ತಿನ್ನುವ ಹಕ್ಕಿದೆ ಬಿಸಾಡುವ ಹಕ್ಕಿಲ್ಲ
ಬಸವಕಲ್ಯಾಣ: `ತಿನ್ನುವ ಹಕ್ಕಿದೆ ಬಿಸಾಡುವ ಹಕ್ಕಿಲ್ಲ~ ಎಂಬುದನ್ನು ಪ್ರತಿ ಶಾಲೆಯ ಬಿಸಿಯೂಟದ ಅಡುಗೆ ಕೋಣೆಯ ಬಾಗಿಲಿನ ಮೇಲ್ಭಾಗದಲ್ಲಿ ಬರೆಯುವುದು ಕಡ್ಡಾಯ ಎಂದು ಉಪನ್ಯಾಸಕ ಸಿ.ಶ್ರೀಧರ ಹೇಳಿದರು.
ಇಲ್ಲಿನ ಹಳೆಯ ತಹಸೀಲ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡ ತಾಲ್ಲೂಕಿನ ಎಸ್ಡಿಎಂಸಿ ಅಧ್ಯಕ್ಷರ ಮತ್ತು ಬಿಸಿಯೂಟ ಅಡುಗೆಯವರ ತರಬೇತಿ ಶಿಬಿರದಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಬಿಸಿಯೂಟದ ಯೋಜನೆ ಸುವ್ಯವಸ್ಥಿತವಾಗಿ ನಡೆಯುತ್ತಿದೆ. ಹಾಗೆ ನೋಡಿದರೆ, ಇಲ್ಲಿನ ಮಕ್ಕಳಿಗೆ ಅನ್ನದ ಅವಶ್ಯಕತೆ ಅಷ್ಟಾಗಿ ಇಲ್ಲ. ಆದರೆ ರಾಜಸ್ತಾನ, ಸಿಕ್ಕಿಂ ರಾಜ್ಯದಲ್ಲಿ ಆಹಾರದ ಕೊರತೆ ಇದೆ. ಅಲ್ಲಿನ ಮಕ್ಕಳು ಮಧ್ಯಾಹ್ನದ ಊಟ ಯಾವಾಗ ಸಿಗುತ್ತದೆ ಎಂದು ಕಾಯುತ್ತಿರುತ್ತಾರೆ ಎಂದರು.
ಬಿಸಿಯೂಟಕ್ಕಾಗಿ ಪೊರೈಸಲಾದ ಅಕ್ಕಿಯ ಕಾಳಜಿ ತೆಗೆದುಕೊಂಡು ಆಗಾಗ ಅವುಗಳನ್ನು ಮತ್ತು ಅಡುಗೆ ಪಾತ್ರೆಗಳನ್ನು ಸ್ವಚ್ಛಗೊಳಿಸಬೇಕು. ಅಡುಗೆ ಕೋಣೆಯಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಬೇಕು. ಅಡುಗೆ ಅನಿಲದ ಸಿಲೆಂಡರ್ 14.2 ಕೆಜಿ ತೂಗುತ್ತದೆಯೇ ಎಂಬುದನ್ನು ಪ್ರತಿಸಲ ಪರಿಶೀಲಿಸಬೇಕು. ಉತ್ತಮ ತರಕಾರಿ ಬಳಸಬೇಕು. ಮಕ್ಕಳಿಗೆ ಸ್ವಚ್ಛ ಕುಡಿಯುವ ನೀರು ಕೊಡಬೇಕು ಎಂದು ಸಲಹೆ ಕೊಟ್ಟರು. ಜಿಲ್ಲಾ ಪಂಚಾಯಿತಿಯಿಂದ ಅನುದಾನ ಬಿಡುಗಡೆ ಆಗಲು ವಿಳಂಬ ಆಗಿದ್ದರಿಂದ ಬಿಸಿಯೂಟವನ್ನು ಈ ತಿಂಗಳಿನಿಂದ ಆರಂಭಿಸಲಾಗಿದೆ. ಬೇಸಿಗೆಯಲ್ಲಿ ಕೆಲಸ ಮಾಡಿದವರ ಗೌರವಧನ ಕೊಡಲಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಅಗ್ನಿಶಾಮಕ ಠಾಣೆ ಸಬ್ ಇನ್ಸ್ಪೆಕ್ಟರ್ ಚಂದ್ರಕಾಂತ ಬೊಕ್ಕೆ ಮಾತನಾಡಿ ಗ್ಯಾಸ ಸಿಲೆಂಡರ್ ಸುರಕ್ಷಿತವಾಗಿ ಬಳಸುವ ವಿಧಾನ ತಿಳಿಸಿದರು. ಒಲೆಯಲ್ಲಿಯೂ ಹೆಚ್ಚಿನ ಬೆಂಕಿ ಇದ್ದರೆ ಅಪಾಯ ಸಂಭವಿಸುತ್ತದೆ ಎಂದರು. ಬಿಸಿಯೂಟದ ಅಧಿಕಾರಿ ಸುಕೇಶಕುಮಾರ ಉಪಸ್ಥಿತರಿದ್ದರು. ಶಿಬಿರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಿಸಿಯೂಟದ ತಾಲ್ಲೂಕು ಅಧಿಕಾರಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ, ಗ್ಯಾಸ್ ಏಜೆನ್ಸಿಯವರು ಉಪಸ್ಥಿತರಿರುವರು ಎಂದು ತಿಳಿಸಲಾಗಿತ್ತು. ಆದರೂ ಅವರು ಬಂದಿಲ್ಲ. ಹಾಗಾದರೆ ಸಮಸ್ಯೆಗಳ ಬಗ್ಗೆ ಯಾರಿಗೆ ಹೇಳಬೇಕು ಎಂದು ಕೆಲ ಎಸ್ಡಿಎಂಸಿ ಅಧ್ಯಕ್ಷರು ಅತೃಪ್ತಿ ವ್ಯಕ್ತಪಡಿಸಿದರು. ತಾಲ್ಲೂಕಿನಲ್ಲಿ ಎಲ್ಲಿಯೂ ಬಿಸಿಯೂಟದ ವ್ಯವಸ್ಥೆ ಸರಿಯಾಗಿ ನಡೆಯುತ್ತಿಲ್ಲ ಎಂದು ಅಮೃತ ಹುಲಗುತ್ತಿ ದೂರಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.