ಮಂಗಳವಾರ, ಮೇ 11, 2021
21 °C

ತಾಳವಾಡಿಯ ನೆನಪಿನ ಬುತ್ತಿ ಬಿಚ್ಚಿಟ್ಟ ಶಿವಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಚಿತ್ರನಟ ಶಿವರಾಜ್‌ಕುಮಾರ್ ಸಮಾವೇಶದ ಕೇಂದ್ರಬಿಂದು ವಾಗಿದ್ದರು. ಜನಪದ ಕಲಾ ತಂಡಗಳ ಮೆರವಣಿಗೆಯಲ್ಲಿ ಪಾಲ್ಗೊಂಡು ಜನರತ್ತ ಕೈಬೀಸಿದರು. ರಸ್ತೆಯ ಇಕ್ಕೆಲ ಗಳಲ್ಲಿ ನಿಂತಿದ್ದ ನಾಗರಿಕರು ಶಿವಣ್ಣ ಅವರತ್ತ ಕೈಬೀಸಿ ಪುಳಕಿತರಾದರು.ಮೆರವಣಿಗೆಯು ವೇದಿಕೆ ಬಳಿಗೆ ಬಂದಾಗ ಸೂರ್ಯ ಕಾದು ಕೆಂಡವಾಗಿದ್ದ. ಬಿಸಿಲಿನ ಝಳ ಲೆಕ್ಕಿಸದೆ ಸಾವಿರಾರು ಸಂಖ್ಯೆಯಲ್ಲಿ ನಾಗರಿಕರು ಕುರ್ಚಿಗಳಲ್ಲಿ ಆಸೀನರಾಗಿದ್ದರು. ಶಿವಣ್ಣ ಭಾಷಣ ಮಾಡಲು ಮೈಕ್ ಹಿಡಿದಾಗ ಸಭಿಕರ ಸಂತಸವೂ ಎಲ್ಲೆ ಮೀರಿತು.`ತಮಿಳುನಾಡಿನ ಚೆನ್ನೈನಲ್ಲಿ ಸಿನಿಮಾ ಇಂಡಸ್ಟ್ರಿ ಕೇಂದ್ರೀಕೃತವಾಗಿತ್ತು. ಹೀಗಾಗಿ, ಅಪ್ಪಾಜಿ ಕೂಡ ಅಲ್ಲಿಯೇ ಇದ್ದರು. ನಾನು ಚೆನ್ನೈನಲ್ಲಿಯೇ ವಿದ್ಯಾಭ್ಯಾಸ ಮಾಡಿದೆ. ತಮಿಳು ಮತ್ತು ಕನ್ನಡ ಭಾಷೆ ಎರಡನ್ನೂ ಚೆನ್ನಾಗಿ ಓದಿ ಬರೆಯಬಲ್ಲೆ. ತಾಳವಾಡಿ ಸಮೀಪದ ಗಾಜನೂರಿಗೆ ರಜೆಯಲ್ಲಿ ಬರುತ್ತಿದ್ದೆವು.

 

ಹಲವು ದಿನಗಳವರೆಗೆ ಅಲ್ಲಿಯೇ ವಾಸ್ತವ್ಯ ಹೂಡುತ್ತಿದ್ದೆವು. ತಾಳವಾಡಿ ಸಂಪೂರ್ಣವಾಗಿ ನನಗೆ ಗೊತ್ತಿದೆ. ಇಲ್ಲಿ ಎಂದಿಗೂ ಜಗಳ ನಡೆದಿಲ್ಲ. ಅದನ್ನು ನಾನು ಕೇಳಿಯೂ ಇಲ್ಲ~ ಎಂದಾಗ ಸಭಿಕರ ಕರತಾಡನ ಮುಗಿಲು ಮುಟ್ಟಿತು.

ಬಳಿಕ ಶಿವಣ್ಣನ ಭಾಷಣ ಭಾಷಾ ಸಾಮರಸ್ಯ ಕಾಪಾಡುವತ್ತ ಹೊರಳಿತು.`ರಾಜಕಾರಣಿಗಳು ನದಿ ನೀರು ಹಂಚಿಕೆ ಇತ್ಯಾದಿ ಸಮಸ್ಯೆ ಬಗೆಹರಿಸಿಕೊಳ್ಳು ತ್ತಾರೆ. ಅದರ ಬಗ್ಗೆ ನಾವು ತಲೆಕೆಡಿಸಿ ಕೊಳ್ಳಬೇಕಿಲ್ಲ. ಎಲ್ಲರೂ ಒಂದಾಗಿ ಬದುಕುವುದು ಮುಖ್ಯ~ ಎಂದರು.`ಅಪ್ಪಾಜಿ ಗಾಜನೂರಿಗೆ ಕರೆದು ಕೊಂಡು ಹೋಗುವಂತೆ ಕೇಳುತ್ತಿದ್ದರು. ಅದು ಕೊನೆಯವರೆಗೂ ಸಾಧ್ಯವಾಗ ಲಿಲ್ಲ. ತಾಳವಾಡಿ ನನ್ನ ಮೆಚ್ಚಿನ ಊರು. ಈ ಸಮಾವೇಶ ಮುಗಿಸಿ ಬೆಂಗಳೂರಿಗೆ ಹೋಗಲು ದುಃಖವಾಗುತ್ತದೆ~ ಎಂದರು ಹ್ಯಾಟ್ರಿಕ್ ಹಿರೋ.ಜನರ ಒತ್ತಾಯದ ಮೇರೆಗೆ ಗಂಧದಗುಡಿ ಚಿತ್ರದ `ನಾವಾಡುವ ನುಡಿಯೇ ಕನ್ನಡ ನುಡಿ...~ ಹಾಡಿನ ಚರಣ ಹೇಳಿದರು. ಬಳಿಕ ಜನುಮದ ಜೋಡಿ ಚಿತ್ರದ `ಮಣಿ ಮಣಿಗೊಂದು ದಾರ...~ ಹಾಡು ಹಾಡಿದರು. ಸಭಿಕರ ಉತ್ಸಾಹ ಕಂಡು ಮೈಲಾರಿ ಚಿತ್ರದ ಟೈಟಲ್ ಸಾಂಗ್ ಕೂಡ ಹಾಡಿದರು. `ಕುರಿ, ಕೋಳಿನ ಶನಿವಾರ... ಕೊಯಂಗಿಲ್ಲ...~ ಎಂದಾಗ ನಾಗರಿಕರ ಚಪ್ಪಾಳೆ ಸದ್ದು ಅನುರಣಿಸಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.