ಗುರುವಾರ , ಏಪ್ರಿಲ್ 15, 2021
31 °C

ತುಂಗಾತೀರ ಬೆಳಗಿದ `ತುಂಗಾರತಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದಾದ `ಮಂತ್ರಾಲಯ'ದ ತುಂಗಭದ್ರಾ ನದಿಯಲ್ಲಿ ಬುಧವಾರ ರಾತ್ರಿ ನಡೆದ ಕಾರ್ತಿಕ ದೀಪೋತ್ಸವ `ತುಂಗಾರತಿ'ಯು ಹದಿನೈದು ದಿನದ ಹಿಂದಷ್ಟೇ ಆಚರಿಸಿದ `ದೀಪಾವಳಿ'ಯನ್ನು ಮತ್ತೆ ನೆನಪಿಸಿತು.

ರಾಯರು ನೆಲೆಸಿದ ಕ್ಷೇತ್ರದ ಅಂಚಿನಲ್ಲಿ ತಣ್ಣಗೆ ಹರಿಯುವ ಈ ನದಿಯಲ್ಲಿ ಹುಣ್ಣಿಮೆ ರಾತ್ರಿಯಲ್ಲಿ ಪ್ರಕಾಶಮಾನ ಬೆಳಕು ಹರಡುತ್ತ ಸಾಗುತ್ತಿದ್ದ ಸಾವಿರಾರು `ದೀಪಗಳು' ತುಂಗಾರತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಭಕ್ತರಿಗೆ ಕೃತಾರ್ಥ ಭಾವನೆ ತಂದಂತಿತ್ತು.

ನದಿಯಲ್ಲಿ ಬೆಳಕು ಹರಡುತ್ತ ಸಾಗುತ್ತಿದ್ದ ದೀಪಗಳ ದಿಬ್ಬಣ ಒಂದೆಡೆಯಾದರೆ  ಬಾನಂಗಳದಲ್ಲಿ ಬಗೆ ಬಗೆಯ ಪಟಾಕಿ, ಬಾಣ ಬಿರುಸುಗಳು ವಿವಿಧ ಬಗೆಯ ಬಣ್ಣಗಳಲ್ಲಿ ಚಿತ್ತಾರ ಮೂಡಿಸಿ ಕಣ್ಣು ಕೋರೈಸಿದವು. ದೀಪಾವಳಿ ಹಬ್ಬದ ದುಪ್ಪಟ್ಟು ಸಂಭ್ರಮವನ್ನು ಭಕ್ತರಿಗೆ ತಂದಿತು.

ಕರ್ನಾಟಕ, ಆಂಧ್ರಪ್ರದೇಶ ಮೊದಲಾದೆಡೆಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಸಂಜೆ ನದಿ ತೀರದಲ್ಲಿ ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಮಠ ಹಾಗೂ ಆಂಧ್ರಪ್ರದೇಶ ಸರ್ಕಾರದ ಧರ್ಮದತ್ತಿ ಇಲಾಖೆ ಮತ್ತು ಹಿಂದೂ ಧರ್ಮ ಪರಿಕ್ಷಣಾ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ಧ ಕಾರ್ಯಕ್ರಮವನ್ನು ಮಠದ ಪೀಠಾಧಿಪತಿ ಶ್ರೀ ಸುಯತೀಂದ್ರತೀರ್ಥ ಶ್ರೀಪಾದಂಗಳು ನದಿಗೆ ಪೂಜೆ ಸಲ್ಲಿಸಿ ತುಂಗಾರತಿ ಮಾಡಿ ಉದ್ಘಾಟಿಸಿದರು.

ಶ್ರೀಗಳ ನುಡಿ: `ತುಂಗಾರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಭಕ್ತರೇ ಧನ್ಯರು. ಆಂಧ್ರಪ್ರದೇಶ ಸರ್ಕಾರವು ಮಹಾನದಿಗಳಿಗೆ ಆರತಿ, ವಿಶೇಷ ಪೂಜೆ ಸಲ್ಲಿಸುವ ಕಾರ್ಯ ಯೋಜನೆ ರೂಪಿಸಿದೆ. ರಾಯರು ನೆಲೆಸಿದ ಮಂತ್ರಾಲಯ ಕ್ಷೇತ್ರದ ಅಂಚಿನಲ್ಲಿ ಹರಿಯುವ ತುಂಗಭದ್ರಾ ನದಿಗೆ `ತುಂಗಾರತಿ' ಪೂಜೆ ಕಾರ್ಯ ಕೈಗೊಳ್ಳಲು ಮುಂದಾಗಿದ್ದು ಪ್ರಶಂಸನೀಯ. ಆಂಧ್ರಪ್ರದೇಶದ ಧರ್ಮದತ್ತಿ ಇಲಾಖೆಯ ಈ ಕಾರ್ಯ ಶ್ಲಾಘನೀಯ' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯದ ವಿವಿಧ ಭಾಗಗಳಿಂದ 35ಕ್ಕೂ ಹೆಚ್ಚು ಭಜನಾ ಮಂಡಳಿಗಳು ತುಂಗಾರತಿಯಲ್ಲಿ ಪಾಲ್ಗೊಂಡಿದ್ದವು. ಪೀಠಾಧಿಪತಿಗಳ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಎನ್. ಸುಯಮೀಂದ್ರಾಚಾರ್ಯ, ಶ್ರೀಮಠದ ವಿದ್ವಾಂಸರು, ಆಂಧ್ರಪ್ರದೇಶದ ಧರ್ಮದತ್ತಿ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

ಬೆಳ್ಳಿ ಆನೆ, ಚಿನ್ನದ ಅಂಬಾರಿ ಸಮರ್ಪಣೆ: ಪೀಠಾಧಿಪತಿಗಳು ಬೆಳ್ಳಿ ಆನೆ ಹಾಗೂ ಚಿನ್ನದ ಅಂಬಾರಿಯನ್ನು ಶ್ರೀ ರಾಘವೇಂದ್ರಸ್ವಾಮಿಗಳಿಗೆ ಸಮರ್ಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.