ಸೋಮವಾರ, ಜನವರಿ 20, 2020
26 °C

ತಿಂದಿದ್ದೆಲ್ಲವೂ ಜೀರ್ಣ!

ಅಮಿತ್ ಎಂ.ಎಸ್ Updated:

ಅಕ್ಷರ ಗಾತ್ರ : | |

ಡಿಸ್ಕವರಿ ಚಾನೆಲ್‌ನ ವೀಕ್ಷಕರಿಗೆ ಬಿಯರ್ ಗ್ರಿಲ್ಸ್ ಚಿರಪರಿಚಿತ. `ಮ್ಯಾನ್ ವರ್ಸಸ್ ವೈಲ್ಡ್~ ಎಂಬ ಮೈನವಿರೇಳಿಸುವ ಕಾರ್ಯಕ್ರಮದಿಂದ ಗ್ರಿಲ್ಸ್ ಅತಿ ಜನಪ್ರಿಯ. ವಿಶ್ವದ ಮೂಲೆ ಮೂಲೆಯ ರಾಷ್ಟ್ರಗಳಲ್ಲಿ, ಮಾನವರು ವಾಸಿಸಲು ಸಾಧ್ಯವೇ ಇಲ್ಲದಂತಹ ಸ್ಥಳಗಳಿಗೆ ಹೋಗಿ ಕೈಗೆ ಸಿಕ್ಕಿದ್ದನ್ನು ತಿಂದು ಜೀರ್ಣಿಸಿಕೊಂಡು ಮನುಷ್ಯ ಹೀಗೂ ಬದುಕಬಹುದು ಎನ್ನುವ ಈತನ ಕಾರ್ಯಕ್ರಮದ ಬಗ್ಗೆ ತಕರಾರು, ಟೀಕೆಗಳಿವೆ. 37ರ ಹರೆಯದ ಈ ವಿಲಕ್ಷಣ ವ್ಯಕ್ತಿ ಜೀವನದುದ್ದಕ್ಕೂ ಇಂಥಹದ್ದೇ ಬದುಕನ್ನು ಸವೆಸಿದ್ದು.ಫ್ರೀಫಾಲ್ ಪ್ಯಾರಶ್ಯೂಟಿಂಗ್‌ನ ಅಪಘಾತದಲ್ಲಿ 4,900 ಮೀಟರ್ ಎತ್ತರದಿಂದ ಕೆಳಗೆ ಬಿದ್ದಿದ್ದ ಗ್ರಿಲ್ಸ್ ಇನ್ನುಮುಂದೆ ನಡೆದಾಡುವುದೇ ಅಸಾಧ್ಯ ಎಂದು ವೈದ್ಯರು ಹೇಳಿದ್ದರು. ಆದರೆ ಶೀಘ್ರದಲ್ಲೇ ಸುಧಾರಿಸಿಕೊಂಡ ಗ್ರಿಲ್ಸ್ ಅದಾದ 18 ತಿಂಗಳಿನಲ್ಲಿಯೇ ವಿಶ್ವದ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟನ್ನು ಏರುವ ತನ್ನ ಬಾಲ್ಯದ ಕನಸನ್ನು ನನಸಾಗಿಸಿಕೊಂಡ. ಆಗ ಆತನಿಗೆ ಕೇವಲ 23 ವರ್ಷ ವಯಸ್ಸು. ಬೆಟ್ಟವೊಂದನ್ನು ಏರುವಾಗ ಬಿದ್ದು ಕಾಲುಕಳೆದುಕೊಂಡಿದ್ದ ಸ್ನೇಹಿತ ಸಹಾಯಾರ್ಥ ಥೇಮ್ಸ ನದಿಯ 22 ಮೈಲು ದೂರವನ್ನು ಬಾತ್‌ಟಬ್ ಒಂದರಲ್ಲಿ ಬೆತ್ತಲಾಗಿ ಕುಳಿತು ಕ್ರಮಿಸಿದ್ದು ಈತನ ಹುಚ್ಚು ಸಾಹಸಗಳಲ್ಲಿ ಒಂದು ಉದಾಹರಣೆಯಷ್ಟೆ.ನೆಲದಿಂದ ಸುಮಾರು 7,600 ಮೀಟರ್ ಎತ್ತರದಲ್ಲಿ ಬಿಸಿ ಬಲೂನಿನಲ್ಲಿ ಕುಳಿತು ಅತಿ ಹೆಚ್ಚು ಬಾರಿ ಡಿನ್ನರ್ ಪಾರ್ಟಿ ಮಾಡಿದ್ದು ಗ್ರಿಲ್ಸ್ ದಾಖಲೆ. 200 ಬಾರಿ ಪ್ಯಾರಾಚೂಟ್‌ನಿಂದ ಕೆಳಕ್ಕೆ ಧುಮುಕಿದ್ದು, ಅತಿ ಸಾಮಾನ್ಯ ದೋಣಿಯಲ್ಲಿ ಉತ್ತರ ಅಟ್ಲಾಂಟಿಕ್‌ಅನ್ನು ದಾಟಿದ್ದು, ಹೀಗೆ ಇಂತದ್ದೇ ಹಲವು ರೋಮಾಂಚನಕಾರಿ ಸಾಹಸಗಳ ಒಡೆಯನೀತ.

ಲಾರಾ ಸಾಗರ ಯಾನ


ನೆದರ್‌ಲೆಂಡ್‌ನ ಬಾಲೆ ಲಾರಾ ಡೆಕ್ಕರ್ ಈಗ ಸುದ್ದಿಯಲ್ಲಿರುವಾಕೆ. ಹಡಗನ್ನೇರಿ ಒಬ್ಬಂಟಿಯಾಗಿ ವಿಶ್ವಪರ್ಯಟನೆ ಮಾಡಿರುವ 16ರ ಈ ಹುಡುಗಿ ಅತಿ ಚಿಕ್ಕವಯಸ್ಸಿನ ನಾವಿಕಳೆಂಬ ವಿಶ್ವದಾಖಲೆ ನಿರ್ಮಿಸಿದ್ದಾಳೆ.

 

14ನೇ ವಯಸ್ಸಿನಲ್ಲಿದ್ದಾಗಲೇ ತನ್ನ ಪ್ರೀತಿಯ `ಗುಪ್ಪಿ~ ಹಡಗಿನಲ್ಲಿ ವಿಶ್ವಪರ್ಯಟನೆ ಮಾಡಲು ಮುಂದಾದವಳು ಈ ಷೋಡಶಿ. ಆದರೆ ಡಚ್ ನ್ಯಾಯಾಲಯ ಈಕೆ ಅಪ್ರಾಪ್ತೆ ಎಂಬ ಕಾರಣಕ್ಕೆ ಅನುಮತಿ ನಿರಾಕರಿಸಿದ್ದರಿಂದ ಆಗ ಅದು ಸಾಧ್ಯವಾಗಿರಲಿಲ್ಲ. ಕೊನೆಗೆ ಕಾನೂನು ಸಮರ ನಡೆಸಿದ ಲಾರಾ ಅದರಲ್ಲಿ ಜಯಗಳಿಸಿದಳು.

 

2011ರ ಜನವರಿ 20ರಂದು ಸೇಂಟ್ ಮಾರ್ಟಿನ್ ಕೆರೆಬಿಯನ್ ದ್ವೀಪದಿಂದ ಸಾಗರದಲ್ಲಿ ವಿಶ್ವಪರ್ಯಟನೆ ಹೊರಟ ಲಾರಾ 2012ರ ಜನವರಿ 22ರಂದು ಮತ್ತೆ ತಾಯ್ನೆಲದಲ್ಲಿ ಕಾಲಿರಿಸಿದ್ದಾಳೆ. ಅತಿ ಚಿಕ್ಕ ವಯಸ್ಸಿನಲ್ಲಿ ಏಕಾಂಗಿಯಾಗಿ ಹಡಗಿನಲ್ಲಿ ವಿಶ್ವ ಪ್ರದಕ್ಷಿಣೆ ಈಕೆ ಮುರಿದಿರುವುದು ಆಸ್ಟ್ರೇಲಿಯಾದ ಜೆಸ್ಸಿಕಾ ವ್ಯಾಟ್ಸನ್ ಎಂಬಾಕೆಯ ದಾಖಲೆಯನ್ನು.

ದುರ್ಗದ ಸ್ಪೈಡರ್‌ಮ್ಯಾನ್

ಚಿತ್ರದುರ್ಗ ಎಂದ ಕೂಡಲೇ ನೆನಪಿಗೆ ಬರುತ್ತಿದ್ದದ್ದು ಅಲ್ಲಿನ ಕಲ್ಲಿನ ಕೋಟೆ. ಈಗ ಕಲ್ಲಿನ ಕೋಟೆಗಿಂತಲೂ ಮಿಗಿಲಾಗಿ ನೆನಪಿಗೆ ಬರುವುದು ಜ್ಯೋತಿ ರಾಜು ಎಂಬ ಹೆಸರು. ನಿಂತು ನೋಡಿದರೆ ದಿಗಿಲು ಹುಟ್ಟಿಸುವ ಎತ್ತರದ ಕಲ್ಲಿನ ಕೋಟೆಯನ್ನು ಲೀಲಾಜಾಲವಾಗಿ ಹತ್ತುವ ಸಾಹಸಿ ಜ್ಯೋತಿರಾಜು ಈಗ ದೇಶವಿದೇಶಗಳಲ್ಲಿ ಪ್ರಸಿದ್ಧ.

 

ಕೇವಲ ಕೈಕಾಲುಗಳನ್ನು ಬ್ಯಾಲೆನ್ಸ್ ಮಾಡಿ ಸುಮಾರು 300 ಅಡಿ ಎತ್ತರದ ಕಲ್ಲಿನ ಕಟ್ಟಡವನ್ನು ಸರಾಗವಾಗಿ ಏರಬಲ್ಲ ಜ್ಯೋತಿರಾಜು `ಕೋತಿ ರಾಜು~, `ಇಂಡಿಯನ್ ಸ್ಪೈಡರ್‌ಮ್ಯಾನ್~ ಎಂದೂ ವಿಖ್ಯಾತಿ.ಚಕಚಕನೆ ಕೋಟೆಯನ್ನೇರುವ ಜ್ಯೋತಿರಾಜು ಕೋಟೆಯ ಮಧ್ಯಭಾಗದಲ್ಲೇ ತಲೆಕೆಳಗು ಮಾಡಿ ನಿಲ್ಲುತ್ತಾ, ಲಾಗಹಾಕುತ್ತಾ ಮೈನವಿರೇಳಿಸುವ ಸಾಹಸಗಳನ್ನು ಮಾಡುತ್ತಾರೆ.ತಮಿಳುನಾಡು ಮೂಲದವರಾದ ಜ್ಯೋತಿರಾಜು ಜೀವನದ ಮೇಲಿನ ಜಿಗುಪ್ಸೆಯಿಂದ ಸಾಯಲು ಹೊರಟವರು. ಮೇಲಿನಿಂದ ಕೆಳಗೆ ಹಾರಲು ದುರ್ಗದ ಕೋಟೆಯನ್ನು ಏರಿದಾಗ ಕೆಳಗೆ ನೆರೆದಿದ್ದ ಪ್ರವಾಸಿಗರಿಂದ ಸಿಕ್ಕಿದ್ದು ಚಪ್ಪಾಳೆ. ಬಳಿಕ ಅವರ ಬದುಕಿನ ಗತಿ ಬದಲಾದದ್ದು ಈಗ ಇತಿಹಾಸ.

ಪ್ರತಿಕ್ರಿಯಿಸಿ (+)