ ಒಳಗೆ ಬಾಳೆಹೊನ್ನೂರಿನವರೆಗೆ ಕಾಮಗಾರಿ ಮುಗಿಯಲಿದೆ ಎಂದರು.ಈ ಭಾಗದಲ್ಲಿ ರಸ್ತೆಗಳು ಅಭಿವೃದ್ಧಿ ಹೊಂದುತ್ತಿರುವುದಕ್ಕೆ ಪ್ರಯಾಣಿಕರು ಹಾಗೂ ವಾಹನ ಚಾಲಕರು ಸಂತಸ ವ್ಯಕ್ತಪಡಿಸಿದ್ದು ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಲು ಶ್ರಮಿಸಿದ ಶಾಸಕ ಡಿ.ಎನ್.ಜೀವರಾಜ್ ಅವರನ್ನು ಅಭಿನಂದಿಸಿದ್ದಾರೆ.   

    

ಕೆ.ವಿ.ನಾಗರಾಜ್

ಪ್ರತಿಕ್ರಿಯಿಸಿ (+)