ಗುರುವಾರ , ಮೇ 6, 2021
31 °C

ತಾಲ್ಲೂಕು ಸಾಹಿತ್ಯ ಸಮ್ಮೇಳನ ನಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಜಿಲ್ಲಾ ಸಾಹಿತ್ಯ ಸಮ್ಮೇಳನ ಮುಗಿದ ಬೆನ್ನಲ್ಲೇ ಕನ್ನಡ ಸಾಹಿತ್ಯ ಪರಿಷತ್ತಿನ ಧಾರವಾಡ ತಾಲ್ಲೂಕು ಸಮ್ಮೇಳನ ಇದೇ 15ರಂದು ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ನಡೆಯಲಿದೆ. ಲೇಖಕಿ ಡಾ.ಹೇಮಾ ಪಟ್ಟಣಶೆಟ್ಟಿ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.ನಗರದ ಸಾಹಿತ್ಯ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಾಲ್ಲೂಕು ಕಸಾಪ ಅಧ್ಯಕ್ಷ ಗುರು ತಿಗಡಿ, `ಸಮ್ಮೇಳನವನ್ನು ಅಖಿಲ ಕರ್ನಾಟಕ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಅವರು ಉದ್ಘಾಟಿಸಲಿದ್ದು, ಉಪ್ಪಿನ ಬೆಟಗೇರಿಯ ಕುಮಾರ ವಿರೂಪಾಕ್ಷ ಸ್ವಾಮೀಜಿ ಸಾನಿಧ್ಯ ವಹಿಸುವರು.ವಾರ್ತಾ ಮತ್ತು ಮೂಲಸೌಕರ್ಯ ಇಲಾಖೆ ಸಚಿವ ಸಂತೋಷ ಲಾಡ್ `ನಾನು ಯಾರು' ಹಾಗೂ ಶಾಸಕ ವಿನಯ ಕುಲಕರ್ಣಿ `ರಾಮ ರಾಜ್ಯವೋ? ರಾವಣ ರಾಜ್ಯವೋ' ಎಂಬ ನಾಟಕ ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ. ಸಂಸದ ಪ್ರಹ್ಲಾದ ಜೋಶಿ ಮತ್ತಿತರರು ಭಾಗವಹಿಸಲಿದ್ದಾರೆ.15ರಂದು ಬೆಳಿಗ್ಗೆ 10ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಅದಕ್ಕೂ ಮುನ್ನ ಬೆಳಿಗ್ಗೆ 8.30ಕ್ಕೆ ಸಾಹಿತ್ಯ ಭವನದ ಆವರಣದಲ್ಲಿ ಧ್ವಜಾರೋಹಣ ನಡೆಯಲಿದೆ. ಉದ್ಘಾಟನಾ ಕಾರ್ಯಕ್ರಮದ ಬಳಿಕ ಮಧ್ಯಾಹ್ನ 12.30ಕ್ಕೆ ಮೊದಲ ಗೋಷ್ಠಿ `ಧಾರವಾಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಅನನ್ಯತೆ' ಕುರಿತು ಅನಿಲ ದೇಸಾಯಿ, ಡಾ.ವೈ.ಎಂ.ಭಜಂತ್ರಿ ಮಾತನಾಡುವರು. ಮಧ್ಯಾಹ್ನ 2.30ಕ್ಕೆ ಕವಿಗೋಷ್ಠಿ ನಡೆಯಲಿದ್ದು 12 ಜನ ಕವಿಗಳು ಕವಿತೆಗಳನ್ನು ವಾಚಿಸಲಿದ್ದಾರೆ.ಮಧ್ಯಾಹ್ನ 3.30ಕ್ಕೆ `ಶಿಕ್ಷಣದಲ್ಲಿ ಕನ್ನಡ ಮಾಧ್ಯಮದ ಸವಾಲುಗಳು' ಎಂಬ ಗೋಷ್ಠಿ ನಡೆಯಲಿದೆ. ಹಿರಿಯ ವಕೀಲ ಬಸವಪ್ರಭು ಹೊಸಕೇರಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಸಹನಿರ್ದೇಶಕ ಎಂ.ಪಿ.ದೇಶಪಾಂಡೆ ವಿಷಯ ಮಂಡನೆ ಮಾಡುವರು. ಸಿಸ್ಲೆಪ್ ಸಂಸ್ಥೆಯ ಹಿರಿಯ ಸಹಾಯಕ ನಿರ್ದೇಶಕ ಆರ್.ಎಸ್.ಮುಳ್ಳೂರ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್.ಬಿ.ಬಿಂಗೇರಿ, ಗಿರೀಶ ಪದಕಿ ಪ್ರತಿಕ್ರಿಯೆ ನೀಡುವರು' ಎಂದು ಹೇಳಿದರು.`ಡಾ.ಹೇಮಾ ಪಟ್ಟಣಶೆಟ್ಟಿ ಅವರ ಬದುಕು-ಬರಹ ಕುರಿತು ಸಂವಾದ ಸಂಜೆ 5ಕ್ಕೆ ನಡೆಯಲಿದೆ. ಬಸು ಬೇವಿನಗಿಡದ, ಚನ್ನಪ್ಪ ಅಂಗಡಿ ವಿಷಯ ಮಂಡನೆ ಮಾಡಲಿದ್ದು, ಸಂವಾದದಲ್ಲಿ ಡಾ.ಶಿವಾನಂದ ಶೆಟ್ಟರ, ನಿಂಗಣ್ಣ ಕುಂಟಿ, ರಾಮಚಂದ್ರ ಪಾಟೀಲ ಹಾಗೂ ಮಹಾಂತೇಶ ನವಲಕಲ್ಲ ಭಾಗವಹಿಸುವರು. ಕಸಾಪ ಕೇಂದ್ರ ಸಮಿತಿಯು ಸಮ್ಮೇಳನ ಆಯೋಜನೆಗೆ ಒಂದು ಲಕ್ಷ ರೂಪಾಯಿ ಅನುದಾನ ನೀಡಿದ್ದು, ಆ ಹಣದಲ್ಲೇ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ. ಆದರೂ ಸುಮಾರು 20 ಸಾವಿರ ರೂಪಾಯಿ ಹೆಚ್ಚುವರಿ ಖರ್ಚು ಬರಬಹುದು' ಎಂದು ತಿಗಡಿ ನುಡಿದರು.`ಸಂಜೆ 6ಕ್ಕೆ ಸಮಾರೋಪ ಕಾರ್ಯಕ್ರಮ ನಡೆಯಲಿದ್ದು, ಕವಯತ್ರಿ ರೂಪಾ ಹಾಸನ ಸಮಾರೋಪ ನುಡಿಗಳನ್ನಾಡಲಿದ್ದಾರೆ. ಡಾ.ಹೇಮಾ ಪಟ್ಟಣಶೆಟ್ಟಿ ಅಧ್ಯಕ್ಷೀಯ ಭಾಷಣ ಮಾಡಲಿದ್ದು, ಹೊಸತು ಪತ್ರಿಕೆ ಸಂಪಾದಕ ಡಾ.ಸಿದ್ಧನಗೌಡ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ' ಎಂದು ಹೇಳಿದರು.ಶಂಕರ ಹಲಗತ್ತಿ, ಅನಿಲ ದೇಸಾಯಿ ಇತರರು ಗೋಷ್ಠಿಯಲ್ಲಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.